Mandya; ಮಂಡ್ಯ ರಾಜಕೀಯ ಚಿತ್ರಣ ಬದಲಿಸಿದ ಬಿಜೆಪಿ, ಜೆಡಿಎಸ್ ಮೈತ್ರಿ!
ಮಂಡ್ಯ, ಫೆಬ್ರವರಿ 13: ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಲವು ರಾಜಕೀಯ ಲೆಕ್ಕಾಚಾರಗಳನ್ನು ಬದಲಾವಣೆ ಮಾಡಿದೆ. ಮಂಡ್ಯ ಕ್ಷೇತ್ರದ ಸೀಟು ಯಾವ ಪಕ್ಷಕ್ಕೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ ಈ ಹೊಸ ಮೈತ್ರಿ ಮಂಡ್ಯದ ರಾಜಕೀಯ ಲೆಕ್ಕಾಚಾರವನ್ನು ಬದಲಿಸಿದೆ.
ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ನೇತೃತ್ವದಲ್ಲಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮೈಸೂರು ಕ್ಲಸ್ಟರ್ ವಿಭಾಗದ ಪ್ರಮುಖರ ಸಭೆ ನಡೆಯಿತು. ಈ ಸಭೆಯಲ್ಲಿಯೂ ಮಂಡ್ಯ ಸೀಟಿನ ಕುರಿತು ಹಲವು ಪ್ರಶ್ನೆಗಳಿಗೆ ಯಾವುದೇ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ.

ಲೋಕಸಭೆ ಚುನಾವಣೆಯನ್ನು ಅಧಿಕ ಅಂತರದಿಂದ ಗೆಲ್ಲಲು ಮೈತ್ರಿಕೂಟದ ಎರಡು ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಆದರೆ ಮಂಡ್ಯ ಸೀಟು ಯಾರಿಗೆ? ಎಂಬ ಗುಟ್ಟನ್ನು ಅಮಿತ್ ಶಾ ಬಿಟ್ಟುಕೊಟ್ಟಿಲ್ಲ. ಸೀಟು ಯಾರಿಗೆ ಸಿಗಲಿದೆ?, ಅಭ್ಯರ್ಥಿ ಯಾರು? ಎಂಬುದು ಎಲ್ಲರ ಪ್ರಶ್ನೆ.
ಮಂಡ್ಯದಲ್ಲಿ 2019ರ ಚಿತ್ರಣ ಈಗಿಲ್ಲ: ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳು. ಬಿಜೆಪಿ ಇನ್ನೂ ಜಿಲ್ಲೆಯಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಿತು. ಬಿಜೆಪಿ ಅಭ್ಯರ್ಥಿಯನ್ನೇ ಹಾಕದೇ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಬೆಂಬಲಿಸಿತು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರೋಧಿಸಿದ ಅನೇಕ ಕಾಂಗ್ರೆಸ್‌ನವರು ಸಹ ಅಂಬರೀಶ್ ಅವರ ಕಾರಣಕ್ಕಾಗಿ ಸುಮಲತಾ ಬೆಂಬಲಿಸಿದರು. ಸುಮಲತಾ ಗೆದ್ದರು. ಆದರೆ ಈ ಬಾರಿ ಚುನಾವಣಾ ಚಿತ್ರಣ ಅಷ್ಟು ಸುಲಭವಾಗಿಲ್ಲ. ಅದರಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಯ ಕಾರಣಕ್ಕೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
2014ರಲ್ಲಿ ಜೆಡಿಎಸ್‌ನ ಸಿ. ಎಸ್. ಪುಟ್ಟರಾಜು 524,370 ಮತಗಳನ್ನು ಪಡೆದು ಮಂಡ್ಯದಲ್ಲಿ ಗೆದ್ದರು. ಕಾಂಗ್ರೆಸ್‌ನ ರಮ್ಯಾ 518,852 ಮತ ಪಡೆದರು. ಬಿಜೆಪಿಯ ಪ್ರೊ. ಬಿ. ಶಿವಲಿಂಗಯ್ಯ 86,993 ಮತ ಪಡೆದು 3ನೇ ಸ್ಥಾನ ಪಡೆದರು.
2009ರ ಚುನಾವಣೆಯಲ್ಲಿ ಜೆಡಿಎಸ್‌ನ ಚೆಲುವರಾಯಸ್ವಾಮಿ 384,443 ಮತಗಳನ್ನು ಪಡೆದು ಗೆದ್ದರು. ಕಾಂಗ್ರೆಸ್‌ನ ಅಂಬರೀಶ್ 360,943 ಮತ ಪಡೆದರು. ಬಿಜೆಪಿಯ ಎಲ್. ಆರ್. ಶಿವರಾಮೇ ಗೌಡ 144,875 ಮತಗಳನ್ನು ಪಡೆದರು. ಆದರೆ ಈ ಬಾರಿ ಮೈತ್ರಿಕೂಟದಿಂದ ಅಭ್ಯರ್ಥಿ ಯಾರು? ಎಂಬುದು ಪ್ರಶ್ನೆ.
ಮಂಡ್ಯ ಜೆಡಿಎಸ್ ಪಾಲಾಗಲಿದೆ. ಎಚ್. ಡಿ. ಕುಮಾರಸ್ವಾಮಿ ಅಥವ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಇದೆ. ಭಾನುವಾರ ಹಾಸನದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಕುಮಾರಸ್ವಾಮಿ ಮಂಡ್ಯ, ಹಾಸನದಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಮತ್ತೊಂದು ಕಡೆ ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿರುವ ಹಾಲಿ ಸಂಸದೆ ಸುಮಲತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಬಿ. ಎಲ್. ಸಂತೋಷ್ ಮುಂತಾದ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಕ್ಷೇತ್ರವನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಎಂದು ಚರ್ಚೆ ನಡೆದಿದೆ. ಜೆಡಿಎಸ್‌ನ ಜಿಲ್ಲಾಧ್ಯಕ್ಷ ಡಿ. ರಮೇಶ್, "ಯಾರೇ ಅಭ್ಯರ್ಥಿಯಾದರೂ ಸಹ ನಾವು ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ. ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದೆ" ಎಂದು ಹೇಳಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಪಡೆದ ಕಾಂಗ್ರೆಸ್ ಮಂಡ್ಯದಲ್ಲಿ ಈ ಮೈತ್ರಿಕೂಟದ ಎದುರಾಳಿಯಾಗಿ ಯಾರನ್ನು ಕಣಕ್ಕಿಳಿಸಲಿದೆ? ಎಂಬುದು ಸದ್ಯದ ಪ್ರಶ್ನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ಮೈಸೂರಿನ ಪಕ್ಕದ ಮಂಡ್ಯವನ್ನು ಗೆಲ್ಲಲು ಕಾಂಗ್ರೆಸ್‌ನ ತಂತ್ರವೇನು? ಎಂಬುದು ಕುತೂಹಲ ಮೂಡಿಸಿದೆ.












Click it and Unblock the Notifications