Mandya: ಅನೈರ್ಮಲ್ಯದ ತಾಣವಾದ ಮಂಡ್ಯ ಕಿಕ್ಕೇರಿ ಎಳನೀರು ಮಾರುಕಟ್ಟೆ..!

ಮಂಡ್ಯ, ಅಕ್ಟೋಬರ್‌ 23: ಪ್ರತಿದಿನವೂ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ಕೇಂದ್ರದಲ್ಲಿರುವ ಎಳನೀರು ಮಾರುಕಟ್ಟೆ ಪರಿಸ್ಥಿತಿ ನೋಡಿದರೆ ನಿಜಕ್ಕೂ ಅಚ್ಚರಿ ಮತ್ತು ಬೇಸರ ಎರಡು ಏಕಕಾಲದಲ್ಲಿ ಆಗುತ್ತದೆ. ಜತೆಗೆ ಆಡಳಿತ ವ್ಯವಸ್ಥೆಯ ಕುರಿತಂತೆ ಅಸಹ್ಯ ಮೂಡುತ್ತದೆ. ಇದು ಎಳನೀರು ಮಾರುಕಟ್ಟೆನಾ? ಎಂಬ ಪ್ರಶ್ನೆಯೂ ಕಾಡುತ್ತದೆ.

ಯಾರಾದರೂ ಕಿಕ್ಕೇರಿ ಎಳನೀರು ಮಾರುಕಟ್ಟೆಗೆ ಕಾಲಿಟ್ಟಿದ್ದೇ ಆದರೆ ಅಲ್ಲಿನ ಅವ್ಯವಸ್ಥೆಯನ್ನು ಮರುಕಪಡುವುದಂತು ನಿಜ. ಏಕೆಂದರೆ ಇಡೀ ಮಾರುಕಟ್ಟೆ ಆಗರವಾಗಿದ್ದು, ಕೊಳಚೆ ನೀರು ಹಾಗೂ ಅನೈರ್ಮಲ್ಯದಿಂದ ಗಬ್ಬೆದ್ದು ನಾರುತ್ತಿದೆ. ಇದರ ನಡುವೆ ದಿನನಿತ್ಯವೂ ಕಾರ್ಮಿಕರು ಕೆಲಸ ಮಾಡುತ್ತಿದ್ದು ಅವರ ಆರೋಗ್ಯದ ಗತಿಯೇನು? ಎಂದು ಜನ ಪ್ರಶ್ನಿಸುತ್ತಿದ್ದಾರೆ.

Kikkeri Tender Coconut Market Converted As An Unhygienic Place

ಈ ಎಳನೀರು ಯಾರ್ಡ್‌ನಲ್ಲಿ ನಡೆಯುತ್ತಿರುವ ವ್ಯವಹಾರದಿಂದ ಎಪಿಎಂಸಿಗೆ ದಿನವಹಿ ಸಾವಿರಾರು ರೂಪಾಯಿ ಆದಾಯ ವರ್ತಕರಿಂದ ಬರುತ್ತಿದ್ದರೂ ಕೃಷಿ ಮಾರುಕಟ್ಟೆಯ ಅಧಿಕಾರಿಗಳು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ವರ್ತಕರು ಹಾಗೂ ರೈತರಿಗೆ ದೊರಕಿಸಿಕೊಡುವಲ್ಲಿ ವಿಫಲರಾಗಿರುವುದು ಎದ್ದು ಕಾಣಿಸುತ್ತಿದೆ.

ಮಂಡ್ಯದ ಎಳನೀರಿಗೆ ಬಹು ಬೇಡಿಕೆ

ಹಾಗೆನೋಡಿದರೆ ಮಂಡ್ಯ ಜಿಲ್ಲೆಯ ಎಳನೀರಿಗೆ ಉತ್ತಮ ಬೇಡಿಕೆಯಿದೆ. ಹೀಗಾಗಿ ಇಲ್ಲಿಂದ ಎಳನೀರನ್ನು ಕೊಂಡೊಯ್ಯಲು ಬೇರೆ ರಾಜ್ಯಗಳಿಂದ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದರಲ್ಲೂ ಕಿಕ್ಕೇರಿ ಎಳನೀರು ಮಾರುಕಟ್ಟೆಗೆ ವಿಶೇಷ ಸ್ಥಾನವಿದೆ. ಏಕೆಂದರೆ ಕೆ.ಆರ್.ಪೇಟೆ ತಾಲೂಕಿನಲ್ಲಿ ದೊರೆಯುವ ಎಳನೀರು ಗುಣಮಟ್ಟ ಹಾಗೂ ಶ್ರೇಷ್ಠತೆಯನ್ನು ಹೊಂದಿದೆ. ಹೀಗಾಗಿ ಕಿಕ್ಕೇರಿ ಎಳನೀರು ಮಾರುಕಟ್ಟೆಯ ಎಳನೀರಿಗೆ ತುಸು ಬೇಡಿಕೆ ಜಾಸ್ತಿಯೇ ಎನ್ನಬೇಕು.

ಇದರಿಂದಾಗಿ ರಾಜ್ಯದ ಮಂಗಳೂರು, ಬೆಂಗಳೂರು, ಬೀದರ್, ವಿಜಯಪುರ ಮಾತ್ರವಲ್ಲದೆ, ಮುಂಬೈ, ಚನ್ನೈ, ಗುಜರಾತ್, ದೆಹಲಿ, ಅಹಮದಾಬಾದ್, ರಾಜಾಸ್ತಾನಗಳಿಂದಲೂ ಎಳನೀರನ್ನು ಕೊಂಡೊಯ್ಯಲು ವರ್ತಕರು ಬರುತ್ತಿದ್ದು, ಪ್ರತಿದಿನವೂ ಲಕ್ಷಾಂತರ ಎಳನೀರು ಹೊರಗೆ ಸರಬರಾಜಾಗುತ್ತಿವೆ. ಇದರಿಂದ ಪ್ರತಿದಿನವೂ ಲಕ್ಷಾಂತರ ಆದಾಯವೂ ಬರುತ್ತಿದೆ. ಆದರೆ ಮಾರುಕಟ್ಟೆ ಅಭಿವೃದ್ಧಿಯತ್ತ ಗಮನಹರಿಸದಿರುವುದು ಬೇಸರದ ಸಂಗತಿಯಾಗಿದೆ.

Kikkeri Tender Coconut Market Converted As An Unhygienic Place

ಅಗತ್ಯ ಸೌಲಭ್ಯಗಳಿಲ್ಲದೆ ಪರದಾಟ

ಇತ್ತೀಚೆಗಿನ ದಿನಗಳಲ್ಲಿ ಎಳನೀರಿಗೆ ಬೇಡಿಕೆ ಹೆಚ್ಚಿರುವ ಕಾರಣ ದರವೂ ಹೆಚ್ಚಾಗಿದ್ದು ಸದ್ಯ 50ರಿಂದ 60 ರೂಪಾಯಿಗೆ ಎಳನೀರು ಮಾರಾಟವಾಗುತ್ತಿವೆ. ಇದೇ ಬೆಲೆಯಲ್ಲಿಯೇ ದೂರದ ವರ್ತಕರು ಎಳನೀರು ಖರೀದಿಸಿದ ದಾಖಲೆಯೂ ಇಲ್ಲದಿಲ್ಲ. ಇದೀಗ ಕಿಕ್ಕೇರಿ ಎಳನೀರು ಮಾರುಕಟ್ಟೆಯಲ್ಲಿ 45 ರೂಪಾಯಿಗಳವರೆಗೆ ರೈತರಿಂದ ವರ್ತಕರು ಎಳನೀರನ್ನು ಖರೀದಿಸಿ ದೇಶದಾಧ್ಯಂತ ವಿವಿಧ ರಾಜ್ಯಗಳ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ.

ಈ ಎಳನೀರು ಮಾರುಕಟ್ಟೆ ದಿನನಿತ್ಯವೂ ಕಾರ್ಮಿಕರು, ಎಳನೀರು ಬೆಳೆಗಾರರು ಮತ್ತು ವರ್ತಕರು, ದಲ್ಲಾಳಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಹೀಗಿರುವಾಗ ಅಗತ್ಯ ಮೂಲ ಸೌಕರ್ಯಗಳನ್ನು ಮಾಡಿಕೊಡಬೇಕಿದೆ. ಆದರೆ ಇಲ್ಲಿ ಬಹುಮುಖ್ಯವಾಗಿ ಬೇಕಾಗಿರುವ ಎಲೆಕ್ಟ್ರಾನಿಕ್ ವೇಬ್ರಿಡ್ಜ್ ಕೆಟ್ಟು ನಿಂತಿದೆ. ಇದರಿಂದ ವರ್ತಕರು ತಾವು ಸರಬರಾಜು ಮಾಡುತ್ತಿರುವ ಎಳನೀರು ಲೋಡ್ ತುಂಬಿರುವ ಬೃಹತ್ ಲಾರಿಗಳನ್ನು ತೂಕ ಮಾಡಿಸಲು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಸ್ವಚ್ಛತೆಯಿಲ್ಲದೆ ರೋಗಗಳ ಭಯ

ಇನ್ನೊಂದೆಡೆ ಶುಚಿತ್ವ, ಸ್ವಚ್ಛತೆ ಎನ್ನುವುದು ಮಾಯವಾಗಿದೆ ಹೀಗಾಗಿ ಎಳನೀರು ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ನೀರು, ಕೆಸರು, ಕಸ ಹೀಗೆ ಗಬ್ಬೆದ್ದು ನಾರುತ್ತಿದ್ದು, ರೋಗ-ರುಜಿನಗಳಿಗೆ ದಾರಿ ಮಾಡಿಕೊಡುತ್ತಿದೆ. ಇದೆಲ್ಲದರ ನಡುವೆ ಅಭಿವೃದ್ಧಿ ಮಾಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವವರು ಮಾರುಕಟ್ಟೆಯೊಳಗೆ ನಡೆದಿರುವ ಕಾಮಗಾರಿಯನ್ನು ಹತ್ತಿರ ಬಂದು ನೋಡಬೇಕಾಗಿದೆ.

ಈಗಾಗಲೇ ಮಳೆಯಿಂದಾಗಿ ರಸ್ತೆ, ಚರಂಡಿ, ಕಲ್ವರ್ಟ್‌ಗಳು ಕಿತ್ತು ಹಾಳಾಗಿದ್ದರೆ, ಶೌಚಾಲಯವು ನಿರ್ವಹಣೆಯಿಲ್ಲದೇ ಅಶುಚಿತ್ವದಿಂದ ಕೂಡಿದೆ.. ಇಲ್ಲಿ ಶುದ್ಧ ಕುಡಿಯುವ ನೀರು, ವಿಶ್ರಾಂತಿ ಗೃಹ ಎನ್ನುವುದು ಇಲ್ಲವೇ ಇಲ್ಲದಾಗಿದೆ. ಈ ಹಿಂದೆ ಕಗ್ಗತ್ತಲಿನಲ್ಲಿ ಮುಳುಗಿದ್ದ ಎಳನೀರು ಮಾರುಕಟ್ಟೆಯ ಯಾರ್ಡ್‌ಗೆ ತಾತ್ಕಾಲಿಕವಾಗಿ ಬೀದಿ ದೀಪಗಳನ್ನು ಅಳವಡಿಸಿ ಬೆಳಕಿನ ಸೌಲಭ್ಯವನ್ನು ಒದಗಿಸಿಕೊಟ್ಟಿರುವುದಷ್ಟೆ ಎಪಿಎಂಸಿ ಅಧಿಕಾರಿಗಳ ಸಾಧನೆಯಾಗಿದೆ.

ಸಂಬಂಧಿಸಿದವರು ಗಮನಹರಿಸಲಿ

ಇದಿಷ್ಟು ಮಾಡಿದ್ದು ಬಿಟ್ಟರೆ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಆದಾಯವನ್ನು ತಂದುಕೊಡುವ ಮಾರುಕಟ್ಟೆಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಎದ್ದು ಕಾಣಿಸಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸುತ್ತಾರಾ? ಕಾದು ನೋಡಬೇಕಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+