ಚಿರತೆ ಪ್ರತ್ಯಕ್ಷ: ಕೆಆರ್‌ಎಸ್ ಬೃಂದಾವನ ಬಂದ್, 17 ದಿನದಲ್ಲಿ 50 ಲಕ್ಷ ನಷ್ಟ
ಮೈಸೂರು, ನವೆಂಬರ್. 25: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಪ್ರವಾಸಿ ತಾಣವಾಗಿರುವ ಕೆಆರ್‌ಎಸ್ ಬೃಂದಾವನದಲ್ಲಿ ಇತ್ತೀಚೆಗಷ್ಟೇ ಚಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್ 6 ರಿಂದ ಅಂದರೆ ಸುಮಾರು 17 ದಿನಗಳಿಂದ ಬೃಂದಾವನ ಉದ್ಯಾನವನವನ್ನು ಬಂದ್ ಮಾಡಲಾಗಿತ್ತು. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ 50 ಲಕ್ಷಕ್ಕೂ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ. ಜೊತೆಗೆ 15 ದಿಗಳು ಕಳೆದರೂ ಚಿರತೆಯನ್ನು ಇನ್ನು ಹಿಡಿದಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರು ಕೆಂಡಕಾರಿದ್ದರು.
ನಾಲ್ಕು ಬಾರಿ ಕಾಣಿಸಿಕೊಂಡ ಚಿರತೆ
ಅಕ್ಟೋಬರ್ 21ರಿಂದ ಇದುವರೆಗೂ ಬೃಂದಾವನ ಗಾರ್ಡನ್ನಲ್ಲಿ ಚಿರತೆ ನಾಲ್ಕು ಬಾರಿ ಕಾಣಿಸಿಕೊಂಡಿದೆ. ಹೀಗಾಗಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನವೆಂಬರ್ 6ರಿಂದ ಚಿರತೆ ಸೆರೆ ಹಿಡಿಯುವವರೆಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವನ್ನು ಹೇರಿದ್ದರು. ಆದರೆ ಬೃಂದಾವನ ಬಂದ್ ಮಾಡಿ ಈಗಾಗಲೇ 15 ದಿನಗಳು ಕಳೆದಿವೆ. ಅಲ್ಲದೆ ಪ್ರಮುಖ ತಾಣವಾದ ಬೃಂದಾವನಕ್ಕೆ ವಾರದ ದಿನಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಪ್ರವಾಸಿಗರು ಭೇಟಿ ನೀಡುತ್ತಿದ್ದರು.
ಕೆಆರ್ಎಸ್ನಲ್ಲಿ ಆತಂಕ ಮೂಡಿಸಿದ ಚಿರತೆ; ಬೃಂದಾವನಕ್ಕೆ ಪ್ರವಾಸಿಗರಿಗೆ ಪ್ರವೇಶ ನಿಷೇಧ
ಇನ್ನು ವಾರಾಂತ್ಯದ ದಿನಗಳಲ್ಲಿ ಸರ್ಕಾರಿ ರಜೆ ಇರುವುದರಿಂದ 5 ಸಾವಿರಕ್ಕೂ ಜನರು ಭೇಟಿ ನೀಡುತ್ತಿರುತ್ತಾರೆ. ಇದೀಗ ಬೃಂದಾವನ ಬಂದ್ ಮಾಡಿರುವುದರಿಂದ ಪ್ರವಾಸಿಗರಿಲ್ಲದೆ ಕಾವೇರಿ ನೀರಾವರಿ ನಿಗಮಕ್ಕೆ ಸುಮಾರು 50 ಲಕ್ಷ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಹೋಟೆಲ್ ಮಾಲೀಕರು ಕಂಗಾಲು
ಬೃಂದಾವನ ಪ್ರವೇಶಕ್ಕೆ ಪ್ರವಾಸಿಗರಿಗೆ ತಲಾ 50 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದೆ. 17 ದಿನಗಳಿಂದ ಪ್ರವೇಶ ನಿರ್ಬಂಧ ಆಗಿರುವ ಕಾರಣ ನಿಗಮಕ್ಕೆ ಆದಾಯ ಬರುತ್ತಿಲ್ಲ. ಮತ್ತೊಂದೆಡೆ ಇಷ್ಟು ದಿನ ಕಳೆದರೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದರು. ಸದ್ಯ ನಿಗಮದ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೆಆರ್‌ಎಸ್‌ನ ಬೃಂದಾವನ ಪ್ರವಾಸಿಗರನ್ನೇ ನಂಬಿ ಕುಳಿತಿದ್ದ ನೂರಾರು ವ್ಯಾಪಾರಿಗಳಿಗೆ ತುಂಬಾ ನಷ್ಟವಾದಂತಾಗಿದೆ.
ಕೆಆರ್ಎಸ್ನಲ್ಲಿ ಆತಂಕ ಮೂಡಿಸಿದ ಚಿರತೆ; ಬೃಂದಾವನಕ್ಕೆ ಪ್ರವಾಸಿಗರಿಗೆ ಪ್ರವೇಶ ನಿಷೇಧ
ಬೃಂದಾವನದಲ್ಲಿದ್ದ ಹಣ್ಣಿನ ಅಂಗಡಿ, ತಂಪು ಪಾನೀಯ, ಕರಕುಶಲ ವಸ್ತು ಮಾರಾಟ ಸೇರಿದಂತೆ ನೂರಾರು ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಬೃಂದಾವನದ ಒಳಗಡೆ ಇರುವ ರಾಯಲ್ ಆರ್ಕಿಡ್, ಮಯೂರ ಹೋಟೆಲ್‌ಗಳು ಕೂಡ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ. ಹಾಗೂ ವ್ಯಾಪಾರವಿಲ್ಲದೇ ಹೋಟೆಲ್ ಮಾಲೀಕರು ಕಂಗಾಲಾಗಿ ಹೋಗಿದ್ದಾರೆ. ನಷ್ಟ ಅನುಭವಿಸುತ್ತಿವೆ.
ಪ್ರವಾಸಿಗರಿಗೆ ಆತಂಕ ಸೃಷ್ಟಿಸಿದ ಚಿರತೆ
ವಿಶ್ವವಿಖ್ಯಾತ ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡು ಅಲ್ಲಿನ ಪ್ರವಾಸಿಗರಿಗೆ ಆತಂಕ ಸೃಷ್ಟಿಸಿತ್ತು. ಮುಂಜಾಗ್ರತೆಯಾಗಿ ಬೃಂದಾವನಕ್ಕೆ ಪ್ರವಾಸಿಗರ ನಿಷೇಧವನ್ನು ಮುಂದುವರೆಸಿದೆ. ನಾರ್ತ್‌ಬ್ಯಾಂಕ್ ಬಳಿ ಬೆಳೆದು ನಿಂತಿದ್ದ ಗಿಡ-ಗಂಟೆಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರೆದಿದೆ.
ಅಕ್ಟೋಬರ್ 22ರಂದು ಕೆಆರ್‌ಎಸ್ ಅಣೆಕಟ್ಟಿನ ಮೇಲ್ಭಾಗದಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಮತ್ತೆ ಅಕ್ಟೋಬರ್ 28ರಂದು ಸಂಜೆ ಬೃಂದಾವನದೊಳಗೆ ಚಿರತೆ ಕಾಣಿಸಿಕೊಂಡು ಪ್ರವಾಸಿಗರಲ್ಲಿ ಮತ್ತಷ್ಟು ಭಯ ಹುಟ್ಟುವಂತೆ ಮಾಡಿತ್ತು. ಚಿರತೆ ಕಾಣಿಸಿಕೊಂಡಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದ್ದರಿಂದ ಪ್ರವಾಸಿಗರಿಗೆ ಬೃಂದಾವನ ಪ್ರವೇಶವನ್ನು ನಿಷೇಧಿಸಲಾಗಿತ್ತು.

ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ
ನಂತರದಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಬೃಂದಾವನದ ಉತ್ತರ ಮತ್ತು ದಕ್ಷಿಣ ದ್ವಾರದ ಮಾರ್ಗಗಳಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದ್ದರು. ರಾಯಲ್ ಆರ್ಕಿಡ್ ಹೋಟೆಲ್ ಹಿಂಭಾಗ ಬೋನನ್ನು ಇರಿಸಿ ನಾಯಿಯೊಂದನ್ನು ಕಟ್ಟಿಹಾಕಿ ಚಿರತೆ ಸೆರೆಗೆ ಕಾದು ಕುಳಿತಿದ್ದರು. ಆದರೆ ಇದುವರೆಗೂ ಕೂಡ ಚಿರತೆ ಬೋನಿನ ಬಳಿ ಸುಳಿಯಲೇ ಇಲ್ಲ.
ಮೊದಲು ದಕ್ಷಿಣ ದ್ವಾರದ ಬಳಿ ಕಾಣಿಸಿಕೊಂಡಿದ್ದ ಚಿರತೆ ಅಕ್ಟೋಬರ್ 28ರಂದು ಉತ್ತರ ಬೃಂದಾವನ ಬಳಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದ್ದರಿಂದ ಅಲ್ಲಿಯೂ ಸಹ ಒಂದು ಬೋನ್ ಇಟ್ಟು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯವರು ನಡೆಸಿದ್ದರು. ಆದರೆ ಅದು ಫಲ ನೀಡಲೇ ಇಲ್ಲ.
10 ಕಡೆಗಳಲ್ಲಿ ಟ್ರ್ಯಾಪ್ ಕ್ಯಾಮೆರಾ ಅಳವಡಿಕೆ
ಚಿರತೆ ಚಲನವಲನದ ಮೇಲೆ ನಿಗಾ ಇಡಲು ಹತ್ತು ಕಡೆಗಳಲ್ಲಿ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಕೂಂಬಿಂಗ್ ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ಗಿಡ-ಗಂಟೆಗಳನ್ನೆಲ್ಲಾ ದಕ್ಷಿಣ ದ್ವಾರದ ಬಳಿ ತೆರವುಗೊಳಿಸಿದ್ದರು. ಆದರೂ ಚಿರತೆ ಮಾತ್ರ ಎಲ್ಲಿಯೂ ಕಾಣಸಿಗಲೇ ಇಲ್ಲ. ಕೊನೆಗೆ ಕಾವೇರಿ ನೀರಾವರಿ ನಿಗಮ ಹಾಗೂ ಅರಣ್ಯ ಇಲಾಖೆಯವರು ಸಭೆ ನಡೆಸಿ ಡ್ರೋನ್ ಕ್ಯಾಮೆರಾ ಬಳಸಿ ಚಿರತೆಯ ಇರುವಿಕೆಯ ಜಾಗ ಪತ್ತೆ ಹಚ್ಚುವುದರೊಂದಿಗೆ ಸೆರೆಹಿಡಿಯುವ ಕಾರ್ಯಾಚರಣೆಯ ನಿರ್ಧಾರವನ್ನು ಕೈಗೊಂಡರು. ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ವನ್ಯಜೀವಿ ವಲಯದವರ ನೆರವನ್ನು ಪಡೆಯುವುದಕ್ಕೂ ತೀರ್ಮಾನಿಸಲಾಗಿತ್ತು.