Lok Sabha Election 2024: 100% ಬಿಜೆಪಿ ಟಿಕೆಟ್ ನನಗೆ..ಸಂಸದೆ ಸುಮಲತಾ ಹೀಗೆ ಹೇಳುತ್ತಿರುವುದೇಕೆ?
ಮಂಡ್ಯ, ಮಾರ್ಚ್ 07 : ಕಳೆದ 2019ರ ಲೋಕಸಭಾ ಚುನಾವಣೆ ವೇಳೆ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಅವರು ಇಡೀ ದೇಶದ ಗಮನಸೆಳೆದಿದ್ದರು. ಈ ಬಾರಿಯೂ ಆ ಪರಿಸ್ಥಿತಿ ಪುನಾರವರ್ತನೆಯಾಗುವ ಎಲ್ಲ ಲಕ್ಷಣ ಕಂಡು ಬಂದಿದ್ದು ಅವರತ್ತಲೇ ಎಲ್ಲರ ದೃಷ್ಟಿ ನೆಟ್ಟಿರುವುದರಿಂದ ಕ್ಷೇತ್ರದಲ್ಲಿ ಅಂತೆ, ಕಂತೆಗಳ ಸುದ್ದಿಗಳು ಹರಿದಾಡುತ್ತಿದ್ದರೂ ಸುಮಲತಾ ಮಾತ್ರ ಟಿಕೆಟ್ ಹಂಡ್ರೆಡ್ ಪರ್ಸೆಂಟ್ ನನಗೆ ಎಂದು ಹೇಳುತ್ತಲೇ ಬರುತ್ತಿದ್ದಾರೆ.
ಕಳೆದ ಐದು ವರ್ಷಗಳಿಂದ ದಳಪತಿಗಳನ್ನು ಎದುರು ಹಾಕಿಕೊಂಡು ರಾಜಕೀಯ ಮಾಡಿಕೊಂಡು ಬಂದಿದ್ದ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ತಮ್ಮ ನಿಲುವನ್ನು ಬದಲಿಸಿಕೊಂಡಂತೆ ಕಾಣುತ್ತಿಲ್ಲ. ಹೀಗಾಗಿ ಮುಂದಿನ ಮಂಡ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಏನಾಗಬಹುದು ಎಂಬುದು ಎಲ್ಲರನ್ನು ಕುತೂಹಲದ ಘಟ್ಟಕ್ಕೆ ಎಳೆದೊಯ್ಯುತ್ತಿದೆ. ಜತೆಗೆ ಮಂಡ್ಯ ರಾಜಕೀಯದಲ್ಲಿ ಗೋಜಲುಗಳು ಏರ್ಪಟ್ಟಿರುವುದು ಎದ್ದು ಕಾಣಿಸುತ್ತಿದೆ.

ಕ್ಷೇತ್ರದಲ್ಲಿನ ಗೋಜಲುಗಳು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರು ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಬಹುಶಃ ಮಂಡ್ಯದಲ್ಲಿ ಬಿಜೆಪಿಗೆ ಮತದ ಪ್ರಮಾಣ ಒಂದಷ್ಟು ಹೆಚ್ಚಾಗಿದ್ದರೆ ಅದರಲ್ಲಿ ಸುಮಲತಾ ಅವರ ಕೊಡುಗೆಯಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ. ಇಲ್ಲಿವರೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬದ್ಧವೈರಿಗಳಾಗಿ ಸೆಣೆಸಾಡುತ್ತಾ ಬಂದಿದ್ದರು. ಆದರೆ ಬಿಜೆಪಿ ಜಿಲ್ಲೆಯೊಳಗೆ ಎಂಟ್ರಿಕೊಟ್ಟ ಬಳಿಕ ಜೆಡಿಎಸ್ ಮತಗಳು ಬಿಜೆಪಿಗೆ ಹೋಗಿವೆ. ಈಗ ಇಬ್ಬರೂ ಒಟ್ಟಾಗಿ ಚುನಾವಣೆಗೆ ಹೋಗುವ ಪರಿಸ್ಥಿತಿ ಬಂದಿರುವುದು ರಾಜಕೀಯದಲ್ಲಿ ಏನು ಬೇಕಾದರು ನಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
ಸುಮಲತಾಗೆ ದಳಪತಿಗಳೇ ದುಶ್ಮನ್?
ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್, ರೈತಸಂಘ ಹೀಗೆ ಹಲವು ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಬೆಂಬಲ ನೀಡಿದ್ದರು. ಇದರ ಪರಿಣಾಮ ಅಂದು ಇಡೀ ಸರ್ಕಾರವನ್ನು ಎದುರು ಹಾಕಿಕೊಂಡರೂ ಕೊನೆಯಲ್ಲಿ ಸುಮಲತಾ ಗೆಲುವು ಸಾಧಿಸಲು ಸಾಧ್ಯವಾಯಿತು. ಅವತ್ತು ಸುಮಲತಾ ಅವರಿಗೆ ಪ್ರಮುಖ ಶತ್ರುಗಳಾಗಿದ್ದವರು ದಳಪತಿಗಳು. ಆದರೆ ಜೆಡಿಎಸ್ ನ ಕೆಲವು ನಾಯಕರು ಇವತ್ತಿಗೂ ಸುಮಲತಾ ಅವರಿಗೆ ದುಶ್ಮನ್ ಗಳಾಗಿಯೇ ಉಳಿದು ಬಿಟ್ಟಿದ್ದಾರೆ.

ಚುನಾವಣೆ ಗೆದ್ದು ಸಂಸದರಾದ ಸುಮಲತಾ ಅವರು ಜೆಡಿಎಸ್ ನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಜಿಲ್ಲೆಯ ಪ್ರಮುಖ ನಾಯಕರಿಂದಲೂ ಅಂತರ ಕಾಪಾಡಿಕೊಂಡರು. ಅದು ರಾಜಕೀಯವಾಗಿ ಸರಿಯಾಗಿಯೇ ಇತ್ತು. ಆದರೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದ ಬಳಿಕ ಸುಮಲತಾ ಅವರಿಗೆ ಅದು ಶಾಪವಾಗಿ ಪರಿಣಮಿಸಿದೆ. ಜೆಡಿಎಸ್ ನ ಘಟಾನುಘಟಿ ನಾಯಕರೆಲ್ಲರೂ ಸುಮಲತಾ ಅವರನ್ನು ವಿರೋಧಿಸುತ್ತಾ ಬರುತ್ತಿದ್ದು, ಬಿಜೆಪಿ ನಾಯಕರಿಗೆ ಸುಮಲತಾ ಅವರ ಮೇಲೆ ಪ್ರೀತಿ ವಿಶ್ವಾಸ ನಂಬಿಕೆ ಇದ್ದರೂ ದಳಪತಿಗಳ ವಿರೋಧ ಕಟ್ಟಿಕೊಂಡು ಟಿಕೆಟ್ ನೀಡಲು ಸಾಧ್ಯವಾಗುತ್ತಾ ಎಂಬುದು ಇಲ್ಲಿ ತನಕ ಪ್ರಶ್ನೆಯಾಗಿಯೇ ಉಳಿದಿದೆ.
ಸ್ಟಾರ್ ಚಂದ್ರುಗೆ ಕೈ ಟಿಕೆಟ್
ಈಗಿನ ಪರಿಸ್ಥಿತಿಯಲ್ಲಿ ಸುಮಲತಾ ಅವರನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೈಬಿಟ್ಟರೂ ಅವರನ್ನು ಬೆಂಬಲಿಸಲು ಕಾಂಗ್ರೆಸ್ ತಯಾರಿಲ್ಲ. ಕಾಂಗ್ರೆಸ್ ಟಿಕೆಟ್ ಗೆ ಸ್ಟಾರ್ ಚಂದ್ರು ಅವರು ಟವಲ್ ಹಾಕಿದ್ದಾರೆ. ಅದು ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯವನ್ನು ಹುಟ್ಟು ಹಾಕಿದೆ. ಕಳೆದ ಲೋಕಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಎದುರು ಹಾಕಿಕೊಂಡು ಸುಮಲತಾ ಅವರಿಗೆ ಬೆಂಬಲ ನೀಡಿದ್ದ ಡಾ.ರವೀಂದ್ರ ಇವತ್ತು ಅವರ ಶತ್ರುವಾಗಿದ್ದಾರೆ. ಅಷ್ಟೇ ಅಲ್ಲದೆ ತನಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡುವಂತೆ ದುಂಬಾಲು ಬಿದ್ದು ಸ್ಟಾರ್ ಚಂದ್ರು ಅವರಿಗೆ ಟಿಕೆಟ್ ನೀಡಲಾಗುತ್ತಿದೆ ಎನ್ನುವಾಗ ಅಸಮಾಧಾನಗೊಂಡು ಪಕ್ಷಕ್ಕೆ ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದಾರೆ.

ಇನ್ನು ತಮ್ಮದೇ ಪಕ್ಷದ ನಾಯಕರ ಬಗ್ಗೆ ಟೀಕೆ ಮಾಡಿರುವ ಡಾ.ರವೀಂದ್ರ ಅವರು ನೂರು ಕೋಟಿ ಪಡೆದು ಸ್ಟಾರ್ ಚಂದ್ರು ಅವರಿಗೆ ಟಿಕೆಟ್ ನೀಡಿರುವುದರಾಗಿ ಆರೋಪಿಸಿದ್ದು, ಸುಮಲತಾ ಅವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಇಲ್ಲಿ ಡಾ.ರವೀಂದ್ರ ಅವರು ತಮ್ಮ ಆಕ್ರೋಶವನ್ನು ಹೊರ ಹಾಕುವ ಭರದಲ್ಲಿ ಸುಮಲತಾ ಅವರ ಹೆಸರನ್ನು ಎಳೆದು ತಂದಿದ್ದಾರೋ ಗೊತ್ತಿಲ್ಲ. ಆದರೆ ಮಂಡ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾಗಿದೆಯಲ್ಲದೆ, ಚುನಾವಣೆ ಮುನ್ನವೇ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.
ಸುಮಲತಾ ಅವರ ವಿಶ್ವಾಸ ಫಲಿಸುತ್ತಾ?
ಇದೆಲ್ಲದರ ನಡುವೆ ಸುಮಲತಾ ಅವರು ಮಾತ್ರ ಕೂಲ್ ಆಗಿದ್ದಾರೆ. ಏನೇ ಕೇಳಿದರೂ ವಿಶ್ವಾಸದ ಮಾತುಗಳನ್ನೇ ಆಡುತ್ತಿದ್ದಾರೆ. ಬಿಜೆಪಿಯಿಂದ ನನಗೆ ಟಿಕೆಟ್ ಎಂಬ ಆತ್ಮವಿಶ್ವಾಸದಲ್ಲಿರುವ ಅವರು ಈಗ ಮಂಡ್ಯದಲ್ಲಿ ಸುತ್ತಾಟ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ನಾಯಕರು ಸುಮಲತಾ ಅವರನ್ನೇ ಅಭ್ಯರ್ಥಿ ಎಂದು ಒಪ್ಪಿಕೊಂಡಿದ್ದಾರೆ. ಯಾರೂ ತಕರಾರು ಎತ್ತುತ್ತಿಲ್ಲ. ದಳಪತಿಗಳು ಮಾತ್ರ ಅಲ್ಲೊಂದು ಇಲ್ಲೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಬಿಜೆಪಿ, ಜೆಡಿಎಸ್ ಮೈತ್ರಿಕೂಟದಿಂದ ಕ್ಷೇತ್ರಗಳ ಕುರಿತಂತೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ತನಕವೂ ಮಂಡ್ಯ ಕ್ಷೇತ್ರದ ಕುರಿತಂತೆ ತಮ್ಮದೇ ಆದ ಹಲವು ವಿಶ್ಲೇಷಣೆಗಳು, ವದಂತಿಗಳು ರಾಜಕೀಯ ವಲಯದಲ್ಲಿ ಹರಡುತ್ತಲೇ ಇರುತ್ತದೆ. ಎಲ್ಲದಕ್ಕೂ ಉತ್ತರ ಇನ್ನು ಕೆಲವೇ ದಿನಗಳಲ್ಲಿ ಸಿಗುವ ಸಾಧ್ಯತೆಯಿದೆ. ಅಲ್ಲಿ ತನಕ ಕಾಯುವುದು ಅನಿವಾರ್ಯವಾಗಿದೆ.












Click it and Unblock the Notifications