ಮೈಶುಗರ್ ಕಾರ್ಖಾನೆ ಆ.31ರಿಂದ ಪ್ರಾಯೋಗಿಕ ಚಾಲನೆ: ಸಚಿವ ಮುನೇನಕೊಪ್ಪ
ಮಂಡ್ಯ, ಆಗಸ್ಟ್, 29: ಮೈಶುಗರ್ ಕಾರ್ಖಾನೆಗಿದ್ದ ಎಲ್ಲ ವಿಘ್ನಗಳು ನಿವಾರಣೆ ಆಗಿವೆ. ಆಗಸ್ಟ್ 31ಕ್ಕೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದರು.
ಕಬ್ಬು ಅರೆಯಲು ಸಜ್ಜಾಗಿರುವ ಕಾರ್ಖಾನೆಯ ಎಲ್ಲ ಘಟಕಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಮೈಶುಗರ್ ಕಾರ್ಖಾನೆಯ ಕಷ್ಟದ ದಿನಗಳು ಮುಗಿಯುವ ಹಂತ ತಲುಪಿದ್ದು, ಆಗಸ್ಟ್ 31ಕ್ಕೆ ಕಾರ್ಖಾನೆಗೆ ಕಬ್ಬು ತರಲು ತಿಳಿಸಿದ್ದೇವೆ. ಅಂದೇ ಪ್ರಾಯೋಗಿಕವಾಗಿ ಪ್ರಾರಂಭಕ್ಕೆ ಚಾಲನೆ ನೀಡಲಾಗುವುದು. ಕಳೆದ ಹಲವಾರು ದಿನಗಳಿಂದ ಈ ಭಾಗದ ರೈತರ ಹೋರಾಟದ ಫಲವಾಗಿ ಮತ್ತೆ ಮೈಶುಗರ್ ಕಾರ್ಖಾನೆಯ ವೈಭವ ಆರಂಭವಾಗಿದೆ. ಸೆಪ್ಟೆಂಬರ್ 10ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕೃತವಾಗಿ ಕಾರ್ಖಾನೆ ಆರಂಭಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಮೈಶುಗರ್ ಪುನರಾರಂಭ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಅನುದಾನದ ಕೊರೆತ ಉಂಟಾಗದಂತೆ ಎಚ್ಚರ ವಹಿಸಿದ್ದೇವೆ. ಹಿಂದಿನ ವ್ಯವಸ್ಥೆ ಹಾಗೂ ಇಂದಿನ ಘಟನೆಗಳು ನಮ್ಮ ಕಣ್ಣ ಮುಂದೆ ಇವೆ. ಕೆಲವು ತಾಂತ್ರಿಕ ವರದಿಯನ್ನು ಆಧಾರವಾಗಿಟ್ಟುಕೊಂಡು ಎಲ್ಲ ರೀತಿಯ ಸಹಕಾರದಿಂದ ಕಾರ್ಖಾನೆ ಪುನಶ್ಚೇತನಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದರಂತೆ ನಮ್ಮ ಎಲ್ಲ ಅಧಿಕಾರಿಗಳು ಸಜ್ಜುಗೊಳಿಸಿದ್ದಾರೆ ಎಂದರು.

ಮೈಶುಗರ್‌ನ ಹಣ ಪೋಲು ತಡೆಗೆ ಕ್ರಮ
ನಷ್ಟದ ಹಾದಿಯಲ್ಲಿ ಹೋಗದ ರೀತಿಯಲ್ಲಿ ತಾಂತ್ರಿಕ ವರದಿ ಮತ್ತು ಹಣಕಾಸಿನ ವ್ಯವಸ್ಥೆಯನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ಬೆಳೆಸಬೇಕು. ಉತ್ತಮ ರೀತಿಯಲ್ಲಿ ಕಾರ್ಖಾನೆ ನಡೆಯುವ ಉದ್ದೇಶದಿಂದ ಎಲ್ಲೆಲ್ಲಿ ಹಣ ಪೋಲಾಗುತ್ತಿತ್ತು. ಯಾವ ಘಟಕದಲ್ಲಿ ನಷ್ಟ ಆಗುತ್ತಿತ್ತು ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಹಾಗೂ ಹಣ ಬೇಕಾಬಿಟ್ಟಿಯಾಗಿ ಪೋಲಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಭಾಗದ ರೈತರಿಗೆ ನೀಡಿದ್ದ ಮಾತಿನಂತೆ ಕಾರ್ಖಾನೆಯನ್ನು ಪ್ರಾರಂಭಿಸಿದ್ದೇವೆ. ಮುಂದೆ ಕಾರ್ಖಾನೆ ಎಂದಿಗೂ ನಿಲ್ಲದ ರೀತಿಯಲ್ಲಿ ನಡೆಸಿ ನಾವೇನು ಎಂಬುದನ್ನು ತೋರಿಸುತ್ತೇವೆ ಎಂದು ಹೇಳಿದರು.

ಕಾರ್ಖಾನೆಗಿದ್ದ ಅಡೆತಡೆಗಳ ನಿವಾರಣೆ
ನಿಗಧಿತ ಅವಧಿಯೊಳಗೆ ಕಾರ್ಖಾನೆ ಪ್ರಾರಂಭ ಮಾಡಲು ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿದ್ದವು.
ಯಂತ್ರೋಪಕರಣಗಳನ್ನು ಬೇರೆಡೆಗೆ ಕೊಂಡೊಯ್ದು ದುರಸ್ಥಿ ಮಾಡಬೇಕಾದ ಪರಿಸ್ಥಿತಿಯೂ ಎದುರಾಗಿತ್ತು. ನಮ್ಮ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಿಂದಾಗಿ ಎಲ್ಲ ಅಡೆ ತಡೆಗಳನ್ನೂ ನಿವಾರಿಸಿಕೊಂಡು ಕಾರ್ಖಾನೆ ಪ್ರಾರಂಭಿಸುತ್ತಿದ್ದೇವೆ. ಇದಕ್ಕೆ ಸ್ವಲ್ಪ ತಡವಾಗಿದೆ.
ಮೈಶುಗರ್ ಕರ್ನಾಟಕಕ್ಕೆ ಹೆಮ್ಮೆಯ ಕಾರ್ಖಾನೆ ಆಗಿದೆ. ಇದನ್ನು ಹೇಗಾದರೂ ಮಾಡಿ ಪುನಶ್ಚೇತನ ಮಾಡಬೇಕು ಎಂಬುದು ಮುಖ್ಯಮಂತ್ರಿಯವರ ಉದ್ದೇಶ ಆಗಿತ್ತು. ತಾಂತ್ರಿಕ ಸಮಿತಿ ರಚಿಸಿ ಅಧ್ಯಯನ ಮಾಡಿ ವರದಿ ತೆಗೆದುಕೊಂಡು ಇದರೊಂದಿಗೆ ಹಣಕಾಸಿನ ವ್ಯವಸ್ಥೆಯನ್ನೂ ನೋಡಿಕೊಂಡಿದ್ದೆವು. ಹಾಗೂ ಯಾವುದೇ ರೀತಿಯ ಕೊರತೆ ಆಗದಂತೆ ಎಚ್ಚರವಹಿಸಿ ಕಾರ್ಖಾನೆ ಪುನರಾರಂಭಕ್ಕೆ ಯೋಜನೆ ರೂಪಿಸಿದ್ದೇವು. ಪ್ರಾಮಾಣಿಕ ಅಧಿಕಾರಿಗಳನ್ನು ಕಾರ್ಖಾನೆಗೆ ನಿಯೋಜನೆ ಮಾಡಿ ಎಲ್ಲವನ್ನೂ ಸಜ್ಜುಗೊಳಿಸಲಾಗಿತ್ತು. ಅದರಿಂದಾಗಿ ಯಾವುದೇ ತೊಂದರೆಗಳಿಲ್ಲದೇ ಕಾರ್ಖಾನೆ ಆರಂಭವಾಗುತ್ತಿದೆ ಎಂದರು.

ಎಥೆನಾಲ್ ಉತ್ಪಾದನೆಗೆ ಅನುಮತಿ
ಕಾರ್ಖಾನೆಯಲ್ಲಿ ವಿದ್ಯುತ್ ಘಟಕ, ಡಿಸ್ಟಿಲರಿ ಇದೆ. ಇದನ್ನು ಉಪಯೋಗಿಸಿಕೊಂಡು ಲಾಭದಾಯಕವಾಗಿ ಕಾರ್ಖಾನೆಯನ್ನು ಕೊಂಡೊಯ್ಯಲಾಗುವುದು. ಎಥನಾಲ್ ಘಟಕ ಸ್ಥಾಪಿಸಲಾಗುವುದು. ರಾಜ್ಯದಲ್ಲಿರುವ 33 ಕಾರ್ಖಾನೆಗಳಿಗೆ ಎಥೆನಾಲ್ ಉತ್ಪಾದನೆಗೆ ಅನುಮತಿ ನೀಡಲಾಗಿದೆ. ಶೀಘ್ರದಲ್ಲೇ ಎಲ್ಲ ಕಾರ್ಖಾನೆಗಳೂ ಎಥೆನಾಲ್ ಘಟಕಗಳನ್ನು ಅಳವಡಿಸಿಕೊಂಡು ಕಾರ್ಯಾರಂಭ ಮಾಡಲಾಗುವುದು. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಆರ್‌ಪಿ ದರವನ್ನು ನೀಡಲಾಗುವುದು. ರೈತರಿಗೆ ಯಾವುದೇ ತೊಂದರೆಗಳು ಆಗದಂತೆ ಕ್ರಮ ವಹಿಸಲಾಗುವುದು ಎಂದರು.

ಸೆಸ್ಕ್‌ಗೆ ಪಾವತಿಸಿದ ಹಣ ಎಷ್ಟು?
ಮೈಶುಗರ್ ವ್ಯಾಪ್ತಿಯಲ್ಲಿ ಸದ್ಯ 4 ಲಕ್ಷ ಟನ್ ಕಬ್ಬು ಒಪ್ಪಿಗೆ ಮಾಡಿಕೊಳ್ಳಲಾಗಿದೆ. ಇನ್ನೂ ಹೆಚ್ಚುವರಿ ಕಬ್ಬಿನ ಅಗತ್ಯವಿದ್ದು, ಈ ಹಿಂದೆ ಮೈಶುಗರ್ ವ್ಯಾಪ್ತಿಯಲ್ಲಿ ಬರಬಹುದಾದ ಕಬ್ಬನ್ನೂ ಪಡೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ವ್ಯವಹರಿಸಿ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಇತರ ಕಾರ್ಖಾನೆಗಳಿಗೂ ನಷ್ಟವಾಗದ ರೀತಿಯಲ್ಲಿ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.
ಕಾರ್ಖಾನೆಯ ವಿದ್ಯುತ್ ಬಿಲ್ ಬಾಕಿಯಿದ್ದು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ 31 ಕೋಟಿ ರೂಪಾಯಿಗಳನ್ನು ಪಾವತಿ ಮಾಡಲಾಗಿದೆ. ಉಳಿದಂತೆ ಕಾರ್ಖಾನೆಗೆ ಅಗತ್ಯವಾಗಿರುವ ಬಂಡವಾಳವನ್ನೂ ಹಂತ ಹಂತವಾಗಿ ಪರಿಶೀಲನೆ ನಡೆಸಿ ಹಣ ಬಿಡುಗಡೆಗೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಪಾಟೀಲ್ ಅಪ್ಪಾ ಸಾಹೇಬ, ಪ್ರಧಾನ ವ್ಯವಸ್ಥಾಪಕ ಬಿ.ಸಿ. ಶಿವಾನಂದಮೂರ್ತಿ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ, ರೈತ ಮುಖಂಡರಾದ ಸುನಂದಾ ಜಯರಾಂ, ಕೆ.ಬೋರಯ್ಯ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications