Get Updates
Get notified of breaking news, exclusive insights, and must-see stories!

ಮಂಡ್ಯದಲ್ಲಿ ಮಲೆನಾಡು ಸೃಷ್ಟಿಸಿದ ರೈತ ಸುಬ್ಬೇಗೌಡ: ಏನಿದರ ವಿಶೇಷ?

ಮಂಡ್ಯ, ಜನವರಿ 29: ಮಂಡ್ಯ ಜಿಲ್ಲೆಯಲ್ಲಿ ಭತ್ತ, ಕಬ್ಬು, ತೆಂಗು, ಹೂವು ಹೀಗೆ ಕೆಲವೇ ಕೆಲವು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇವುಗಳ ನಡುವೆ ಮಲೆನಾಡಿನಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳನ್ನು ಕೂಡ ಬೆಳೆಯಬಹುದು ಎಂಬುದನ್ನು ಕೃಷ್ಣರಾಜಪೇಟೆ ತಾಲೂಕಿನ ವಿಠಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಗಾಡಿಗನಹಳ್ಳಿಯ ಪ್ರಗತಿಪರ ರೈತ ಸುಬ್ಬೇಗೌಡರು ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಕರಿಮೆಣಸು ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಪಡೆದು ಇತರ ರೈತರಿಗೆ ಇಲ್ಲಿ ವಾಣಿಜ್ಯ ಬೆಳೆಯನ್ನು ಬೆಳೆದು ಅದರಿಂದ ಕೈತುಂಬಾ ಆದಾಯ ಪಡೆಯಲು ಅಡ್ಡಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕೃಷಿಯೇ ಹಾಗೆ ಅದು ತನ್ನ ಕೈ ಹಿಡಿದವರನ್ನು ಯಾವತ್ತೂ ಬಿಡುವುದಿಲ್ಲ. ಅದನ್ನು ನಿಷ್ಠೆ ಶ್ರದ್ಧೆಯಿಂದ ಮಾಡಬೇಕಷ್ಟೆ. ಅದು ಬಂಡವಾಳ ಹಾಕಿ ಲಾಭ ತೆಗೆಯುವಂತಹದಲ್ಲ. ಅದನ್ನು ಪ್ರೀತಿಸುತ್ತಾ ಶ್ರಮ ಪಡಬೇಕು. ಆಗ ಅದು ಕೈಹಿಡಿಯುತ್ತದೆ. ಅದರ ಬಗ್ಗೆ ಆಸಕ್ತಿ, ಪ್ರೀತಿ ಇಲ್ಲದೆ ಹೋದರೆ ಅದರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಶ್ರಮಪಟ್ಟು ದುಡಿದವರನ್ನು ಕಾಪಾಡುತ್ತದೆ. ಇದಕ್ಕೆ ಸಾಕ್ಷಿ ರೈತ ಸುಬ್ಬೇಗೌಡರು ಎಂದರೆ ತಪ್ಪಾಗಲಾರದು. ಅವರು ಕೃಷಿಯನ್ನು ತಪ್ಪಸ್ಸಿನಂತೆ ಮಾಡಿದ ಫಲದಿಂದ ಇವತ್ತು ಅದರಲ್ಲಿ ಯಶಸ್ಸು ಕಂಡಿದ್ದಾರೆ.

KR Pete Farmer Subbe Gowda Innovative Farming Practices Boosts Income In Mandya

ಇವತ್ತು ಕೃಷಿ ಬಗ್ಗೆ ಆಸಕ್ತಿ ಇರುವವರು ಕೃಷ್ಣರಾಜಪೇಟೆ ತಾಲೂಕಿನ ವಿಠಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಗಾಡಿಗನಹಳ್ಳಿಯ ಬಳಿ 5 ಎಕರೆ ಪ್ರದೇಶದಲ್ಲಿರುವ ಕರಿಮೆಣಸು ತೋಟಕ್ಕೆ ಹಾಗೆಯೇ ದೊದ್ದನಕಟ್ಟೆ ಬಳಿಯಿರುವ 20ಎಕರೆ ಪ್ರದೇಶದ ತೋಟಕ್ಕೆ ತೆರಳಿದ್ದೇ ಆದರೆ ಅಚ್ಚರಿ ಮೂಡುತ್ತದೆ. ಅಷ್ಟೇ ಅಲ್ಲ ಅದೊಂದು ಕೇವಲ ತೋಟವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ ಅದು ಹಸಿರಿನ ಸ್ವರ್ಗದಂತೆ ಭಾಸವಾಗುತ್ತದೆ. ಕೃಷಿ ಮಾಡಬೇಕೆನ್ನುವವರಿಗೆ ಅದೊಂದು ಸಂಶೋಧನಾಲಯವಾಗಿಯೂ, ಕಲಿಕೆಯ ಕ್ಷೇತ್ರವಾಗಿಯೂ ಕಂಗೊಳಿಸುತ್ತದೆ.

ಸುಬ್ಬೇಗೌಡರ ತೋಟದಲ್ಲಿ ಏನಿದೆ? ಏನಿಲ್ಲ?

ಇಲ್ಲಿ ಏನಿದೆ? ಏನಿಲ್ಲ ಎನ್ನುವುದನ್ನು ಹೇಳಲಾಗುವುದಿಲ್ಲ. ಮಲೆನಾಡಿನಲ್ಲಿ ಬೆಳೆಯುವ ಬೆಳೆಗಳಾದ ಕರಿಮೆಣಸು, ಏಲಕ್ಕಿ, ಚಕ್ಕೆ, ಜಾಯಿಕಾಯಿ, ಅರಿಶಿನ, ಶುಂಠಿ, ಪನ್ನೀರು, ಇಂಗು, ಕಾಫಿ, ತೆಂಗು, ಅಡಿಕೆ, ಕೋಕ್, ಸೀಬೆ, ಸಪೋಟ, ಪಪ್ಪಾಯ, ಅಂಜೂರಾ, ಸಿಲ್ವರ್, ತೇಗ ಹೀಗೆ ಒಂದೇ ಎರಡೇ ಹತ್ತಾರು ಬೆಳೆಗಳು ತೋಟಕ್ಕೆ ಕಳೆಕಟ್ಟಿವೆ. ಈ ಬೆಳೆಯಿಂದ ಅವರು ವರ್ಷಕ್ಕೆ 50ಲಕ್ಷದಷ್ಟು ಆದಾಯವನ್ನು ಪಡೆಯುತ್ತಿದ್ದಾರೆ ಎಂದರೆ ಅಚ್ಚರಿಯಾಗಬಹುದು ಆದರೆ ಅದೆಲ್ಲವೂ ಸುಲಭವಾಗಿ ಬಂದಿದ್ದಲ್ಲ. ಕಠಿಣ ಪರಿಶ್ರಮದ ಫಲ ಎಂದರೆ ತಪ್ಪಾಗಲಾರದು.

KR Pete Farmer Subbe Gowda Innovative Farming Practices Boosts Income In Mandya

ಸದ್ಯ ಚಿಕ್ಕಗಾಡಿಗನಹಳ್ಳಿಯ ಬಳಿ 5ಎಕರೆ ಭೂಮಿಯಲ್ಲಿ ಕರಿಮೆಣಸು ಬೆಳೆದು 29ಲಕ್ಷ ರೂಪಾಯಿ ಆದಾಯ ಪಡೆದಿದ್ದು, ಮಲೆನಾಡಿಗರೇ ಅಚ್ಚರಿಪಡುವಂತಾಗಿದೆ. ಅಷ್ಟೇ ಅಲ್ಲದೆ ಒಣಭೂಮಿಯಲ್ಲಿಯೂ ಕರಿಮೆಣಸು ಬೆಳೆದು ಯಶಸ್ಸು ಪಡೆಯಬಹುದು ಎಂಬುದನ್ನು ತೋರಿಸಿದ್ದಾರೆ. ಇನ್ನು ಇವರು ಕಾಫಿ, ಏಲಕ್ಕಿ, ಚಕ್ಕೆ, ಜಾಕಾಯಿ, ಪತ್ರೆ, ಅಂಜೂರ, ಕಿತ್ತಳೆ, ಸಪೋಟ, ಮಾವು, ತೆಂಗು, ಅಡಿಕೆ, ಕೋಕ್, ಮೆಣಸು ಹೀಗೆ ಎಲ್ಲಾ ರೀತಿಯ ಸಾಂಬಾರ ಪದಾರ್ಥಗಳನ್ನು ನೈಸರ್ಗಿಕವಾಗಿ ಸಾವಯವ ಪದ್ಧತಿಯಲ್ಲಿಯೇ ಬೆಳೆಯುತ್ತಿರುವುದು ವಿಶೇಷವಾಗಿದೆ.

ಇವರ ಕೃಷಿ ಪದ್ಧತಿ ಹೇಗಿದೆ ಗೊತ್ತಾ?

ಇನ್ನು ಇವರ ಕೃಷಿ ಪದ್ಧತಿ ವಿಶೇಷ ರೀತಿಯಲ್ಲಿದೆ. ಜತೆಗೆ ರೈತರಲ್ಲಿ ಸಾವಯವ ಕೃಷಿ ಜಾಗೃತಿ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಇವರು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ರೈತರನ್ನು ಸಂಘಟಿಸಿ ಪುಣ್ಯ ಭೂಮಿ ರೈತ ಉತ್ಪಾದಕರ ಸಾವಯವ ಕೃಷಿ ಪದ್ದತಿಯ ಬೇಸಾಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಬಳಕೆಯಿಂದ ದೂರವಿರುವಂತೆ ಮಾಡಿ ನೈಸರ್ಗಿಕ ಪದ್ಧತಿಯಲ್ಲಿ ಬೇಸಾಯ ಮಾಡಿ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಇದರಲ್ಲಿ ಯಶಸ್ಸು ಕಂಡಿದ್ದಾರೆ.

KR Pete Farmer Subbe Gowda Innovative Farming Practices Boosts Income In Mandya

ಇವತ್ತು ಸಾವಯವ ಕೃಷಿ ಮಾಡಿ ಎಂದು ಹೇಳುವುದು ಸುಲಭ ಆದರೆ ಅದನ್ನು ಮಾಡಿ ತೋರಿಸುವುದು ಕಷ್ಟ. ಆದರೆ ಸುಬ್ಬೇಗೌಡರು ತಾವು ಸಾವಯವ ಕೃಷಿ ಮಾಡುವ ಮೂಲಕ ಇತರರನ್ನು ಪ್ರೇರೇಪಿಸುತ್ತಿರುವುದು ವಿಶೇಷವಾಗಿದೆ. ನಾಟಿ ತಳಿಯ ರಾಸುಗಳ ಗಂಜಲ ಹಾಗೂ ಸಗಣಿಯನ್ನು ಬಳಸಿ, ಸಾವಯವ ಬೆಲ್ಲ, ಹುರುಳಿ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬಳಸಿ ಜೀವಾಮೃತವನ್ನು ತಯಾರಿಸಿ ಹನಿ ನೀರಾವರಿಯ ಮೂಲಕ ಗಿಡಗಳಿಗೆ ಹರಿಸಿ ಬಂಪರ್ ಫಸಲು ಬರುವಂತೆ ಮಾಡುವುದು ಇವರ ಕೃಷಿ ಶೈಲಿಯಾಗಿದೆ.

ಕೃಷಿಯತ್ತ ಪ್ರೋತ್ಸಾಹಿಸುವ ಕಾರ್ಯದಲ್ಲಿ ನಿರತ

ವಿಶೇಷತೆ ಏನೆಂದರೆ ಸುಬ್ಬೇಗೌಡ ಅವರು ಪುತ್ರ ಸುರೇಶ್ ಅವರೊಂದಿಗೆ ಕೃಷಿಯನ್ನೇ ತಮ್ಮ ಉಸಿರಾಗಿಸಿಕೊಂಡು, ಗಿಡಮರಗಳೊಂದಿಗೆ ಮಾತನಾಡುತ್ತಾ, ಭೂಮಿಯನ್ನು ಗೌರವಿಸಿ ಶ್ರದ್ಧಾ ಭಕ್ತಿಯಿಂದ ಬೇಸಾಯ ಮಾಡಿ ವರ್ಷಕ್ಕೆ 50ಲಕ್ಷ ರೂ.ಗಳಿಗೂ ಹೆಚ್ಚಿನ ಆದಾಯ ಪಡೆದಿದ್ದಾರೆ. ಜತೆಗೆ ಇವತ್ತು ಕೃಷಿಯಿಂದ ವಿಮುಖರಾಗಿ ಬೇಸಾಯ ಚಟುವಟಿಕೆಗಳಿಂದ ದೂರ ಸರಿಯುತ್ತಿರುವ ಯುವ ಜನಾಂಗವನ್ನು ಮತ್ತೆ ಬೇಸಾಯಕ್ಕೆ ಕರೆ ತರುವ ಕೆಲಸವನ್ನು ಮಾಡಿ ಕೃಷಿ ಪಂಡಿತರೆನಿಸಿಕೊಂಡಿದ್ದಾರೆ.

ನೈಸರ್ಗಿಕವಾಗಿ ಸಾವಯವ ಕೃಷಿಯನ್ನು ಮಾಡಬೇಕೆಂಬ ಹಂಬಲ ಹೊಂದಿರುವ ನಾಡಿನ ಯುವ ಜನರು ಹಾಗೂ ರೈತರಿಗೆ ಕೃಷಿಯ ಬಗ್ಗೆ ಮಾರ್ಗದರ್ಶನ ನೀಡುತ್ತಿರುವ ಸುಬ್ಬೆಗೌಡರ ತೋಟವು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಕೇಂದ್ರದಿಂದ ಕೇವಲ 10ಕಿ.ಮೀ ದೂರದಲ್ಲಿದೆ. ಕೆ.ಆರ್. ಪೇಟೆಯಿಂದ ಹೊಸಹೊಳಲು ಮಾರ್ಗವಾಗಿ ವಿಠಲಾಪುರಕ್ಕೆ ಹೋಗುವ ಮಾರ್ಗದ ಮಧ್ಯದಲ್ಲಿ ಸಿಗುವ ದೊದ್ದನಕಟ್ಟೆ ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿರುವ ಸುಬ್ಬೆಗೌಡರ ತೋಟಕ್ಕೆ ಹೋಗಿದ್ದೇ ಆದರೆ ಅವರ ಕೃಷಿ ಕೃಷಿ ಶೈಲಿಯನ್ನು ಹತ್ತಿರದಿಂದ ನೋಡಿ ಮತ್ತು ಅವರಿಂದ ಕೃಷಿಯ ಬಗ್ಗೆ ಮಾರ್ಗದರ್ಶನ ಪಡೆದುಕೊಂಡು ಬರಲು ಸಾಧ್ಯವಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+