ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್‌ನಲ್ಲಿ ಭಿನ್ನರಾಗ ಬಿಜೆಪಿಗೆ ವರದಾನ..?
ಮಂಡ್ಯ, ಜನವರಿ 10: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸುತ್ತಾ ಬಂದಿದ್ದ ಡಾ.ನಾರಾಯಣ ಗೌಡರು ಬಳಿಕ ಬಿಜೆಪಿಗೆ ಸೇರಿ ಸಚಿವರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜೊತೆಗೆ ರಾಜಕೀಯದಲ್ಲಿ ಇದೆಲ್ಲವೂ ಸಾಮಾನ್ಯವೇ. ಆದರೆ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಬಿಜೆಪಿ ಖಾತೆ ತೆರೆದಿರುವುದು ದಳಪತಿಗಳ ಆಕ್ರೋಶಕ್ಕೆ ಕಾರಣವಾಗಿರುವುದಂತೂ ನಿಜ.
ಈಗಾಗಲೇ ಜೆಡಿಎಸ್ ನಾಯಕರು ಏನೇ ಆಗಲಿ ಕೆ.ಆರ್.ಪೇಟೆಯಲ್ಲಿ ಗೆದ್ದೇ ಗೆಲ್ಲಬೇಕು. ಅಷ್ಟೇ ಅಲ್ಲದೆ ಪಕ್ಷಕ್ಕೆ ದ್ರೋಹ ಮಾಡಿರುವ ಡಾ.ನಾರಾಯಣಗೌಡ ಅವರನ್ನು ಸೋಲಿಸಿಯೇ ತೀರಬೇಕೆಂಬ ಪಣತೊಟ್ಟಿರುವುದು ಗೊತ್ತೇ ಇದೆ. ಆದರೆ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಬಳಿಕ ಜೆಡಿಎಸ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದು ಇದರ ಲಾಭ ಮತ್ತೆ ಬಿಜೆಪಿಗೆ ಆದರೂ ಅಚ್ಚರಿಯಿಲ್ಲ.
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಡಾ.ನಾರಾಯಣ ಗೌಡರು ಗೆಲುವು ಸಾಧಿಸಿದ್ದರು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪರಿಣಾಮ ಉಪಚುನಾವಣೆ ನಡೆದಿತ್ತು. ಈ ಸಂದರ್ಭ ಡಾ.ನಾರಾಯಣಗೌಡರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಪಡೆಯುವುದರೊಂದಿಗೆ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದು ಗಮನಸೆಳೆದಿದ್ದರು.

ಬಿಜೆಪಿಗೆ ಪ್ರಬಲ ಪೈಪೋಟಿ ಸಾಧ್ಯತೆ
ಚುನಾವಣೆ ಬಳಿಕವೂ ಕ್ಷೇತ್ರದಲ್ಲಿ ಬಿಜೆಪಿಯನ್ನು ಸಂಘಟಿಸಿ ತಳಮಟ್ಟದಿಂದ ಕ್ಷೇತ್ರದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಖಾತೆ ತೆರೆಯುತ್ತಿದ್ದಂತೆಯೇ ಬಿಜೆಪಿ ನಾಯಕರಲ್ಲಿ ಹುಮ್ಮಸ್ಸು ಬಂದಿದ್ದು ಮಂಡ್ಯ ಜಿಲ್ಲೆಯತ್ತ ಹೆಚ್ಚಿನ ನಿಗಾವಹಿಸಿ ಇತರೆ ಕ್ಷೇತ್ರಗಳನ್ನು ಗೆಲ್ಲುವ ತಂತ್ರ ರೂಪಿಸಿದ್ದಾರೆ. ಈಗಾಗಲೇ ಕೇಂದ್ರದಿಂದ ಅಮಿತ್ ಶಾ ಅವರನ್ನು ಜಿಲ್ಲೆಗೆ ಕರೆಯಿಸಿ ಸಮಾವೇಶ ನಡೆಸಿದ್ದಾರೆ.
ಮಂಡ್ಯದ ಇತರೆ ಕ್ಷೇತ್ರಗಳಲ್ಲಿ ಗೆಲ್ಲುವುದು ಒಂದು ಕಡೆಯಾದರೆ ಸದ್ಯ ಖಾತೆ ತೆರೆದಿರುವ ಕೆ.ಆರ್.ಪೇಟೆ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಬಿಜೆಪಿ ಮುಂದಿರುವ ಸವಾಲ್ ಆಗಿದೆ. ಇಲ್ಲಿ ಅಭ್ಯರ್ಥಿ ಡಾ.ನಾರಾಯಣಗೌಡ ಮತ್ತು ಪಕ್ಷಕ್ಕೆ ಪ್ರತಿಷ್ಠೆಯಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿರುವುದರಿಂದ ಮೂರು ಪಕ್ಷಗಳಿಗೂ ಗೆಲುವು ಅಷ್ಟೊಂದು ಸುಲಭವಾಗಿರಲಾರದು.

ದೇವರಾಜುರವರಿಗೆ ಟಿಕೆಟ್ ಸಿಗದ ಬೇಸರ
ಹೇಗಾದರೂ ಮಾಡಿ ಡಾ.ನಾರಾಯಣಗೌಡರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲು ಜೆಡಿಎಸ್ ಹಾತೊರೆಯುತ್ತಿದೆ. ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡಿರುವ ಕೋಪ ಇದ್ದೇ ಇದೆ. ಹೀಗಾಗಿ ಬಿಜೆಪಿ ಪಕ್ಷಕ್ಕಿಂತ ಹೆಚ್ಚಾಗಿ ನಾರಾಯಣಗೌಡರ ಮೇಲೆ ದ್ವೇಷವಿದೆ. ಇದನ್ನು ತೀರಿಸಿಕೊಳ್ಳುವುದಕ್ಕೆ ಈ ಬಾರಿಯ ವಿಧಾನಸಭಾ ಚುನಾವಣೆ ವೇದಿಕೆಯಾಗಿದೆ. ಆದರೆ ಈಗ ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿರುವುದು ನಾರಾಯಣಗೌಡರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ.
ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಯುವಮುಖಂಡ ಜಿಲ್ಲಾ ಪಂಚಾಯಿತಿ ಮಾಜಿಸದಸ್ಯ ಹೆಚ್.ಟಿ.ಮಂಜು ಅವರಿಗೆ ಟಿಕೆಟ್ ನೀಡಿದೆ. ಇದು ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಪರಾಜಿತರಾಗಿರುವ ಬಿ.ಎಲ್.ದೇವರಾಜು ಸೇರಿದಂತೆ ತಮ್ಮಪಕ್ಷದ ಇತರೆ ಆಕಾಂಕ್ಷಿಗಳಿಗೆ ಮನಸ್ತಾಪ ಮೂಡುವಂತೆ ಮಾಡಿದೆ. ಅದರಲ್ಲೂ ಕಳೆದ ಉಪಚುನಾವಣೆಯಲ್ಲಿ ಡಾ.ನಾರಾಯಣಗೌಡರ ವಿರುದ್ಧವಾಗಿ ಜೆಡಿಎಸ್ ನಿಂದ ಸ್ಪರ್ಧಿಸಿ ಸೋಲು ಕಂಡು ಈ ಬಾರಿ ತನಗೆ ಟಿಕೆಟ್ ನೀಡುತ್ತಾರೆಂಬ ಹುಮ್ಮಸ್ಸಿನಲ್ಲಿದ್ದ ದೇವರಾಜು ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಜೊತೆಗೆ ಹೇಗಾದರೂ ಮಾಡಿ ಟಿಕೆಟ್ ತಪ್ಪಿಸಬೇಕೆಂಬ ಹಠಕ್ಕೆ ಬಿದ್ದಿದ್ದಾರೆ.

ಭಿನ್ನಮತ ಶಮನಕ್ಕೆ ನಾಯಕರ ಯತ್ನ
ಈಗಾಗಲೇ ಈ ಸಂಬಂಧ ಬೇಸರ ವ್ಯಕ್ತಪಡಿಸಿರುವ ಟಿಕೆಟ್ ಆಕಾಂಕ್ಷಿಯಾಗಿರುವ ದೇವರಾಜು ಅವರು, ಹಿರಿಯನಾಗಿರುವ ನನಗೆ ಅನ್ಯಾಯವಾಗಿದೆ. ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆಯಾಗಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ನನಗೆ ಪಕ್ಷದ 'ಬಿ'ಫಾರಂ ಕೊಡಿಸಿಕೊಡುವ ದಿಕ್ಕಿನಲ್ಲಿ ಸಹಾಯ ಮಾಡಬೇಕು ಎಂದು ತಾಲೂಕಿನ ಗ್ರಾಮಗಳಿಗೆ ತೆರಳಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಮುಂದೆ ಅವಲತ್ತುಕೊಳ್ಳುತ್ತಿದ್ದಾರೆ.
ಇನ್ನು ವರಿಷ್ಟರ ಮುಂದೆ ಶಕ್ತಿಪ್ರದರ್ಶನಕ್ಕೆ ತಯಾರಿ ನಡೆಸಿದರೂ ಅಚ್ಚರಿಯಿಲ್ಲ. ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದ್ದರೂ ಅದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಿತವಾಗಿರುವ ಮಂಜು ಅವರು ಮಾತ್ರ ಪಕ್ಷದೊಳಗಿನ ಭಿನ್ನಾಭಿಪ್ರಾಯ ಹಾಗೂ ಮುಖಂಡರ ನಡುವಿನ ಅಸಮಧಾನವನ್ನು ಸರಿಪಡಿಸಿಕೊಂಡು ಮುನ್ನುಗ್ಗಿ ಖಂಡಿತವಾಗಿಯೂ ವಿಜಯಶಾಲಿಯಾಗುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಮಂಡ್ಯದಲ್ಲಿ ರಾಜಕೀಯ ಜಿದ್ದಾಜಿದ್ದಿ ಆರಂಭ
ಜೆಡಿಎಸ್ ಪಕ್ಷದ ನಾಯಕರು ಕ್ಷೇತ್ರದಲ್ಲಿ ಪಕ್ಷದೊಳಗೆ ಎದ್ದಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸದೆ ಹೋದರೆ ಅದರ ಲಾಭ ಬಿಜೆಪಿಗೆ ಆಗುವುದರಲ್ಲಿ ಸಂಶಯವಿಲ್ಲ. ಆದರೆ ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿಯಿರುವುದರಿಂದ ರಾಜಕೀಯವಾಗಿ ಇನ್ನು ಏನೇನೆಲ್ಲ ಬೆಳವಣಿಗೆ ಆಗುತ್ತದೆಯೋ ಗೊತ್ತಿಲ್ಲ. ಆದರೆ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ಈಗಿನಿಂದಲೇ ಶುರುವಾಗಿದ್ದು, ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸುತ್ತದೆ ಎನ್ನುವುದರ ಮೇಲೆ ಚುನಾವಣಾ ಬೆಳವಣಿಗೆಗಳು ನಡೆಯಲಿದೆ.












Click it and Unblock the Notifications