ಮಂಡ್ಯ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ : ಸದಸ್ಯರ ಮಕ್ಕಳ ಮೇಲೆ ಆಣೆ-ಪ್ರಮಾಣ
ಮಂಡ್ಯ, ಆಗಸ್ಟ್ 26: ಮಂಡ್ಯ ನಗರಸಭೆ ಚುನಾವಣೆಗೆ ಇನ್ನು ದಿನ ಗಣನೆ ಆರಂಭವಾಗಿದ್ದು, ನಗರಸಭೆಯ ಮೂವರು ಕಾಂಗ್ರೆಸ್‌ನ ಮೂವರು ಸದಸ್ಯರು ಅತೃಪ್ತಿ ವ್ಯಕ್ತಪಡಿಸಿ ಪ್ರತ್ಯೇಕವಾಗಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷದೊಳಗೆ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲವೆಂದು ಅಸಮಾಧಾನಗೊಂಡು ಸದಸ್ಯ ಟಿ.ಕೆ.ರಾಮಲಿಂಗು ಜೊತೆ ಇನ್ನಿಬ್ಬರು ಸದಸ್ಯರು ಬೇರೆಡೆ ತೆರಳಿರುವುದು ಅಧಿಕಾರ ಹಿಡಿಯುವುದಕ್ಕೆ ಕಾರ್ಯತಂತ್ರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರುವಂತೆ ಕಂಡುಬರುತ್ತಿದೆ ಎನ್ನಲಾಗಿದೆ.

ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರು ಕೈಕೊಟ್ಟರೆ ಮತ್ತು ಜೆಡಿಎಸ್-ಬಿಜೆಪಿ ಮೆ ತ್ರಿಕೂಟದವರು ಒಗ್ಗಟ್ಟು ಪ್ರದರ್ಶಿಸಿದರೆ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಕನಸಿನ ಮಾತಾಗಲಿದೆ. ಒಮ್ಮೆ ಜೆಡಿಎಸ್ ಪಕ್ಷದ ಜೊತೆಯಲ್ಲೇ ಇರುವಂತೆ ಕೆಲವು ಸದಸ್ಯರು ನಡೆದುಕೊಂಡು ಬಳಿಕ ಚುನಾವಣೆ ಸಮಯಕ್ಕೆ ನಾಲ್ಕೈದು ಮಂದಿ ತಟಸ್ಥರಾಗಿ ಉಳಿಯುವಂತಹ ಪರಿಸ್ಥಿತಿ ಎದುರಾದರೆ ಆ ಸಂಖ್ಯಾಬಲವನ್ನು ಸರಿದೂಗಿಸಿಕೊಳ್ಳುವುದಕ್ಕೆ ಈ ಮೂವರು ಕಾಂಗ್ರೆಸ್ ಸದಸ್ಯರನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸದಸ್ಯರೇ ಪ್ರತ್ಯೇಕವಾಗಿರಿಸಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಸ್.ಮಂಜು ಪುನರಾಯ್ಕೆಯಾಗುವುದಕ್ಕೆ ಕಾಂಗ್ರೆಸ್ ಪಕ್ಷದೊಳಗೆ ಕೆಲವರ ವಿರೋಧವಿರುವುದಾಗಿ ಹೇಳಲಾಗುತ್ತಿದೆ. ಎಚ್.ಎಸ್.ಮಂಜು ಮರು ಆಯ್ಕೆ ವಿರುದ್ಧ ಅಸಮಾಧಾನಗೊಂಡು ಮೂವರು ಕಾಂಗ್ರೆಸ್‌ನಿಂದ ಪ್ರತ್ಯೇಕವಾಗಿದ್ದಾರೆಂದು ಹೇಳಲಾಗುತ್ತಿದೆ. ಈ ಬೆಳವಣಿಗೆಗಳು ಸತ್ಯವಾಗಿದ್ದರೆ ಕಾಂಗ್ರೆಸ್ ಬಲ ಮತ್ತಷ್ಟು ಕುಸಿಯಲಿದ್ದು, ಅಧಿಕಾರ ಹಿಡಿಯುವುದು ಸುಲಭದ ಮಾತಲ್ಲ.
ಹಿರಿತನಕ್ಕೆ, ಪಕ್ಷನಿಷ್ಠೆಗೆ ರಾಜಕಾರಣದಲ್ಲಿ ಯಾವ ಬೆಲೆಯೂ ಇಲ್ಲ. ಬಡ ಸದಸ್ಯರನ್ನೂ ಯಾರೂ ಲೆಕ್ಕಕ್ಕಿಡುತ್ತಲೂ ಇಲ್ಲ. ನಮಗೆ ಯಾವುದೇ ಅವಕಾಶಗಳನ್ನು ನೀಡದಿರುವುದು ಬೇಸರ ಉಂಟುಮಾಡಿದೆ. ಹಾಗಾಗಿ ದೂರ ಉಳಿದಿದ್ದೇವೆ. ಹಾಗಂತ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದಲ್ಲ. ಚುನಾವಣೆಯಲ್ಲಿ ಭಾಗವಹಿಸುತ್ತೇವೆ. ಆದರೆ, ಬೆಂಬಲ ಯಾರಿಗೆ ಕೊಡಬೇಕು ಎಂಬುದನ್ನು ಅಲ್ಲೇ ನಿರ್ಧರಿಸುವುದಾಗಿ ಅತೃಪ್ತರು ಹೇಳುತ್ತಿದ್ದಾರೆ.

ಸದಸ್ಯರ ಮಕ್ಕಳ ಮೇಲೆ ಆಣೆ-ಪ್ರಮಾಣ
ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಮಯದಲ್ಲಿ ಯಾವುದೇ ಕಾರಣಕ್ಕೂ ಆಮಿಷಗಳಿಗೆ ಒಳಗಾಗಿ ಪಕ್ಷದ್ರೋಹವೆಸಗುವುದಿಲ್ಲವೆಂದು ಜೆಡಿಎಸ್ ಸದಸ್ಯರು ತಮ್ಮ ಮಕ್ಕಳ ಮೇಲೆ ಆಣೆ ಮಾಡಿದ್ದಾರೆ. ಪಕ್ಷದ ನಾಯಕರೇ ಆಣೆ-ಪ್ರಮಾಣ ಮಾಡಿಸಿ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಹಾಗಾಗಿ ಬಿಜೆಪಿ-ಜೆಡಿಎಸ್‌ನ ಒಬ್ಬನೇ ಒಬ್ಬ ಸದಸ್ಯ ಕೂಡ ಕಾಂಗ್ರೆಸ್ ಜೊತೆ ಕೈಜೋಡಿಸುವುದಿಲ್ಲವೆಂಬ ಮಾತುಗಳು ಸ್ಪಷ್ಟ ಧ್ವನಿಯಲ್ಲಿ ಕೇಳಿಬರುತ್ತಿವೆ.
ನಾಗಮಂಗಲ ಪುರಸಭೆ ನಂತರ ಕಾಂಗ್ರೆಸ್ ನಗರಸಭೆ ಗದ್ದುಗೆ ಮೇಲೆ ಕಣ್ಣಿಟ್ಟಿದೆ. ಬಹುಮತವನ್ನು ಹೊಂದಿದ್ದ ಜೆಡಿಎಸ್‌ನ್ನು ನಾಗಮಂಗಲ ಪುರಸಭೆ ಚುನಾವಣೆಯಲ್ಲಿ ಮಣಿಸಿದ ರೀತಿಯಲ್ಲೇ ಮಂಡ್ಯ ನಗರಸಭೆಯಲ್ಲೂ ಸೋಲುಣಿಸುವುದಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ನಿರೀಕ್ಷೆಯಂತೆ ಯಶಸ್ವಿಯಾಗುವುದೇ ಎನ್ನುವುದು ಕುತೂಹಲ ಕೆರಳಿಸಿದೆ.
ಮೊದಲ ಅವಧಿಯಲ್ಲಿ 20ನೇ ವಾರ್ಡ್‌ನಿಂದ ಜೆಡಿಎಸ್ ಸದಸ್ಯರಾಗಿ ಆಯ್ಕೆಯಾಗಿದ್ದ ಎಚ್.ಎಸ್.ಮಂಜು ಈಗ ಕಾಂಗ್ರೆಸ್ ಸೇರಿ ಮತ್ತೊಮ್ಮೆ ಅಧ್ಯಕ್ಷರಾಗುವುದಕ್ಕೆ ಹವಣಿಸುತ್ತಿದ್ದಾರೆ. ಪಕ್ಷೇತರರು ಹಾಗೂ ಜೆಡಿಎಸ್ ಪಕ್ಷದ ಕೆಲವರನ್ನು ಸೆಳೆದು ಅಧಿಕಾರ ಹಿಡಿಯುವುದಕ್ಕೆ ರಣತಂತ್ರ ರೂಪಿಸುತ್ತಿದ್ದಾರೆ.
ಆಗಸ್ಟ್ 28ಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಿಗದಿಯಾಗಿರುವುದರಿಂದ ಜೆಡಿಎಸ್ ಪಕ್ಷದ 17 ಸದಸ್ಯರು ಹಾಗೂ ಬಿಜೆಪಿಯ ಇಬ್ಬರು ಸದಸ್ಯರು ಸೇರಿ 19 ಮಂದಿ ಕೇರಳದ ಮುನ್ನಾರ್‌ನಲ್ಲಿ ವಾಸ್ತವ್ಯ ಹೂಡಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಆಮಿಷಗಳಿಗೆ ಒಳಗಾಗದೆ ಪಕ್ಷ ನಿಷ್ಠೆಯನ್ನು ಪ್ರದರ್ಶಿಸುತ್ತಿದ್ದಾರೆ.












Click it and Unblock the Notifications