KRS ಅಣೆಕಟ್ಟಿನಿಂದ ನೀರು ಬಿಡುಗಡೆ, ನದಿಪಾತ್ರದಲ್ಲಿ ಪ್ರವಾಹ ಭೀತಿ
ಮಂಡ್ಯ, ಆ.8: ಮುಂಗಾರು ಮಳೆ ತೀವ್ರಗೊಂಡು ಭಾರಿ ಮಳೆಯಿಂದ ಅಗತ್ಯಕ್ಕಿಂತ ಹೆಚ್ಚು ನೀರು ಕೃಷ್ಣರಾಜ ಸಾಗರದಿಂದ ತಮಿಳುನಾಡಿಗೆ ಹರಿಯುತ್ತಿದೆ. ಈ ನಡುವೆ ತಮಿಳುನಾಡಿಗೆ ಬುಧವಾರದಂದು 40, 000 ಕ್ಯೂಸೆಕ್ಸ್ ಗೂ ಅಧಿಕ ಕಾವೇರಿ ನೀರು ಹರಿಸಿರುವುದರಿಂದ ಧರ್ಮಪುರಿ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಧರ್ಮಪುರಿಗೆ ಸಾಗುವ ಹಾದಿಯಲ್ಲಿ ಕರ್ನಾಟಕದಲ್ಲೂ ಪ್ರವಾಹ ಭೀತಿಯನ್ನು ಕಾವೇರಿ ಉಂಟು ಮಾಡುತ್ತಿದ್ದಾಳೆ.
ಶುಕ್ರವಾರದ ವೇಳೆಗೆ ಸುಮಾರು 52,000 ಕ್ಯೂಸೆಕ್ಸ್ ಒಳಹರಿವು ಪಡೆದುಕೊಂಡಿರುವ ಐತಿಹಾಸಿಕ ಅಣೆಕಟ್ಟು 114.80 ಅಡಿ ನೀರು ಹೊಂದಿದೆ. ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರ ಹರಿವು ಆಗಲಿದ್ದು, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಕಾವೇರಿ ಕೊಳ್ಳದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.
KRSನಿಂದ ತಮಿಳುನಾಡಿಗೆ ಹರಿದ ಕಾವೇರಿ, ರೈತರ ಆಕ್ರೋಶ
ಕಾವೇರಿ ನದಿ ಹಾಗೂ ಉಪ ನದಿಗಳ ಜಲಾಶಯಗಳಾದ ಹಾರಂಗಿ, ಕಬಿನಿ, ಕೃಷ್ಣರಾಜಸಾಗರ ತುಂಬಿ ತುಳುಕುತ್ತಿವೆ. ಕಬಿನಿಯಲ್ಲಿ 18, 400 ಕ್ಯೂಸೆಕ್ಸ್ ಇದ್ದ ಒಳ ಹರಿವು ಶುಕ್ರವಾರ 23000 ಕ್ಯೂಸೆಕ್ಸ್ ಗೇರಿದೆ. 2278 ಅಡಿ ನೀರು ಸಂಗ್ರಹವಾಗಿದೆ. 2284 ಪೂರ್ಣ ಮಟ್ಟ ಹೊಂದಿದೆ ಎಂದು ಕಾವೇರಿ ನೀರಾವರಿ ನಿಗಮ ನಿಯಮಿತ ಹೇಳಿದೆ.ಕ್ರಸ್ಟ್ ಗೇಟ್ ಗಳನ್ನು ತೆರೆಯುವುದರಿಂದ ನದಿ ಪಾತ್ರದಲ್ಲಿರುವ ಜನರು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.