Mandya: ಟಿಕೆಟ್ ಗೊಂದಲದ ನಡುವೆಯೂ ಚುನಾವಣೆಗೆ ಸಿದ್ಧತೆ ಆರಂಭಿಸಿದ ಸುಮಲತಾ
ಲೋಕಸಭಾ ಚುನಾವಣೆಗೆ ಮುನ್ನ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿರುವುದು ಮಂಡ್ಯ. ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಇಲ್ಲಿನ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದೆ. ಬಿಜೆಪಿಗೆ ಬೆಂಬಲ ನೀಡಿರುವ ಸಂಸದೆ ಸುಮಲತಾ ಇಲ್ಲಿಂದ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದರೆ, ಜೆಡಿಎಸ್ ನಾಯಕರು ಮಂಡ್ಯದಿಂದ ಸ್ಪರ್ಧಿಸಲು ಪೈಪೋಟಿ ನಡೆಸುತ್ತಿದೆ.
ಎಲ್ಲಾ ಗೊಂದಲದ ನಡುವೆ ಸಂಸದೆ ಸುಮಲತಾ ಚುನಾವಣೆಗೆ ಸಿದ್ಧತೆ ಆರಂಭಿಸಲು ತಯಾರಾಗಿದ್ದಾರೆ. ಶೀಘ್ರದಲ್ಲೇ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಪ್ರವಾಸ ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವಿಚಾರವಾಗಿ ನನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ನನ್ನ ಸ್ಪರ್ಧೆ ಕುರಿತು ಪಕ್ಷ ತೀರ್ಮಾನ ಮಾಡಬೇಕು. ನನ್ನ ಬೆಂಬಲಿಗರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ತಾಲ್ಲೂಕಿಗೆ ತೆರಳಿ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡುತ್ತೇನೆ. ಚುನಾವಣೆ ಸಂಬಂಧವೇ ಈ ಸಭೆ ಮಾಡುತ್ತಿದ್ದೇನೆ. ಇದರ ಬಗ್ಗೆ ಈಗಾಗಲೇ ರೂಪುರೇಷೆಗಳು ನಡೆಯುತ್ತಿವೆ. ನನ್ನ ಬೆಂಬಲಿಗರಿಗೆ ಯಾವುದೇ ಗೊಂದಲವಾಗಬಾರದು. ಅವರಲ್ಲಿ ವಿಶ್ವಾಸ ತುಂಬುವ ಸಲುವಾಗಿ ಸಭೆ ಮಾಡುತ್ತಿದ್ದೇನೆ ಎಂದರು.
ಪಕ್ಷದ ಸೂಚನೆಯಂತೆ ಕೆಲಸ
ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿದ್ದೆ, ಈಗ ಬೇರೆ ರೀತಿಯಲ್ಲಿ ಭೇಟಿ ಮಾಡುತ್ತೇನೆ. ಎಲ್ಲಾ ತಾಲ್ಲೂಕಿನ ಬೆಂಬಲಿಗರ ಜೊತೆ ಸಭೆ ನಡೆಸಿ ಚರ್ಚಿಸುತ್ತೇನೆ. ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ತಾಲ್ಲೂಕು ಪ್ರವಾಸ ಮಾಡುತ್ತೇನೆ. ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದು ಪ್ರಚಾರ ಆರಂಭಿಸುತ್ತೇನೆ ಎಂದರು.
ಐದು ವರ್ಷಗಳ ಕಾಲ ನಾನು ಪಕ್ಷೇತರ ಸಂಸದೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಈಗ ಹಾಗಿಲ್ಲ. ಪಕ್ಷದಿಂದ ಬರುವ ಸೂಚನೆಯ ಮೇಲೆ ಕೆಲಸ ಮಾಡಬೇಕಿದೆ. ಮಂಡ್ಯ ಎಲೆಕ್ಷನ್ ವಿಶೇಷವಾಗಿ ನಡೆಯುತ್ತೆ. ಕಳೆದ ಚುನಾವಣೆ ವೇಳೆ ಎದುರಾದ ಹಲವಾರು ಸವಾಲುಗಳನ್ನು ಎದುರಿಸಿ ಗೆದ್ದಿದ್ದೇನೆ. ಪಕ್ಷದಲ್ಲಿ ಹಿರಿಯರು ಇದ್ದಾರೆ. ಈಗ ಅವರು ನನಗೆ ರಾಜಕೀಯ ಮಾರ್ಗದರ್ಶನ ಮಾಡುತ್ತಾರೆಂಬ ನಂಬಿಕೆ ಇದೆ ಎಂದರು.
ದ್ವೇಷದ ರಾಜಕಾರಣ ಮಾಡಲ್ಲ
ಕುಮಾರಸ್ವಾಮಿ ಬಗ್ಗೆ ಸಂಸದೆ ಸುಮಲತಾ ಮೃದುಧೋರಣೆ ತಳೆದಿರುವ ಬಗ್ಗೆ ಕೇಳಿದಾಗ, ನಾನು ಯಾವತ್ತೂ ಯಾರನ್ನೂ ದ್ವೇಷ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿಕೊಂಡು ಟೀಕಿಸಿಲ್ಲ. ದ್ವೇಷದ ರಾಜಕಾರಣ ನನಗೆ ಗೊತ್ತಿಲ್ಲ. ನನ್ನ ರೆಕಾರ್ಡ್ ತೆಗೆದು ನೋಡಿ. ನಾನು ಎಲ್ಲೂ ತಪ್ಪು ಮಾತನಾಡಿಲ್ಲ. ಮೊದಲಿಂದಲೂ ನಾನು ಸಾಫ್ಟ್ ಎಂದು ಸಮಜಾಯಿಷಿ ನೀಡಿದರು.
ವಿಧಾನಸೌದದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ವಿಚಾರವಾಗಿ, ಇದು ಅತ್ಯಂತ ಖಂಡನಿಯ. ದೇಶ ಮೊದಲು. ನಂತರ ರಾಜಕೀಯ. ವಿಧಾನಸೌದ ಪ್ರಜಾಪ್ರಭುತ್ವದ ದೇವಾಲಯ ಎನ್ನುತ್ತೇವೆ. ಅಂತಹ ಜಾಗದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅನ್ನೋದು ತಪ್ಪು. ಯಾರೇ ಇರಲಿ ಯಾವುದೇ ಪಕ್ಷದವರಿದ್ದರೂ ಅದನ್ನು ಸಮರ್ಥನೆ ಮಾಡುವುದು ಖಂಡನಿಯ ವಿಷಯ. ರಾಜ್ಯ ಸರ್ಕಾರ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು.












Click it and Unblock the Notifications