ಮತ್ತೆ ಕುಸಿದ ಕೆಆರ್‌ಎಸ್‌ ಒಳ ಹರಿವು: ವರುಣ ಕೃಪೆ ತೋರದೆ ಸಂಕಷ್ಟಕ್ಕಿಲ್ಲ ಪರಿಹಾರ!

ಮಂಡ್ಯ, ಅಕ್ಟೋಬರ್‌ 10: ಸದ್ಯಕ್ಕೆ ಕರುನಾಡಿನ ಜನರ ಯಾವ ಪ್ರಾರ್ಥನೆಯೂ ಫಲಿಸುವ ಲಕ್ಷಣಗಳು ಕಾಣಿಸುತ್ತಿಲ್ಲವಾದ ಕಾರಣ ಜೀವನಾಡಿ ಕೆಆರ್‌ಎಸ್‌ ಜಲಾಶಯ ಪ್ರಸಕ್ತ ವರ್ಷ ಭರ್ತಿಯಾಗುವುದಿರಲಿ, ನೀರಿನ ಮಟ್ಟ ನೂರರ ಗಡಿಯಲ್ಲಿ ನಿಂತರೆ ಅಷ್ಟೇ ಸಾಕು ಎನ್ನುವಂತಾಗಿದೆ.

ಇನ್ನು ಏನೇ ಪವಾಡಗಳು ನಡೆದರೂ ಹಿಂಗಾರು ಮಳೆಯಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವುದು ಕಷ್ಟಸಾಧ್ಯವೇ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಿದ್ದೇ ಆದರೆ ಇಲ್ಲಿನ ಜನ ಕುಡಿಯಲು ನೀರು ಸಿಗದೆ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗುವುದಂತು ಖಚಿತ.

less-rain-fall-krs-inflows-fell-again

ದೇವರೇ ಇದೆಂತಾ ಸಂಕಷ್ಟ ಎಂದು ಜನ ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವ ಮುನ್ನ ಸಂಕಷ್ಟ ಸೂತ್ರವನ್ನು ಪಾಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ತಮಿಳುನಾಡಿಗೆ ನೀರು ಹರಿಸದಂತೆ ರಾಜ್ಯದಲ್ಲಿ ಹೋರಾಟಗಳು ಆರಂಭವಾಗಿ ತಿಂಗಳೇ ಕಳೆದು ಹೋಗಿವೆ. ಹೋರಾಟಗಳು ನಡೆಯುತ್ತಿರುವಾಗಲೇ ಕೆಆರ್ ಎಸ್ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ಕರುನಾಡಿನ ಜನರಿಗೆ ಮರುಭೂಮಿಯಲ್ಲಿ ನೀರು ಸಿಕ್ಕಿದಷ್ಟೇ ಸಂತೋಷವಾಗಿತ್ತು. ಆದರೀಗ ಮತ್ತೆ ಆತಂಕ ಆವರಿಸುವಂತಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿದ್ದ ಮಳೆ ಕಡಿಮೆಯಾಗಿದೆ ಪರಿಣಾಮ ಮೂರೇ ದಿನದಲ್ಲಿ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಸದ್ಯ ಒಳಹರಿವು 11,800 ಕ್ಯುಸೆಕ್ ನಿಂದ 4,046 ಕ್ಯುಸೆಕ್‍ ಗೆ ಇಳಿಕೆಯಾಗಿದೆ. ಇದರ ಪರಿಣಾಮ ಕಾವೇರಿ ನೀರನ್ನು ನಂಬಿದ್ದ ಜನರು ಮತ್ತು ರೈತರು ಆತಂಕ ಪಡುವಂತಾಗಿದೆ. ಒಳಹರಿವು ಹೆಚ್ಚಳದಿಂದ ಜಲಾಶಯಕ್ಕೆ ಸುಮಾರು ಮೂರು ಟಿಎಂಸಿ ನೀರು ಹರಿದು ಬಂದಿತ್ತು. ಇದರಿಂದ 124 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 101.80 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಇದು ಆಶಾಭಾವನೆಯನ್ನು ಹುಟ್ಟು ಹಾಕಿತ್ತು.

ಈ ಬಾರಿ ವಾಡಿಕೆ ಮಳೆ ಸುರಿಯಲಿಲ್ಲ

ಸಾಮಾನ್ಯವಾಗಿ ಮಲೆನಾಡಿನಲ್ಲಿ ಅದರಲ್ಲೂ ಕೊಡಗು ಭಾಗದಲ್ಲಿ ಜೂನ್ ನಿಂದ ಸೆಪ್ಟಂಬರ್ ವರೆಗೆ ಹೆಚ್ಚಿನ ಮಳೆ ಸುರಿಯುತ್ತದೆ. ಅಕ್ಟೋಬರ್ ನಂತರ ಹಿಂಗಾರು ಮಳೆ ಸುರಿದರೂ ಅದರ ಪ್ರಮಾಣ ಕಡಿಮೆಯೇ ಹೀಗಿರುವಾಗ ಒಳಹರಿವನ್ನು ನಿರೀಕ್ಷೆ ಮಾಡುವುದು ಕಷ್ಟವೇ.. ಜುಲೈ ಮತ್ತು ಆಗಸ್ಟ್ ನಲ್ಲಿ ವಾಡಿಕೆಯ ಮಳೆ ಸುರಿಯಲಿಲ್ಲ. ಇದರಿಂದ ಜಲಾಶಯಕ್ಕೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರಲಿಲ್ಲ. 2021ರಲ್ಲೂ ಕೆಆರ್ ಎಸ್ ಜಲಾಶಯ ತಡವಾಗಿಯೇ ಭರ್ತಿಯಾಗಿತ್ತು. ಅವತ್ತು ಈ ಅವಧಿಯಲ್ಲಿ ಕೇವಲ 120 ಅಡಿಯ ಆಸುಪಾಸಿನಲ್ಲಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲೇ ಭರ್ತಿಯಾಗಿ ನೆಮ್ಮದಿ ಪಡುವಂತೆ ಮಾಡಿತ್ತು.

less-rain-fall-krs-inflows-fell-again

ಜತೆಗೆ ಹಿಂಗಾರು ಮಳೆಯೂ ಉತ್ತಮವಾಗಿತ್ತು. ನಂತರ 2022ರ ಬೇಸಿಗೆ ಅವಧಿಯಲ್ಲಿ ಉತ್ತಮವಾಗಿ ಮಳೆ ಸುರಿದಿದ್ದು, ಮೇ ತಿಂಗಳಲ್ಲಿ ಅಸಾನಿ ಚಂಡಮಾರುತದ ಎಫೆಕ್ಟ್ ನಿಂದ ಮಲೆನಾಡಿನಲ್ಲಿ ವಾರಗಟ್ಟಲೆ ಮಳೆಯಾಗಿತ್ತು. ಹೀಗಾಗಿ ತೊಂದರೆಯಾಗಲಿಲ್ಲ. ಆ ವರ್ಷ ಮುಂಗಾರು ಮತ್ತು ಹಿಂಗಾರು ಉತ್ತಮವಾಗಿಯೇ ಇತ್ತು. ಆದರೆ 2023ರ ವರ್ಷದಲ್ಲಿ ಬೇಸಿಗೆಯಲ್ಲೂ ಮಳೆ ಸುರಿಯಲಿಲ್ಲ. ಮಳೆಗಾಲದಲ್ಲಿಯೂ ಮಳೆ ಸುರಿಯಲಿಲ್ಲ. ಇದರ ಪರಿಣಾಮ ಇವತ್ತು ಕೆಆರ್ ಎಸ್ ಭರ್ತಿಯಾಗದೆ ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

2013ರ ಬೇಸಿಗೆಯಲ್ಲಿ 65 ಅಡಿ ಕುಸಿದಿತ್ತು

ಹಿಂದೊಮ್ಮೆ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದ್ದಾಗ ಹಿನ್ನೀರಿನಿಂದ ನಿಂತು ನೋಡಿದಾಗ ಖಾಲಿಖಾಲಿಯಾಗಿದ್ದ ಜಲಾಶಯ ಆ ನೋವಿನ ದೃಶ್ಯಗಳು ಇಂದಿಗೂ ಎಲ್ಲರ ಕಣ್ಣಮುಂದೆಯೇ ಇದೆ. ಅದು ಮುಂದಿನ ಬೇಸಿಗೆ ಹೊತ್ತಿಗೆ ಮರುಕಳಿಸುತ್ತಾ ಎಂಬ ಭಯವೂ ಜನರ ಎದೆ ಬಡಿತವನ್ನು ಹೆಚ್ಚಿಸುತ್ತಿದೆ. ಮತ್ತು ಅವತ್ತಿನ ಆ ಸಂಕಷ್ಟ ಮತ್ತೆ ಯಾವತ್ತೂ ಬರಬಾರದು ಎಂದು ಜನ ಇವತ್ತಿಗೂ ಹೇಳುತ್ತಾರೆ. 2013ರಲ್ಲಿ ಕೆ.ಆರ್.ಎಸ್ ಜಲಾಶಯ 65 ಅಡಿ ತಲುಪಿತ್ತು. ಆಗ ಕುಡಿಯುವುದಕ್ಕೂ ನೀರಿಲ್ಲದೆ ಜನ ಪರದಾಡಿದ್ದರು. ಮಂಡ್ಯ ಜಿಲ್ಲೆಯಲ್ಲಿ ಕೆರೆಕಟ್ಟೆಗಳು ಒಣಗಿ ರೈತರು ಕೈಚೆಲ್ಲಿ ಕುಳಿತಿದ್ದರು.

ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆಯೇ ಮುಳುಗಡೆಯಾಗಿದ್ದ ಗ್ರಾಮಗಳು, ವೀರಗಲ್ಲು, ಮಾಸ್ತಿಗಲ್ಲಿನಂತಹ ಶಾಸನಗಳು, ದೇವಾಲಯಗಳು ಕಾಣತೊಡಗಿದ್ದವು. ಆ ದೃಶ್ಯವನ್ನು ನೋಡಲು ಜನ ತಂಡೋಪ ತಂಡವಾಗಿ ಆಗಮಿಸಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ವೇಣುಗೋಪಾಲ ದೇಗುಲ, ನಾರಾಯಣಸ್ವಾಮಿ ದೇವಾಲಯ, ಸುಬ್ರಹ್ಮಣ್ಯೇಶ್ವರ ಗೋಪುರ, ಹಲವಾರು ಕಲ್ಲಿನ ಶಾಸನಗಳನ್ನು ನೋಡಿ ಅಚ್ಚರಿ ಪಟ್ಟಿದ್ದರು.

less-rain-fall-krs-inflows-fell-again

2016ರಲ್ಲಿ ಹಿನ್ನೀರಲ್ಲೇ ಬೆಳೆ ಬೆಳೆದಿದ್ದರು

2000 ಇಸವಿಯಲ್ಲೊಮ್ಮೆ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಇಳಿದಾಗ ಹಿನ್ನೀರಿನಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಪತ್ತೆಯಾದಾಗ ದೇವಾಲಯವನ್ನು ಜಲಾಶಯದಿಂದ ಹೊರಭಾಗಕ್ಕೆ ಸ್ಥಳಾಂತರ ಮಾಡಿ ಸುಂದರವಾಗಿ ದೇವಾಲಯವನ್ನು ಖೋಡೆಸ್ ಕಂಪನಿ ನಿರ್ಮಿಸಿದ್ದು ಇತಿಹಾಸವಾಗಿದೆ. ಇನ್ನು 2016ರಲ್ಲಿ ಕೂಡ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ರೈತರು ಹಿನ್ನೀರಿನಲ್ಲಿ ಉಳುಮೆ ಮಾಡಿ ಬೆಳೆ ಬೆಳೆದಿದ್ದರು. ಬೆಸ್ತರು ಗುಡಿಸಲು ಹಾಕಿಕೊಂಡು ಮೀನು ಹಿಡಿದಿದ್ದರು.

ಇಷ್ಟೆಲ್ಲ ಸಂಕಷ್ಟ ಅನುಭವಿಸಿದ ನಂತರ 2017ರ ಮುಂಗಾರು ಮಳೆ ಕ್ಷೀಣಿಸಿದರೂ ಹಿಂಗಾರು ಚೆನ್ನಾಗಿ ಸುರಿದಿದ್ದರಿಂದ ಜಲಾಶಯಕ್ಕೆ ನೀರು ಹರಿದು ಬಂದಿತ್ತಾದರೂ ಭರ್ತಿಯಾಗಿರಲಿಲ್ಲ. 2018ರ ನಂತರ 2022ರವರೆಗೂ ಉತ್ತಮವಾಗಿ ಮಳೆ ಸುರಿದಿದ್ದರಿಂದ ಜಲಾಶಯ ಭರ್ತಿಯಾಗಿದ್ದಲ್ಲದೆ, ಅಪಾರ ಪ್ರಮಾಣದ ನೀರು ಜಲಾಶಯದಿಂದ ಹೊರಕ್ಕೆ ಹರಿದು ಹೋಗಿತ್ತು. ಆದರೆ ಅದೇನಾಯಿತೋ 2023 ಮತ್ತೆ ಕಾವೇರಿ ಸಂಕಷ್ಟಕ್ಕೆ ಸಾಕ್ಷಿಯಾಗಿ ನಿಂತಿದೆ. ಈಗ ಬಂದಿರುವ ಸಂಕಷ್ಟ ದೂರ ಮಾಡುವ ಶಕ್ತಿ ಇರುವುದು ವರುಣನಿಗೆ ಮಾತ್ರ. ಆತ ಕೃಪೆ ತೋರ ಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+