ಮಂಡ್ಯ ಬಿಜೆಪಿಗೆ ಇರಲಿ; ತಪ್ಪಿತಾ ಜೆಡಿಎಸ್‌ನ ಲೆಕ್ಕಾಚಾರ!
ಮಂಡ್ಯ, ಫೆಬ್ರವರಿ 04: ಕರ್ನಾಟಕದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆ ಕುತೂಹಲ ಮೂಡಿಸಿದೆ. ಇದಕ್ಕೆ ಪ್ರಮುಖ ಕಾರಣ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ. ಯಾವ ಪಕ್ಷಕ್ಕೆ ಯಾವ ಕ್ಷೇತ್ರ ಸಿಗಲಿದೆ? ಎಂಬ ಲೆಕ್ಕಾಚಾರ ನಡೆಯುತ್ತಲೇ ಇದೆ. ಮಂಡ್ಯ ಯಾರ ಪಾಲಿಗೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ.
ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗುತ್ತದೆಯೇ? ಅಥವ ಬಿಜೆಪಿಗೆ ಬೆಂಬಲ ನೀಡಿರುವ ಪಕ್ಷೇತರ ಸಂಸದೆ ಸುಮಲತಾ ಅವರಿಗೆ ಟಿಕೆಟ್ ಸಿಗಲಿದೆಯೇ? ಎಂಬುದು ಕುತೂಹಲ. ಮಂಡ್ಯ ಜೆಡಿಎಸ್‌ಗೆ ಸಿಗಲಿದೆ?. ಎಚ್. ಡಿ. ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ. ಆದರೆ ಖಚಿತಗೊಂಡಿಲ್ಲ.

ಮಂಡ್ಯ ಬಿಜೆಪಿಗೆ ಇರಲಿ; ಪಾಂಡವಪುರದಲ್ಲಿ ಭಾನುವಾರ ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯಿತು. ಸಭೆಯಲ್ಲಿ ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ವಿಚಾರದ ಕುರಿತು ಸಹ ಚರ್ಚೆ ನಡೆಸಿದೆ. ಮಂಡ್ಯ ಬಿಜೆಪಿಗೆ ಇರಲಿ ಎಂದು ಸಹ ಅಭಿಪ್ರಾಯ ವ್ಯಕ್ತವಾಗಿದೆ.
ಸಭೆಯಲ್ಲಿ ಮಾತನಾಡಿದ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ, "ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿದೆ. ಚುನಾವಣೆಯಲ್ಲಿ ಯಾವ ಕ್ಷೇತ್ರವನ್ನು ಯಾವ ಪಕ್ಷಕ್ಕೆ ನೀಡಬೇಕು ಎಂದು ನಿರ್ಧಾರವಾಗಿಲ್ಲ" ಎಂದರು.
"ಹಾಸನ ಹಾಗೂ ಮಂಡ್ಯ ಕ್ಷೇತ್ರಗಳು ಬಿಜೆಪಿಗೆ ಸಿಗುತ್ತವೆ. ಒಂದು ವೇಳೆ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಡಬೇವುದಾದರೆ ಮತ್ತು ಅಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಕಾರ್ಯಕರ್ತರ ಒಪ್ಪಿಗೆ ಪಡೆಯಬೇಕು" ಎಂದು ಹೇಳಿದರು. ಈ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ.
"ಈ ಹಿಂದೆ ಬಿಜೆಪಿ ಮಂಡ್ಯ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನ ಗೆದ್ದಿರಲಿಲ್ಲ. ಕೆ. ಆರ್. ಪೇಟೆಯಲ್ಲಿ ನಾರಾಯಣ ಗೌಡರು ಮೊದಲ ಬಾರಿಗೆ ಗೆಲುವು ಕಂಡರು. ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಬಿಜೆಪಿ ಪಕ್ಷ ಕಟ್ಟೋಣ. ಮೈತ್ರಿಯಾಗಿದೆ ಟಿಕೆಟ್ ಬಿಟ್ಟುಕೊಡಬೇಕು ಎಂದು ಕಾರ್ಯಕರ್ತರು ಅಂದುಕೊಳ್ಳುವುದು ಬೇಡ. ಬಿಜೆಪಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆ ಎಂಬುವುದರ ಬಗ್ಗೆ ತೀರ್ಮಾನವಾಗಿಲ್ಲ" ಎಂದು ಹೇಳಿದರು.
"ಹಾಸನ, ಮಂಡ್ಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯವಿತ್ತು. ಈಗ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಜಿಲ್ಲೆಯಲ್ಲಿ ಪಕ್ಷ ಪ್ರಬಲ ಪೈಪೋಟಿ ಕೊಟ್ಟಿದೆ. ಬಿಜೆಪಿ ಕಾರ್ಯಕರ್ತರು ಕ್ಷೇತ್ರವನ್ನು ಕೇಳುತ್ತಿದ್ದಾರೆ. ಸುಮಲತಾ ಅಂಬರೀಶ್ ಅವರು ಸಹ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಪಕ್ಷದ ನಾಯಕರಿಗೆ ಮಾಹಿತಿ ನೀಡುತ್ತೇನೆ" ಎಂದು ಪ್ರೀತಂ ಗೌಡ ತಿಳಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಲಿವೆ. ಜೆಡಿಎಸ್‌ಗೆ ಮಂಡ್ಯ, ಹಾಸನ ಕ್ಷೇತ್ರವನ್ನು ಬಿಟ್ಟುಕೊಡಲಾಗುತ್ತದೆ ಎಂಬುದು ಸುದ್ದಿ. ಹಾಸನದ ಹಾಲಿ ಸಂಸದ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ. ಮಂಡ್ಯ ಜೆಡಿಎಸ್‌ಗೆ ಸಿಕ್ಕಿದರೆ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ, ಈ ಬಗ್ಗೆ ಪಕ್ಷದ ಕಾರ್ಯಕರ್ತರು ಸಹ ಒತ್ತಾಯಿಸುತ್ತಿದ್ದಾರೆ.
ಆದರೆ ಮಂಡ್ಯ ಜೆಡಿಎಸ್‌ಗೆ ಸಿಗುವ ಕುರಿತು ಅಧಿಕೃತವಾಗಿ ಯಾವುದೇ ಘೋಷಣೆಯಾಗಿಲ್ಲ. 2019ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್‌ಗೆ ಬಿಜೆಪಿ ಬೆಂಬಲ ನೀಡಿತ್ತು. ಕಳೆದ ವರ್ಷ ಅವರು ಬಿಜೆಪಿ ಬೆಂಬಲಿಸುವುದಾಗಿ ಘೋಷಣೆ ಮಾಡಿದ್ದಾರೆ. ಜೆಡಿಎಸ್‌ಗೆ ಮಂಡ್ಯ ನೀಡಿದರೆ ಸುಮಲತಾ ಎಲ್ಲಿಂದ ಕಣಕ್ಕಿಳಿಯಲಿದ್ದಾರೆ? ಎಂಬುದು ಪ್ರಶ್ನೆಯಾಗಿದೆ.
ಕಳೆದ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು. ಈ ಬಾರಿ ಎಚ್. ಡಿ. ಕುಮಾರಸ್ವಾಮಿಯೇ ಕಣಕ್ಕಿಳಿದು ಮಂಡ್ಯವನ್ನು ವಶಕ್ಕೆ ಪಡೆದುಕೊಳ್ಳಲು ಲೆಕ್ಕಾಚಾರ ಹಾಕಿದ್ದಾರೆ ಎಂಬುದು ವಿಶ್ಲೇಷಣೆ. ಆದರೆ ಚನ್ನಪಟ್ಟಣದ ಹಾಲಿ ಶಾಸಕರಾಗಿರುವ ಕುಮಾರಸ್ವಾಮಿ ಲೋಕಸಭೆ ಚುನಾವಣೆ ಕಣಕ್ಕಿಳಿಯಲಿದ್ದಾರೆಯೇ? ಕಾದು ನೋಡಬೇಕಿದೆ.












Click it and Unblock the Notifications