ಮೈಶುಗರ್ ಕಾರ್ಖಾನೆ ಖಾಸಗೀಕರಣ ನಿರ್ಧಾರ ಹಿಂಪಡೆದ ರಾಜ್ಯ ಸರ್ಕಾರ
ಮಂಡ್ಯ, ಅಕ್ಟೋಬರ್ 19: ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ತೀರ್ಮಾನದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಪದ್ಧತಿ ಆರಂಭ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದವು.
ಸೋಮವಾರ ಈ ಬಗ್ಗೆ ಸಭೆಯನ್ನು ನಡೆಸಲಾಗಿದ್ದು, ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರ ಪದ್ಧತಿಯನ್ನು ಆರಂಭ ಮಾಡುವ ಸಂಪುಟದ ನಿರ್ಧಾರವನ್ನು ಹಿಂದಕ್ಕೆ ಪಡೆಯಲಾಗಿದೆ" ಎಂದು ತಿಳಿಸಿದ್ದಾರೆ.
"ಸದ್ಯಕ್ಕೆ ಈ ನಿರ್ಧಾರವನ್ನು ಹಿಂದಕ್ಕೆ ಪಡೆದು ಈ ಬಗ್ಗೆ ಪರಿಶೀಲನೆ ನಡೆಸಲು ತಜ್ಞರ ಸಮಿತಿಯನ್ನು ರಚನೆ ಮಾಡಲಾಗುವುದು. ರೈತರ ಹಿತದೃಷ್ಟಿಯಿಂದ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಎಲ್ಲಾ ಪ್ರಯತ್ನವನ್ನು ಮಾಡಲಿದೆ," ಎಂದು ಕೂಡಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

"ಮೂರು ತಿಂಗಳಿನಲ್ಲಿ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಪುನರುಚ್ಛೇತನ ಮಾಡಲು ಸೂಚನೆಯನ್ನು ನೀಡಲಾಗಿದೆ. ಈ ಕಾರ್ಖಾನೆಯಲ್ಲಿ ಕಬ್ಬಿನ ಉಪ ಉತ್ಪನ್ನಗಳನ್ನು ಉತ್ಪಾದನೆ ಮಾಡುವ ಬಗ್ಗೆ ಅಧಿಕ ಆದ್ಯತೆ ನೀಡಲಾಗುತ್ತದೆ. ಶೀಘ್ರದಲ್ಲೇ ದಕ್ಷ ಅಧಿಕಾರಿಯನ್ನು ಈ ಕಾರ್ಖಾನೆಯ ಎಂಡಿ ಆಗಿ ನೇಮಕ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
"ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ತೀರ್ಮಾನವನ್ನು ನಾವು ಸದ್ಯಕ್ಕೆ ಕೈಬಿಡುತ್ತೇವೆ. ನಾವು ಈ ಬಗ್ಗೆ ಪರಿಶೀಲನೆ ನಡೆಸಲು ತಜ್ಞರ ಸಮಿತಿಯನ್ನು ರಚನೆ ಮಾಡುತ್ತೇವೆ. ಹಾಗೆಯೇ ಎಲ್ಲಾ ಪರಿಶೀಲನೆ ಸಂಪೂರ್ಣವಾದ ಬಳಿಕ ಸಚಿವ ಸಂಪುಟದಲ್ಲಿ ಮೈಶುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣದ ಬಗ್ಗೆ ನಿರ್ಧಾರ ಮಾಡುತ್ತೇವೆ. ಹಾಗೆಯೇ ರೈತರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಕಾರ್ಖಾನೆಯಲ್ಲಿ ಅಗತ್ಯ ಯಂತ್ರಗಳನ್ನು ಸರಿಪಡಿಸಲು ಈಗಲೇ ಕ್ರಮ ಕೈಗೊಳ್ಳುತ್ತೇವೆ. ಹಣಕಾಸು ನೆರವು ಕೂಡಾ ನೀಡಲಾಗುತ್ತದೆ" ಎಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದೆ ಸುಮಲತಾ ಅಂಬರೀಶ್, "ಮೈಶುಗರ್ ಸಕ್ಕರೆ ಕಾರ್ಖಾನೆ ಸಂಬಂಧಿಸಿದಂತೆ ಸಭೆ ನಡೆದಿದ್ದು, ಉತ್ತಮ ಚರ್ಚೆ ನಡೆದಿದೆ. ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ನಾವು ಈ ಕಾರ್ಖಾನೆಯನ್ನು ಆರಂಭ ಮಾಡಬೇಕು ಎಂದು ಮನವಿ ಮಾಡಿದ್ದೇವೆ. ರೈತರ ಸಮಸ್ಯೆ ಬಗೆಹರಿಸಲು ಕೂಡಾ ವಿನಂತಿಸಿದ್ದೇವೆ" ಎಂದು ತಿಳಿಸಿದರು.
ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ತೀರ್ಮಾನದ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದ್ದವು. ರಾಜ್ಯ ಸರ್ಕಾರದ ವಿರುದ್ಧ ಹಲವಾರು ಮಂದಿ ವಾಗ್ದಾಳಿ ನಡೆಸಿದ್ದರು. "ಕಾರ್ಖಾನೆ ಖಾಸಗೀಕರಣ ಮಾಡಿದರೆ ರಕ್ತಪಾತವಾಗುತ್ತದೆ," ಎಂದು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಸುರೇಶ್ ಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಪ್ರಸ್ತುತ ಸರ್ಕಾರ ಮೈಶುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ಮಾಡುವ ನಿರ್ಧಾರವನ್ನು ಹಿಂಪಡೆದ ಹಿನ್ನೆಲೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರೈತ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸುನಂದ ಜಯರಾಮ್, "ಸರ್ಕಾರ ಈ ಮೈಶುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ಮಾಡುವ ನಿರ್ಧಾರವನ್ನು ಕೈಬಿಟ್ಟಿರುವುದು 65 ಸಕ್ಕರೆ ಕಾರ್ಖಾನೆಗಳಿಗೆ ಮಾದರಿ ಆಗಿದೆ. ಮಂಡ್ಯ ಜಿಲ್ಲೆಯ ಘನತೆಯನ್ನು ಸಿಎಂ ಎತ್ತಿ ಹಿಡಿದಿದ್ದಾರೆ. ಸಿಎಂಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ," ಎಂದು ಹೇಳಿದ್ದಾರೆ.
ಇನ್ನು ರೈತ ಮುಖಂಡ ಬಡಗಲಪುರ ನಾಗೇಂದ್ರ ಈ ವಿಚಾರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, "ಮೈಶುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ನಿರ್ಧಾರವನ್ನು ಕೈಬಿಡುವ ಮೂಲಕ ಸರ್ಕಾರವು ಉತ್ತಮ ನಿರ್ಧಾರವನ್ನು ಕೈಗೊಂಡಿದೆ. ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಖಾಸಗೀಕರಣ ಮಾಡುವ ನಿರ್ಧಾರ ಮತ್ತೆ ಪರಿಶೀಲನೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ರೈತರ ಪರವಾದ ನಿರ್ಧಾರ," ಎಂದು ನುಡಿದಿದ್ದಾರೆ.
Recommended Video
(ಒನ್‌ಇಂಡಿಯಾ ಸುದ್ದಿ)












Click it and Unblock the Notifications