KRS: ಕೆಆರ್‌ಎಸ್‌ನಿಂದ 1 ಲಕ್ಷ ಕ್ಯೂಸೆಕ್ಸ್ ನೀರು ಹೊರಕ್ಕೆ- ರಂಗನತಿಟ್ಟು ಪಕ್ಷಧಾಮ ಮುಳುಗಡೆ: ನದಿ ಪಾತ್ರದವರಿಗೆ ಎಚ್ಚರಿಕೆ!
ಮಂಡ್ಯ ಜುಲೈ 25: ಕೃಷ್ಣರಾಜಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಯಾವುದೇ ಕ್ಷಣದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಯಬಿಡುವ ಸಾಧ್ಯತೆಗಳಿದ್ದು, ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.
ಜಲಾಶಯದಿಂದ ಪ್ರಸ್ತುತ 40 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಹೇಮಾವತಿ ಮತ್ತು ಹಾರಂಗಿ ಅಣೆಕಟ್ಟೆಗಳು ಭರ್ತಿಯಾಗಿರುವುದರಿಂದ ಹೆಚ್ಚು ನೀರು ಜಲಾಶಯದ ಕಡೆಗೆ ಹರಿದುಬರುತ್ತಿದೆ. ಹೀಗಾಗಿ ಅಣೆಕಟ್ಟೆಯಿಂದ 80 ಸಾವಿರ ಕ್ಯುಸೆಕ್‌ನಿಂದ 1 ಲಕ್ಷ ಕ್ಯುಸೆಕ್‌ವರೆಗೆ ನೀರು ಹರಿಯಬಿಡುವ ಸಾಧ್ಯತೆಗಳಿರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಚ್ಚರಿಕೆ ನೀಡಿದ್ದಾರೆ.

ಜಲಾಶಯದಿಂದ ಹೆಚ್ಚು ನೀರನ್ನು ಹರಿಯಬಿಟ್ಟಿರುವುದರಿಂದ ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ಪಾಯಿಂಟ್ ಮುಳುಗಡೆಯಾಗಿದೆ. ಪಕ್ಷಿಗಳ ಆಶ್ರಯತಾಣವಾದ ನಡುಗಡ್ಡೆಗಳು ಭಾಗಶಃ ಜಲಾವೃತಗೊಂಡಿವೆ. ನೀರು ಮತ್ತಷ್ಟು ಹೆಚ್ಚಾದರೆ ವಾಕಿಂಗ್ ಪಾಥ್‌ಗೂ ನೀರು ನುಗ್ಗುವ ಸಾಧ್ಯತೆಗಳಿವೆ. ಪ್ರವಾಸಿಗರ ವೀಕ್ಷಣೆಗೂ ನಿರ್ಬಂಧ ವಿಧಿಸಲಾಗಿದ್ದು, ಗೇಟ್ ಬಳಿಯೇ ಪ್ರವಾಸಿಗರನ್ನ ತಡೆದು ಹೊರಗೆ ಕಳುಹಿಸಲಾಗುತ್ತಿದೆ.
ಮೇ 15ರಂದು ಮಳೆ ಕೊರತೆಯಿಂದಾಗಿ ಜಲಾಶಯ 79.65 ಅಡಿಗೆ ಕುಸಿದಿತ್ತು. ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವ ಆತಂಕ ಎದುರಾಗಿತ್ತು. ಜೂ.28ರಿಂದ ಜಲಾಶಯದ ಒಳಹರಿವು ಹೆಚ್ಚಾಗಲು ಆರಂಭಿಸಿತು. 3856 ಕ್ಯುಸೆಕ್ ಇದ್ದ ಒಳಹರಿವು 13457 ಕ್ಯುಸೆಕ್‌ಗೆ ಏರಿತು. ಜು.3ರಂದು 14135 ಕ್ಯುಸೆಕ್‌ನಷ್ಟು ನೀರು ಹರಿದುಬಂದಿದ್ದರಿಂದ ಜು.5ಕ್ಕೆ ಜಲಾಶಯದ ನೀರಿನ ಮಟ್ಟ 100 ಅಡಿಯನ್ನು ತಲುಪಿತ್ತು.

ಆನಂತರ ಜಲಾಶಯದ ಒಳಹರಿವಿನ ಪ್ರಮಾಣ ಮತ್ತೆ ಕುಸಿದು ಜು.6ರಂದು 6185ಕ್ಯುಸೆಕ್ ಹರಿದುಬರುತ್ತಿತ್ತು. ಬಳಿಕ ಒಳಹರಿವು ಒಮ್ಮೊಮ್ಮೆ ಏರಿಕೆಯಾಗುತ್ತಾ ಮತ್ತೊಮ್ಮೆ ಕುಸಿಯುತ್ತಲೇ ಬಂದಿತ್ತು. ಜು.14ರಂದು ಒಳಹರಿವು 2898 ಕ್ಯುಸೆಕ್‌ಗೆ ಕುಸಿದು ಆತಂಕ ಮೂಡಿಸಿತ್ತು. ಜು.15ರಂದು ಮತ್ತೆ ಒಳಹರಿವಿನ ಪ್ರಮಾಣ 10,121ಕ್ಯುಸೆಕ್‌ಗೆ ಏರಿಕೆಯಾಯಿತು. ನಂತರ 19,202 ಕ್ಯುಸೆಕ್, ಬಳಿಕ 25933 ಕ್ಯುಸೆಕ್, ಆನಂತರ 35997 ಕ್ಯುಸೆಕ್, ತದನಂತರದಲ್ಲಿ 44617 ಕ್ಯುಸೆಕ್, ಕೊನೆಗೆ 70850 ಕ್ಯುಸೆಕ್ ನೀರು ಹರಿದುಬರುವುದರೊಂದಿಗೆ ಕೇವಲ 5 ದಿನಗಳಲ್ಲಿ 15 ಟಿಎಂಸಿ ನೀರು ಹರಿದುಬಂದಿತು.
ಕಳೆದ ವರ್ಷ ಮಳೆ ಕೊರತೆಯಿಂದ ಜಲಾಶಯ ಭರ್ತಿಯಾಗಿರಲಿಲ್ಲ. ಕೇವಲ 114 ಅಡಿಯವರೆಗೆ ಮಾತ್ರ ತಲುಪಲು ಸಾಧ್ಯವಾಗಿತ್ತು. ಹೀಗಾಗಿ ಮುಂಗಾರು ಹಂಗಾಮಿಗೆ ಸಮರ್ಪಕವಾಗಿ ನೀರು ಹರಿಸಲಾಗಲಿಲ್ಲ. ಬೇಸಿಗೆ ಬೆಳೆಗೂ ನೀರು ಕೊಡುವುದಕ್ಕೆ ಸಾಧ್ಯವಾಗಲೂ ಇಲ್ಲ. ಪ್ರಾಧಿಕಾರದ ನಿರಂತರ ಆದೇಶಗಳಿಂದ ಜಲಾಶಯದಲ್ಲಿ ಸಂಗ್ರಹವಾಗಿದ್ದ ಭಾಗಶಃ ನೀರೆಲ್ಲವೂ ತಮಿಳುನಾಡಿಗೆ ಹರಿಸಲಾಗಿತ್ತು.
ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಜಲಾಶಯಗಳು ಭರ್ತಿಯಾಗಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗುತ್ತಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರಗಳು ನೀರು ಹರಿಸುವಂತೆ ಸೂಚಿಸುವ ಅಗತ್ಯವೇ ಇಲ್ಲದಂತೆ ಕರ್ನಾಟದ ಕಾವೇರಿ ಪ್ರಾಂತ್ಯದಿಂದ ತಮಿಳುನಾಡಿಗೆ ನಿರಂತರವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಹೋಗುತ್ತಿದೆ.
ಮಾನ್‌ಸೂನ್ ಮಾರುತಗಳು ಕೇರಳ ಮತ್ತು ಕರ್ನಾಟಕದಲ್ಲಿದ್ದು, ಮುಂದಿನ ದಿನಗಳಲ್ಲಿ ತಮಿಳುನಾಡಿನತ್ತ ಸಾಗುತ್ತವೆ. ಕರ್ನಾಟಕದಲ್ಲಿ ಮಳೆ ಕಡಿಮೆಯಾದ ಬಳಿಕ ತಮಿಳುನಾಡಿನಲ್ಲಿ ಮಳೆ ವ್ಯಾಪಕವಾಗುವ ಸಾಧ್ಯತೆಗಳಿದ್ದು, ಈಗಾಗಲೇ ಮೆಟ್ಟೂರು ಜಲಾಶಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಅಲ್ಲೂ ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳಲಾಗದೆ ಸಮುದ್ರದ ಪಾಲಾಗುತ್ತದೆ.
ಈ ವಿಚಾರವನ್ನು ಕಾವೇರಿ ಪ್ರಾಧಿಕಾರದ ಗಮನಕ್ಕೆ ತಂದು ಮೇಕೆದಾಟು ಯೋಜನೆ ಅಥವಾ ಬೇರೆ ನೀರಾವರಿ ಯೋಜನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸುವುದು ಸೂಕ್ತ ಎಂಬುದು ನೀರಾವರಿ ತಜ್ಞರ ಅಭಿಪ್ರಾಯವೂ ಆಗಿದೆ.












Click it and Unblock the Notifications