Melukote: ಶ್ರೀಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ರಾಜಮುಡಿ ಕಿರೀಟಧಾರಣೆ
ಮಂಡ್ಯ, ನವೆಂಬರ್ 21: ಕಾರ್ತಿಕ ಮಾಸದ ಬ್ರಹ್ಮೋತ್ಸವದ 4ನೇ ತಿರುನಾಳ್ ಅಂಗವಾಗಿ ಸೋಮವಾರ ರಾತ್ರಿ 7ಗಂಟೆಗೆ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಗೆ ರಾಜಮುಡಿ ಕಿರೀಟಧಾರಣ ಮಹೋತ್ಸವ ವೈಭವದಿಂದ ನೆರವೇರಿತು. ಆಡಂಬರವಿಲ್ಲದೆ ನಡೆದ ಐತಿಹಾಸಿಕ ಮಹೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.
ಮೈಸೂರು ದೊರೆ ರಾಜಒಡೆಯರ್ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಅಮೂಲ್ಯವಾದ ಕೆಂಪು ಮತ್ತು ಗುಲಾಬಿ ಬಣ್ಣದ ವಜ್ರಗಳಿಂದ ಕೂಡಿದ ರಾಜಮುಡಿ ಕಿರೀಟವನ್ನು ಶ್ರೀದೇವಿಭೂದೇವಿ ಸಮೇತನಾದ ಶ್ರೀಚೆಲುವನಾರಾಯಣಸ್ವಾಮಿಗೆ ತೊಡಿಸಿ ಮಹಾಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ಖಜಾನೆಯಿಂದ ಪೊಲೀಸ್ ಭದ್ರತೆಯಲ್ಲಿ ತಂದ ರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ಸಂಜೆ 6-30ರ ವೇಳೆಗೆ ಉಪವಿಭಾಗಾಧಿಕಾರಿ ನಂದೀಶ್ ನೇತೃತ್ವದಲ್ಲಿ ಸ್ಥಾನೀಕರು ಅರ್ಚಕ ಪರಿಚಾರಕರ ಸಮಕ್ಷಮ ಪಾರ್ಕಾವಣೆಮಾಡಲಾಯಿತು. ನಂತರ ವಿಶೇಷ ಪುಷ್ಪಾಲಂಕೃತನಾದ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ರಾಜಮುಡಿ ಕಿರೀಟ ಮತ್ತು ಗಂಡುಬೇರುಂಡ ಪದಕವನ್ನು ತೊಡಿಸಿ 7-30ಕ್ಕೆ ಮಹಾಮಂಗಳಾರತಿ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ತಮಿಳುನಾಡು ಸಂಸ್ಕೃತಿ, ಪ್ರವಾಸೋಧ್ಯಮ ಮತ್ತು ಮುಜರಾಯಿ ಇಲಾಖೆಯ ಕಾಂಚೀಪುರಂ ವಿಭಾಗದ ಜಂಟಿ ಆಯುಕ್ತೆ ವಾಗ್ಮತಿ, ಪಾಂಡವಪುರ ತಹಶೀಲ್ದಾರ್ ಶ್ರೇಯಸ್ಸ್ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಪಾರುಪತ್ತೇಗಾರರಾದ ಸ್ಥಾನೀಕಂ ಶ್ರೀನಿವಾಸ ನರಸಿಂಹನ್ ಗುರೂಜಿ, ಎಂ.ಎನ್ ಪಾರ್ಥಸಾರಥಿ ಮೇಲುಕೋಟೆ, ಇನ್ಸ್‌ಪೆಕ್ಟರ್ ಸಿದ್ಧಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ತಮಿಳುನಾಡಿನ ಸರ್ಕಾರದ ಪ್ರವಾಸೋಧ್ಯಮ, ಸಂಸ್ಕೃತಿ, ಹಾಗೂ ಮುಜರಾಯಿ ಇಲಾಖೆ ವಿಶೇಷ ಸರ್ಕಾರಿ ಆದೇಶ ಹೊರಡಿಸಿ ಪ್ರತಿವರ್ಷ ಕಳೆದ ವರ್ಷದಿಂದ ಚೆಲುವನಾರಾಯಣನಿಗೆ ರಾಜಮುಡಿ ಉತ್ಸವದಂದು ಪುಷ್ಪಕೈಂಕರ್ಯ, ವಸ್ತ್ರಮರ್ಯಾಧೆ ಆರಂಭಿಸಿದ್ದು ಈ ವರ್ಷವೂ ಮುಂದುವರೆಸಿ ಪ್ರತಿವರ್ಷವೂ ಈ ಸಂಪ್ರದಾಯ ಮುಂದುವೆರೆಯುವಂತೆ ಆದೇಶ ಮಾಡಿದೆ. ಮುಜರಾಯಿ ಇಲಾಖೆ ಸಚಿವ ಪಿ.ಕೆ ಶೇಖರ್ ಆಸಕ್ತಿಯ ಪರಿಣಾಮ ಈ ಸಂಪ್ರದಾಯ ಆರಂಭಗೊಂಡಿದೆ.
ನವೆಂಬರ್ 22 ರಂದು ತೊಟ್ಟಿಲ ಮಡುಜಾತ್ರೆ
ಮಹೋತ್ಸವದ 6ನೇ ದಿನವಾದ ನವೆಂಬರ್ 22ರಂದು ತೊಟ್ಟಿಲಮಡು ಜಾತ್ರೆ ಅಷ್ಠತೀರ್ಥೋತ್ಸವ ಬೆಳಗ್ಗೆ ಕಲ್ಯಾಣಿಯಲ್ಲಿ 8-30ಕ್ಕೆ ಆರಂಭವಾಗಲಿದೆ. ಅಂದು ಮುಂಜಾನೆ 5 ಗಂಟೆಯಿಂದಲೇ ದೇವಾಲಯದಲ್ಲಿ ಪೂಜಾಕೈಂಕರ್ಯಗಳು ಆರಂಭವಾಗಿ ಕಲ್ಯಾಣಿಗೆ ಚೆಲುವನಾರಾಯಣಸ್ವಾಮಿಯ ಪಾದುಕೆಗೆ ಪ್ರಥಮ ಅಭಿಷೇಕ ನೆರವೇರುತ್ತದೆ. ನಂತರ ಅಷ್ಠತೀರ್ಥಗಳಲ್ಲಿ ಅಭಿಷೇಕ ಸಂಜೆ 5ಗಂಟೆಯ ವೇಳೆಗೆ ವೈಕುಂಠ ಗಂಗೆಯಲ್ಲಿ ಸಮಾರೋಪ ಅಭಿಷೇಕ ನೆರವೇರಲಿದೆ.
ಮದುವೆಯಾಗಿ ಬಹುಕಾಲ ಮಕ್ಕಳಾಗದ ದಂಪತಿಗಳು ಮತ್ತು ಆರೋಗ್ಯಕರ ಮುವನ್ನು ಅಪೇಕ್ಷಿಸುವ ನವದಂಪತಿಗಳು ಹರಕೆ ಕಟ್ಟಿಕೊಂಡು ಮಡಿಲು ತುಂಬಿ ಮಹೋತ್ಸವದಲ್ಲಿ ಭಾಗಿಯಾಗುವುದು ತೊಟ್ಟಿಲಮಡು ಜಾತ್ರೆಯ ವಿಶೇಷವಾಗಿದೆ. ವೈದ್ಯರೂ ಕೈಚೆಲ್ಲಿದ ಎಷ್ಟೋ ಪ್ರಕರಣಗಳ ದಂಪತಿಗೆ ತೊಟ್ಟಿಲಭಾಗ್ಯ ದೊರೆತಿರುವ ಕಾರಣ ಮಹೋತ್ಸವದಲ್ಲಿ ಹರಕೆಕಟ್ಟಿಕೊಂಡು ಭಾಗವಹಿಸುವ ದಂಪತಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.












Click it and Unblock the Notifications