ಬಿಜೆಪಿ ಇನ್ನೂ ನಾಲ್ಕು ವರ್ಷ ಕಮಿಷನ್ ಚಿಂತೆಯಲ್ಲೇ ಇರುತ್ತದೆ- ಸಚಿವ ಮಧು ಬಂಗಾರಪ್ಪ
ಮಂಡ್ಯ, ಆಗಸ್ಟ್ 30: ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ದೊಡ್ಡ ನಾಯಕರಾದ ಸಿದ್ದರಾಮಯ್ಯ, ದೇವರಾಜ ಅರಸು, ಬಂಗಾರಪ್ಪ, ವೀರಪ್ಪಮೊಯ್ಲಿ ಹಿಂದುಳಿದ ವರ್ಗಕ್ಕೆ ಹಲವಾರು ಯೋಜನೆ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಮಾತು ಕೊಟ್ಟಂತೆ ನಡೆಯುತ್ತಿದ್ದಾರೆ ಎಂದು ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು. ಕಮಿಷನ್ ತಿನ್ನಲು ಆಗುವುದಿಲ್ಲ ಅಂತಾ ಬಿಜೆಪಿಗೆ ಚಿಂತೆ ಎಂದು ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬಂದರೆ ಗ್ಯಾರಂಟಿ ಕ್ಲೋಸ್ ಮಾಡಿ ಕಮಿಷನ್ ಬಗ್ಗೆ ಚಿಂತೆ ಮಾಡೋದು ಇವರ ಕೆಲಸ. ಇದೇ ಯೋಚನೆಯಲ್ಲೇ ಇನ್ನೂ ನಾಲ್ಕು ವರ್ಷ ಬಿಜೆಪಿ ಇರುತ್ತದೆ. ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಅದು ಮುಂದುವರಿಯುತ್ತದೆ ಎಂದರು.

ಬಿಜೆಪಿ ರಾಜಭವನನ್ನ ದುರುಪಯೋಗ ಪಡಿಸಿಕೊಂಡಿರುವುದು ಎದ್ದು ಕಾಣುತ್ತದೆ. 12 ವರ್ಷದ ಹಿಂದೆ ತುಕ್ಕು ಹಿಡಿದಿರುವುದನ್ನ ತಂದು ಅದಕ್ಕೆ ಜೀವಕೊಡುವುದರಲ್ಲಿ ಅರ್ಥ ಇಲ್ಲ. ಸಿದ್ದರಾಮಯ್ಯ ಜೊತೆ ಶಾಸಕರು, ರಾಜ್ಯದ ಜನತೆ ಇದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಮುಂದಿನ ಚುನಾವಣೆಗೆ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರು ಎಂದು ಯಾರನ್ನೇ ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮಾಡಿದರೂ ತಾವು ಬೆಂಬಲ ನೀಡುವುದಾಗಿ ತಿಳಿಸಿದರು.
ಶಿಕ್ಷಣ ಸಚಿವರ ಮಂಡ್ಯ ಪ್ರವಾಸ
ಸದ್ಯ ಮಂಡ್ಯ ಪ್ರವಾಸದಲ್ಲಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಗರದ ಎ&ಎ ಕನ್ವೆನ್ಷನ್ ಹಾಲ್‌ನಲ್ಲಿ ಶಾಲಾ ಶಿಕ್ಷಣ ಇಲಾಖೆ ಮಂಡ್ಯ, ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್, ಇಂಡಿಯನ್ ಸೈನ್ಸ್ ರಿಸರ್ಚ್ ಆರ್ಗನೈಸೇಷನ್ ಹಾಗೂ ಅಧ್ಯಾಪನ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ "ಅಧ್ಯಾಪನ ವಿಜ್ಞಾನೋತ್ಸವ - 2024" ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಲ್ಲದೇ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳು, ಸ್ವಚ್ಛತೆ ಹಾಗೂ ಮಕ್ಕಳ ಹಾಜರಾತಿ ಬಗ್ಗೆ ಪರಿಶೀಲನೆ ನಡೆಸಿದರು. ಬಳಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಲಿಸಿದರು. ನಂತರ ಶಾಲೆಯ ಆಡಳಿತ ಮಂಡಳಿಯವರಿಗೆ ಆಹಾರದ ಗುಣಮಟ್ಟ ಕಾಪಾಡಿಕೊಂಡು ಹೋಗುವಂತೆ ಸಚಿವರು ಸೂಚಿಸಿದರು.












Click it and Unblock the Notifications