ಮಂಡ್ಯ: ಅಪಘಾತದಲ್ಲಿ ಬೆಣ್ಣೆ ಇಡ್ಲಿ ಶಿವಪ್ಪ ವಿಧಿವಶ
ಮಂಡ್ಯ ಅಕ್ಟೋಬರ್ 21 : ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶ್ರೀರಂಗಪಟ್ಟಣ ತಾಲೂಕು ದರಸಗುಪ್ಪೆ ಗ್ರಾಮದ ಬೆಣ್ಣೆ ಇಡ್ಲಿ ಶಿವಪ್ಪ ಇಂದು( ಅಕ್ಟೋಬರ್ 21) ಮುಂಜಾನೆ ನಿಧನರಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಶಿವಪ್ಪ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆ ಮಧ್ಯೆ ಅಡ್ಡ ಬಂದ ನಾಯಿಗೆ ಡಿಕ್ಕಿ ಹೊಡೆದು ಸ್ಕೂಟರ್‌ನಿಂದ ಬಿದ್ದು ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲಾಗಿತ್ತು.
ನಿನ್ನೆ ಮಧ್ಯರಾತ್ರಿಯಿಂದ ತೀವ್ರ ನೋವಿನಿಂದ ನರಳುತ್ತಿದ್ದ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಬೆಣ್ಣೆ ಇಡ್ಲಿ ಶಿವಪ್ಪ ಕೊನೆಯುಸಿರೆಳೆದಿದ್ದಾರೆ. ಶಿವಪ್ಪ ಅವರ ಅಂತ್ಯಕ್ರಿಯೆ ದರಸಗುಪ್ಪೆ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿದೆ.

ಮೂಲತಃ ರಾಮನಗರದವರಾದ ಶಿವಪ್ಪ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ದರಸಗುಪ್ಪೆ ಗ್ರಾಮದಲ್ಲಿ ನೆಲೆಸಿದ್ದರು. ಚಾಮರಾಜನಗರ ಬೀದರ್ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ತಮ್ಮ ಮನೆಯಲ್ಲಿಯೇ ಜೀವನೋಪಾಯಕ್ಕೆ ಸಣ್ಣ ಟೀ ಅಂಗಡಿ ಪ್ರಾರಂಭಿಸಿದ್ದರು.
ಶುಚಿ ಮತ್ತು ರುಚಿಗೆ ಖ್ಯಾತರಾಗಿದ್ದ ಶಿವಪ್ಪ ಅವರ ಹೊಟೇಲ್‌ನಲ್ಲಿ ಟೀ ಕುಡಿಯಲು ಜನ ತಂಡೋಪ ತಂಡವಾಗಿ ಬರುತ್ತಿದ್ದರು. ಇದರಿಂದ ಪ್ರೇರಿತರಾದ ಶಿವಪ್ಪ ಸಣ್ಣದಾಗಿ ಬೆಳಗಿನ ಉಪಹಾರ ಇಡ್ಲಿ ಮಾರಲು ಪ್ರಾರಂಭಿಸಿದರು. ನೋಡು ನೋಡುತ್ತಿದ್ದಂತೆ ಅವರ ಕೈರುಚಿಯ ಖ್ಯಾತಿ ಸುತ್ತಮುತ್ತಲಿನ ಜಿಲ್ಲೆಗಳಿಗೆ ಹಬ್ಬಿದ್ದು, ಬೆಣ್ಣೆ ಇಡ್ಲಿ ಶಿವಪ್ಪ ಎಂದೇ ಜನಪ್ರಿಯತೆ ಪಡೆದರು. ಶಿವಣ್ಣ ಅವರ ಅಂಗಡಿ ಎಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆಯಿತು ಎಂದರೆ, ಅವರು ಮಾಡುವ ಇಡ್ಲಿಗೆ ಜನರು ಗಂಟೆ ಗಟ್ಟಲೆ ಕಾದು ಸವಿದು ಹೋಗುತ್ತಿದ್ದರು.
ಶ್ರೀರಂಗಪಟ್ಟಣ ಹಾಗೂ ಬೀದರ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಈ ಪುಟ್ಟ ಹೊಟೇಲ್ ಮೈಸೂರು ಭಾಗದಲ್ಲಿ ಹೆಸರುವಾಸಿಯಾಗಿತ್ತು. ಶಿವಪ್ಪ ಅವರ ಹೊಟೇಲ್‌ಗೆ ಮಂಡ್ಯ, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಯ ಪ್ರವಾಸಿಗರೂ ಇಡ್ಲಿ ತಿನ್ನಲು ಆಗಮಿಸುತ್ತಿದ್ದರು.
ಚಿತ್ರನಟರಾದ ಪ್ರಕಾಶ್‌ರೈ, ಸಿಹಿ ಕಹಿ ಚಂದ್ರು ಅವರು ಚಿತ್ರೀಕರಣಕ್ಕಾಗಿ ಈ ಭಾಗಕ್ಕೆ ಬಂದರೆ ಅವರೂ ಸಹ ಶಿವಪ್ಪ ಅವರ ಹೋಟೆಲ್‌ಗೆ ಬಂದು ಉಪಹಾರ ಮಾಡುತ್ತಿದ್ದರು. ಶಿವಪ್ಪ ಅವರ ಕೈರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.












Click it and Unblock the Notifications