ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸದಿದ್ರೆ ಸೆಪ್ಟೆಂಬರ್ 2ರಂದು ಉಗ್ರ ಹೋರಾಟ, ಮಂಡ್ಯದಲ್ಲಿ JDS ನಾಯಕರ ಎಚ್ಚರಿಕೆ
ಮಂಡ್ಯ, ಆಗಸ್ಟ್, 30 : ರೈತರ ಹಿತ ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ ಜೆಡಿಎಸ್ ನಾಯಕರು, ಎರಡು ದಿನಗಳೊಳಗೆ ನೀರು ನಿಲ್ಲಿಸದಿದ್ದಲ್ಲಿ ಶನಿವಾರ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರ ಜೆಡಿಎಸ್ ಕಚೇರಿಯಲ್ಲಿ ನಡೆದ ಜಂಟಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಕೆ.ಟಿ. ಶ್ರೀಕಂಠೇಗೌಡ, ಡಾ. ಅನ್ನದಾನಿ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರು ಅವರು, ಕೂಡಲೇ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ನಿಲ್ಲಿಸಿ ರಾಜ್ಯದ ರೈತರ ಹಿತ ಕಾಪಾಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಕಾವೇರಿ ನೀರಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ ಈಗ ರೈತರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಈ ಸರ್ಕಾರದಲ್ಲಿ ರೈತರ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದೆ. ಯಾರ ಒತ್ತಡಕ್ಕೆ ಮಣಿದು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಸರ್ವ ಪಕ್ಷ ಸಭೆಯಲ್ಲಿ ರೈತರ ಹಾಗೂ ರಾಜ್ಯದ ಹಿತಕ್ಕೆ ಬದ್ಧ ಎಂದಿದ್ದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಮಂಗಳವಾರ ರಾತ್ರಿಯಿಂದಲೇ ನೀರು ಬಿಟ್ಟಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.
ಎಲ್ಲಾ ಸರ್ಕಾರಗಳು ಈ ಹಿಂದೆ ನೀರು ಬಿಟ್ಟಿರುವುದು ಸತ್ಯ. ಆದರೆ, ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶದ ನಂತರ ಸರ್ವ ಪಕ್ಷಗಳ ಸಭೆ ನಡೆಸಿ ರಾಜ್ಯದ ಹಿತವನ್ನೂ ಗಮನದಲ್ಲಿಟ್ಟುಕೊಂಡು ನೀರು ಬಿಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಏಕಾಏಕಿ ನೀರು ಬಿಟ್ಟು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಓಲೈಕೆಗೆ ಮುಂದಾಗಿದೆ ಎಂದು ಆರೋಪಿಸಿದರು.
ಮೇಕೆದಾಟು ಯೋಜನೆ ಹೆಸರೇಳಿಕೊಂಡು ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಅದನ್ನು ಮರೆತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಧಿಕಾರದ ದಾಹದಿಂದಾಗಿ ತಮಿಳುನಾಡು ಮುಖ್ಯಮಂತ್ರಿಯ ಓಲೈಕೆಗೆ ಮುಂದಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ರಾಜ್ಯದ ರೈತರು ಹಾಗೂ ಜನರನ್ನು ಬಲಿಕೊಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
135 ಸ್ಥಾನಗಳನ್ನು ಗೆದ್ದಿದ್ದೇವೆ ಎಂಬ ಅಹಂನಿಂದ ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ. ಈಗಾಗಲೇ ರೈತರು ಸಾಲ ಸೂಲ ಮಾಡಿ ಒಟ್ಟಲು ಹಾಗೂ ನಾಟಿ ಮಾಡಿದ್ದಾರೆ. ಇಲ್ಲಿಯ ರೈತರ ಬೆಳೆಗಳನ್ನು ರಕ್ಷಿಸದೆ ತಮಿಳುನಾಡಿನವರು ಮೂರನೇ ಬೆಳೆಯಾಗಿ ಬೆಳೆಯುವ ಕುರುವೈ ಬೆಳೆಗೆ ನೀರು ಹರಿಸಿ ಅಲ್ಲಿಂದಲೇ ಅಕ್ಕಿ ತರುವ ಯೋಚನೆ ಮಾಡಿದ್ದಾರೆಯೇ ಎಂದು ಟೀಕಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬೈಸಿಕೊಳ್ಳಲು ನಾನು ಸಿದ್ಧನಿಲ್ಲ. ಅದಕ್ಕಾಗಿ ನೀರು ಬಿಟ್ಟಿದ್ದೇವೆ ಎಂದು ಸಮಜಾಯಿಸಿ ನೀಡುವ ಜಲಸಂಪನ್ಮೂಲ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನರಿಂದ ಬೈಸಿಕೊಳ್ಳಲು ಸಿದ್ಧರಿದ್ದಾರೆಯೇ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳುವುದೊಂದು, ಮಾಡುವುದೊಂದು ಆಗಿದೆ. ರೈತರ ಬಗ್ಗೆ ಬಹಳ ಉದಾಸೀನವಾಗಿ ಮಾತನಾಡುತ್ತಾರೆ. ಕಟ್ಟು ಪದ್ಧತಿಯಲ್ಲಿ 15 ದಿನಕ್ಕೊಮ್ಮೆ ನೀರು ಬಿಟ್ಟರೆ ಬೆಳೆಗಳು ಉಳಿಯುತ್ತವೆಯೇ ಎಂದು ಪ್ರಶ್ನಿಸಿದರು.
ಮಳೆಗಾಗಿ ಪ್ರಾರ್ಥಿಸಿ ಕೃಷ್ಣರಾಜ ಸಾಗರದಲ್ಲಿ ಪೂಜೆ ಮಾಡಿಸಿದವರು ಬೇಕಾಬಿಟ್ಟಿ ಮಾಡಿಸಿದ್ದಾರೆ. ಮಾಂಸ ಬೇಯಿಸಿದ ದೊಡ್ಡ ಪಾತ್ರೆಯಲ್ಲಿ ಬ್ರಾಹ್ಮಣರನ್ನು ಕೂರಿಸಿ ಪೂಜೆ ಮಾಡಿಸಿದ್ದಾರೆ. ಇದರಿಂದಾಗಿ ಮಳೆ ಬರುತ್ತದೆಯೇ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಹೆಸರೇಳದೆ ರವೀಂದ್ರ ಶ್ರೀಕಂಠಯ್ಯ ಹರಿಹಾಯ್ದರು. ಕೈ ತುಂಬಾ ದಾರ ಕಟ್ಟಿಕೊಂಡು ಮೋಡಿ ಮಾಡುವರಂತೆ ಓಡಾಡಿದರೆ ಏನೂ ಮಾಡಲಾಗದು. ಯಾವುದೇ ಪೂಜೆ, ಪುರಸ್ಕಾರ ಮಾಡಬೇಕಾದರೆ ಕ್ರಮಬದ್ಧವಾಗಿ ಮಾಡಬೇಕು. ತೋರಿಕೆಗಾಗಿ ಇಂತಹ ಕಾರ್ಯಗಳನ್ನು ಮಾಡಬಾರದು ಎಂದು ಸಲಹೆ ನೀಡಿದರು.
ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಮಳೆಯಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದ್ದರೂ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಂಸದರಿಗೆ ರೈತರ ಬಗ್ಗೆ ಅಯ್ಯೋ ಎನಿಸುವುದಿಲ್ಲವೇ? ಮಂಡ್ಯ ಸಂಸದರು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಜಿಲ್ಲೆಯ ರೈತರಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ಐಷರಾಮಿ ಹೋಟೆಲ್‌ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಮೋಜು ಮಸ್ತಿ ಮಾಡುತ್ತಿರುವುದು ಎಷ್ಟು ಸರಿ? ಇಂತಹವರನ್ನು ಗೆಲ್ಲಿಸಿ ಏನನ್ನು ನಿರೀಕ್ಷಿಸಬಹುದು ಎಂದು ಟೀಕಿಸಿದರು.
ಕೆಆರ್‌ಎಸ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಸುಳ್ಳು ಹೇಳಿ ರೈತರಲ್ಲಿ ಗೊಂದಲ ಮೂಡಿಸಿದ್ದ ಸಂಸದರು, ಕ್ವಾರಿಗಳಿಗೆ ಭೇಟಿ ನೀಡಿದ್ದಷ್ಟೇ ಸಾಧನೆಯಾಗಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದ್ದರೂ ಕ್ವಾರೆ ವಿಚಾರದಲ್ಲಿ ತೋರಿದ ಆಸಕ್ತಿಯನ್ನು ನೀರಿನ ವಿಚಾರದಲ್ಲಿ ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.












Click it and Unblock the Notifications