ಮಂಡ್ಯ ಲೋಕಸಭೆ ಉಪ ಚುನಾವಣೆ : ಜೆಡಿಎಸ್‌ನಿಂದ ಅಚ್ಚರಿಯ ಹೆಸರು!
Recommended Video

ಮಂಡ್ಯ, ಅಕ್ಟೋಬರ್ 08 : ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದ್ದು, ಜೆಡಿಎಸ್ ಪಕ್ಷದ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.
ಅಕ್ಟೋಬರ್ 9ರಂದು ಉಪ ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳಲಿದೆ. ಅಕ್ಟೋಬರ್ 16 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅಕ್ಟೋಬರ್ 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅ.20 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ನವೆಂಬರ್ 3 ರಂದು ಮತದಾನ ನಡೆಯಲಿದೆ. ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.
ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್-ಜೆಡಿಎಸ್ ಮಂಡ್ಯ ಉಪ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳಲಿವೆ. ಜೆಡಿಎಸ್ ಅಭ್ಯರ್ಥಿ ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ಅಚ್ಚರಿ ಎಂಬಂತೆ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರ ಹೆಸರು ಉಪ ಚುನಾವಣೆಗೆ ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶಿವರಾಮೇಗೌಡ ಅವರ ಪರವಾಗಿ ಪ್ರಚಾರ ಆರಂಭವಾಗಿದೆ. ಜೆಡಿಎಸ್ ನಾಯಕರು ಇನ್ನೂ ಅಧಿಕೃತವಾಗಿ ಅಭ್ಯರ್ಥಿ ಯಾರು? ಎಂದು ಘೋಷಣೆ ಮಾಡಿಲ್ಲ.

ಜೆಡಿಎಸ್ ಸೇರಿದ್ದ ಶಿವರಾಮೇಗೌಡ
2018ರ ವಿಧಾನಸಭೆ ಚುನಾವಣೆಗೆ ಕೆಲವು ದಿನಗಳು ಇರುವಾಗ ಕಾಂಗ್ರೆಸ್ ಪಕ್ಷ ಬಿಟ್ಟಿದ್ದ ಸುರೇಶ್ ಗೌಡ ಮತ್ತು ಎಲ್.ಆರ್.ಶಿವರಾಮೇಗೌಡ ಅವರು ಜೆಡಿಎಸ್ ಸೇರಿದ್ದರು. ಸುರೇಶ್ ಗೌಡ ಅವರು ನಾಗಮಂಗಲ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಚೆಲುವರಾಯಸ್ವಾಮಿ ಅವರನ್ನು ಸೋಲಿಸಿದ್ದಾರೆ. ಶಿವರಾಮೇಗೌಡ ಅವರು ವಿಧಾನಪರಿಷತ್ತಿಗೆ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಅವರನ್ನು ಆಯ್ಕೆ ಮಾಡಿಲ್ಲ. ಈಗ ಅವರ ಹೆಸರು ಲೋಕಸಭೆ ಉಪ ಚುನಾವಣೆಗೆ ಕೇಳಿಬರುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ
'ಎಲ್.ಆರ್.ಶಿವರಾಮೇಗೌಡರಿಗೆ ಮಂಡ್ಯ ಲೋಕಸಭಾ ಟಿಕೆಟ್ ನೀಡಲೇ ಬೇಕು' ಎಂದು ಫೇಸ್‌ಬುಕ್‌ನಲ್ಲಿ ಪ್ರಚಾರ ಆರಂಭವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಸಹ ಕೇಳಿಬರುತ್ತಿದೆ.
ಲಕ್ಷ್ಮೀ ಅಶ್ವಿನ್ ಗೌಡ, ಸಚಿವ ಡಿ.ಸಿ.ತಮ್ಮಣ್ಣ ಪುತ್ರ ಸಂತೋಷ್ ಅವರ ಹೆಸರುಗಳು ಸಹ ಉಪ ಚುನಾವಣೆಗೆ ಕೇಳಿಬರುತ್ತಿದೆ. ಯಾರು? ಅಭ್ಯರ್ಥಿಯಾಗಲಿದ್ದಾರೆ? ಎಂಬುದು ಸದ್ಯಕ್ಕೆ ಕುತೂಹಲದ ವಿಚಾರ.

ನಿಖಿಲ್ ಹೇಳುವುದೇನು?
ಮಂಡ್ಯ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, 'ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಒತ್ತಡವಿದೆ. ಅನಿವಾರ್ಯವಾದರೆ ಸ್ಪರ್ಧೆ ಮಾಡುತ್ತೇನೆ. ಚುನಾವಣೆಗೆ ಸ್ಪರ್ಧೆ ಮಾಡಿದರೆ ಸಿನಿಮಾ, ರಾಜಕಾರಣ ಎರಡನ್ನೂ ನೋಡಿಕೊಂಡು ಹೋಗುತ್ತೇನೆ' ಎಂದು ಹೇಳಿದ್ದರು.

ಕಾಂಗ್ರೆಸ್ ಸ್ಪರ್ಧೆ ಇಲ್ಲ
ಕಾಂಗ್ರೆಸ್ ಪಕ್ಷದಲ್ಲಿ ಹಲವು ನಾಯಕರಿದ್ದಾರೆ. ಆದರೆ, ಮಂಡ್ಯದಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದಿಲ್ಲ. 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಮಾಜಿ ಶಾಸಕ ಚೆಲುವರಾಯಸ್ವಾಮಿ ಸ್ಪರ್ಧಿಸಬಹುದು ಎಂಬ ಸುದ್ದಿಗಳು ಹಬ್ಬಿದ್ದವು.
'ಮುಂದಿನ ಯಾವುದೇ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಮಂಡ್ಯ ಲೋಕಸಭೆ ಉಪ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿ.ಎಸ್.ಪುಟ್ಟರಾಜು ಗೆದ್ದಿದ್ದರು
2014ರ ಚುನಾವಣೆಯಲ್ಲಿ ಜೆಡಿಎಸ್‌ನ ಸಿ.ಎಸ್.ಪುಟ್ಟರಾಜು ಅವರು 524370 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಸ್ಪರ್ಧಿಸಿದ್ದರು 518852 ಮತ ಪಡೆದಿದ್ದರು. ಬಿಜೆಪಿಯಿಂದ ಪ್ರೊ.ಬಿ.ಶಿವಲಿಂಗಯ್ಯ ಸ್ಪರ್ಧಿಸಿ ಕೇವಲ 86,993 ಮತಗಳನ್ನು ಪಡೆದಿದ್ದರು.












Click it and Unblock the Notifications