ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ತಾತ್ಕಾಲಿಕ ಮುಂದೂಡಿಕೆ
ಮಂಡ್ಯ, ಜುಲೈ 26 : ಕೆ.ಆರ್.ಎಸ್. ಸುತ್ತಮುತ್ತ ಟ್ರಯಲ್ ಬ್ಲಾಸ್ಟಿಂಗ್ ಮಾಡಲು ಜಾರ್ಖಾಂಡ್‌ನಿಂದ ಕರೆಸಿದ್ದ ವಿಜ್ಞಾನಿಗಳ ತಂಡವನ್ನು ವಾಪಸ್ಸು ಕಳುಹಿಸಲು ನಿರ್ಧರಿಸಿರುವ ಜಿಲ್ಲಾಡಳಿತ ತಾತ್ಕಾಲಿಕವಾಗಿ ಪರೀಕ್ಷೆಯನ್ನು ಮುಂದೂಡಿದೆ.
ಸೋಮವಾರ ಟ್ರಯಲ್ ಬ್ಲಾಸ್ಟ್ ನಡೆಸಲು ಸಿದ್ಧತೆ ನಡೆಸುತ್ತಿರುವಾಗಲೇ ರೈತರು ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಜಿಲ್ಲಾಡಳಿತದ ನಡೆ ವಿರುದ್ಧ ಸಿಡಿದೆದ್ದಿದ್ದರು. ಪರೀಕ್ಷಾರ್ಥ ಸ್ಫೋಟದ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಲು ಸಭೆ ಕರೆದಿದ್ದ ಜಿಲ್ಲಾಧಿಕಾರಿ ಎಸ್. ಅಶ್ವತಿ ರೈತ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹಾಗೂ ಯಾವುದೇ ಸ್ಪಷ್ಟ ತೀರ್ಮಾನವನ್ನು ಕೈಗೊಳ್ಳಲಾಗದೆ ಸಭೆಯಿಂದ ಹೊರನಡೆದಿದ್ದರು.
ಜಿಲ್ಲಾಧಿಕಾರಿಯವರ ನಡೆಯನ್ನು ಖಂಡಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾತ್ರಿಯಿಡೀ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಈ ನಡುವೆ ಬೇಬಿಬೆಟ್ಟದ ಕಾವಲು ಪ್ರದೇಶ ಮೈಸೂರು ರಾಜವಂಶಸ್ಥರ ಖಾಸಗಿ ಆಸ್ತಿಯಾಗಿದ್ದು, ಅಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳನ್ನು ಕಂಡು ಆತಂಕಕ್ಕೀಡಾದ ಜಿಲ್ಲಾಡಳಿತ ಪರೀಕ್ಷಾರ್ಥ ಸ್ಪೋಟವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದೆ. ಸಹಾಯಕ ಭೂವಿಜ್ಞಾನಿ ಅವರ ಮೂಲಕ ರೈತ ಮುಖಂಡರಿಗೆ ಟ್ರಯಲ್ ಬ್ಲಾಸ್ಟ್ ಮುಂದೂಡಿರುವ ಬಗ್ಗೆ ಸಂದೇಶ ಕಳಿಸಿದರು. ತಾತ್ಕಾಲಿಕವಾಗಿ ಮುಂದೂಡಿರುವ ಪರೀಕ್ಷಾರ್ಥ ಸ್ಪೋಟವನ್ನು ಎಷ್ಟು ದಿನಗಳವರೆಗೆ ಮುಂದೂಡಲಾಗಿದೆ ಎಂಬುದಕ್ಕೆ ಉತ್ತರ ನೀಡಿಲ್ಲ.
ಧರಣಿ ಕೈಬಿಟ್ಟ ರೈತ ಸಂಘ
ಕೃಷ್ಣರಾಜಸಾಗರ ಜಲಾಶಯದ ಸುತ್ತ ಟ್ರಯಲ್ ಬ್ಲಾಸ್ಟಿಂಗ್ ಮಾಡಲು ಕರೆಸಿದ್ದ ವಿಜ್ಞಾನಿಗಳ ತಂಡವನ್ನು ವಾಪಸ್ಸು ಕಳುಹಿಸಲು ಜಿಲ್ಲಾಡಳಿತ ನಿರ್ಧರಿಸಿರುವ ಕಾರಣ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳು ಕೈಗೊಂಡಿದ್ದ ಧರಣಿ ಸತ್ಯಾಗ್ರಹವನ್ನು ವಾಪಸ್ ಪಡೆಯಲಾಗಿದೆ. ರೈತ ಸಂಘಟಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷರಿಗೆ ಜಿಲ್ಲಾಧಿಕಾರಿ ಎಸ್. ಅಶ್ವತಿ ದೂರವಾಣಿ ಕರೆ ಮಾಡಿ ಟ್ರಯಲ್ ಬ್ಲಾಸ್ಟಿಂಗ್ ಮಾಡಲು ಬಂದಿದ ವಿಜ್ಞಾನಿಗಳ ತಂಡವನ್ನು ವಾಪಸ್ಸು ಕಳುಹಿಸುತ್ತಿದ್ದು, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದರು.

ಕೃಷ್ಣರಾಜಸಾಗರ ಅಣೆಕಟ್ಟು ಸುರಕ್ಷತೆಯನ್ನು ಕಾಪಾಡುವ ಸಲುವಾಗಿ ಜುಲೈ 29ರಂದು ಹಳೇ ಮೈಸೂರು ಭಾಗದ ಸಂಘಟನೆಗಳೊಂದಿಗೆ ಸಭೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಅಣೆಕಟ್ಟು ವ್ಯಾಪ್ತಿಯಲ್ಲಿ ಸಂಪೂರ್ಣ ಗಣಿಗಾರಿಕೆ ನಿಷೇಧಕ್ಕೆ ಹೋರಾಟ ರೂಪಿಸುವ ಕುರಿತು ಚರ್ಚೆ ನಡೆಸಲು ನಿರ್ಧರಿಸಲಾಯಿತು.












Click it and Unblock the Notifications