ಮಂಡ್ಯದಲ್ಲಿ ಅತಿರಥ ಮಹಾರಥರ ಸೋಲು: ಮುಖ್ಯಮಂತ್ರಿ ಅಭ್ಯರ್ಥಿಗಳನ್ನೇ ಸೋಲಿಸಿದ ಯುವ ನಾಯಕರು!

ಮಂಡ್ಯ ಮೇ 2: ಇದು ಮಂಡ್ಯ ರಾಜಕೀಯದ ಸ್ಪೆಷಾಲಿಟಿ. ಇಲ್ಲಿ ಅತಿರಥ ಮಹಾರಥರ ಸೋಲಾಗಿದೆ. ಪ್ರಶ್ನಾತೀತ ರಾಜಕೀಯ ದಿಗ್ಗಜರನ್ನು 'ನ್ಯೂ ಎಂಟ್ರಿ' ಯುವನಾಯಕರು ಕೆಡವಿದ್ದಾರೆ. ಅಘೋಷಿತ ಸಿ.ಎಂ. ಅಭ್ಯರ್ಥಿಗಳನ್ನೇ ಪರಾಭವಗೊಳಿಸಿದ್ದಾರೆ.

ಮಂಡ್ಯ ಚುನಾವಣಾ ರಾಜಕಾರಣವನ್ನು ಅವಲೋಕಿಸಿದರೆ, ಸತತ ನಾಲ್ಕು ಬಾರಿ ಪಾರ್ಲಿಮೆಂಟ್ ಪ್ರವೇಶಿಸಿದ ಎಂ.ಕೆ.ಶಿವನಂಜಪ್ಪ ಗೆಲುವಿನ ಸರದಾರ, ಉಳಿದಂತೆ ಶ್ರೀರಂಗಪಟ್ಟಣದ ಪುಟ್ಟಸ್ವಾಮಿಗೌಡ, ನಾಗಮಂಗಲದ ಟಿ.ಮರಿಯಪ್ಪ, ಮಳವಳ್ಳಿ ಹೆಚ್.ಪಿ.ವೀರೇಗೌಡರಂತಹ ಕೆಲವೇ ಮಂದಿ ಬಿಂಬಿತರಾಗಿದ್ದರು. ಒಂದೊಂದು ಟರ್ಮ್ ಶಾಸಕರಾಗಿ ಸೋಲಿನಿಂದ ಬಚಾವಾದರು ಎನ್ನುವುದನ್ನು ಬಿಟ್ಟರೆ ಉಳಿದಂತೆ ಜಿಲ್ಲೆಯ 'ಪಾಪುಲರ್ ನಾಯಕರೆಲ್ಲ' ಪರಾಭವಕ್ಕೆ ಗುರಿಯಾದವರೆ.

Karnataka Election: History In Mandya District, CM Candidate Defeated By New Candidates

ಮಂಡ್ಯ ಜಿಲ್ಲೆಯ ಅಭಿವೃದ್ಧಿ ಹರಿಕಾರ ಹಲವು ನಾಯಕರ 'ಗಾಡ್‌ಫಾದರ್' ಆಗಿ ರಾಜಕೀಯ ಇತಿಹಾಸವನ್ನು ಸೃಷ್ಟಿಸಿದವರು ಕೆ.ವಿ.ಶಂಕರಗೌಡರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಅನುಭವಿಸಿದ ಅಧಿಕಾರ ಅತಿ ಕಡಿಮೆಯಾದರೂ ಮಾಡಿದ ಸಾಧನೆ ಅಪಾರವಾದುದು. ಇಂತಹ ಮೇರು ನಾಯಕ ಶಂಕರಗೌಡರನ್ನು ಸಹ ಸೋಲೆಂಬ ಸೋಲು ಬಿಡಲಿಲ್ಲ.

ವಾಸ್ತವವಾಗಿ 1962 ಮತ್ತು 72ರಲ್ಲಿ ಮಂಡ್ಯ ಕ್ಷೇತ್ರದಿಂದ 1982ರಲ್ಲಿ ಕೆರಗೋಡು ಕ್ಷೇತ್ರದಿಂದ ಕೆ.ವಿ.ಶಂಕರಗೌಡರು ಸೋಲುತ್ತಾರೆ. ಮೂರು ಸೋಲುಗಳ ನಡುವೆ ಕೆವಿಎಸ್ ಜಿಲ್ಲೆಯ ರಾಜಕೀಯದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಸ್ವಾತಂತ್ರ್ಯ ಚಳವಳಿ ಮತ್ತು ಶಿವಪುರ ಕಾಂಗ್ರೇಸ್ ಹೋರಾಟದ ಮೂಲಕ ಪ್ರಚಂಡ ನಾಯಕತ್ವ ರೂಪಿಸಿಕೊಂಡವರು ಹೆಚ್.ಕೆ.ವೀರಣ್ಣಗೌಡರು.

1952-57 ಎರಡು ಅವಧಿಗೆ ಆಯ್ಕೆಯಾಗಿ ಮಂತ್ರಿಯಾಗಿ ದರ್ಬಾರು ನಡೆಸಿದವರು. ಆದರೆ, ಅಘೋಷಿತ ಸಿ.ಎಂ. ಅಭ್ಯರ್ಥಿಯಾಗಿ 1962ರಲ್ಲಿ ಸ್ಪರ್ಧಿಸಿದಾಗ ಎಸ್.ಎಂ.ಕೃಷ್ಣ ಅವರಿಂದ ಪರಾಭವಗೊಳ್ಳುತ್ತಾರೆ. 1967ರಲ್ಲಿಯೂ ಸೋಲುತ್ತಾರೆ, ಕಿರುಗಾವಲು ಕ್ಷೇತ್ರದಿಂದ ಚುನಾವಣಾ ಯುದ್ಧಕ್ಕೆ ಇಳಿದರೂ ಇಲ್ಲಿಯೂ ಸಹ ಜಿ.ಮಾದೇಗೌಡರ ವಿರುದ್ಧ ಗೆಲ್ಲಲಾಗಲಿಲ್ಲ.

Karnataka Election: History In Mandya District, CM Candidate Defeated By New Candidates

ಮುಖ್ಯಮಂತ್ರಿ, ಕೇಂದ್ರ ಮಂತ್ರಿ, ರಾಜ್ಯಪಾಲ, ಸೀಕರ್, ಉಪ ಮುಖ್ಯಮಂತ್ರಿಯಂತಹ ಹುದ್ದೆಗಳನ್ನು ಅಲಂಕರಿಸಿ, ರಾಜ್ಯರಾಜಕಾರಣದ ಅನಭಿಶಕ್ತ ನಾಯಕನಾಗಿ ವಿಜೃಂಭಿಸಿದ ಎಸ್.ಎಂ.ಕೃಷ್ಣ ಕೂಡ ಸೋಲಿನ ಕಹಿ ಅನುಭವಿಸಿದವರೆ. 1967ರಲ್ಲಿ ಎಂ.ಮಂಚೇಗೌಡರು ಕೃಷ್ಣರನ್ನ ಸೋಲಿಸಿದರೆ, 1994ರ ವೇಳೆಗೆ ಸ್ಪೀಕರ್, ಉಪ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ್ದ ಕೃಷ್ಣರನ್ನು ಮಂಚೇಗೌಡರ ಮಗ ಮಹೇಶ್ ಚಂದ್ ಪರಾಭವಗೊಳಿಸುವುದು ವಿಶೇಷ. 1984ರಲ್ಲಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೂಡಾ ಕೆ.ವಿ.ಶಂಕರಗೌಡರೇ ಕೃಷ್ಣರನ್ನು ಸೋಲಿಸುತ್ತಾರೆ.

ಮಂಡ್ಯ ರಾಜಕೀಯ ಇತಿಹಾಸದಲ್ಲೇ ಪ್ರಪ್ರಥಮ ಎನ್ನುವಂತೆ ಕಿರುಗಾವಲು ಕ್ಷೇತ್ರದಿಂದ ನಿರಂತರ 6 ಬಾರಿ ಪ್ರಚಂಡ ದಿಗ್ವಿಜಯ ಬಾರಿಸಿ ಸೋಲಿಲ್ಲದ ಸರದಾರನಾಗಿ ವಿಜೃಂಭಿಸಿದ ಜಿ.ಮಾದೇಗೌಡರು ಲೋಕಸಭೆಯಲ್ಲಿಯೂ ಎರಡು ಭರ್ಜರಿ ಗೆಲುವುಗಳನ್ನು ಕಾಣುತ್ತಾರೆ. ಆದರೆ, 1996ರಲ್ಲಿ ಕೆ.ಆರ್.ಪೇಟೆ ಕೃಷ್ಣ ವಿರುದ್ಧ ಹಾಗೂ 1998ರಲ್ಲಿ ಅಂಬರೀಶ್‌ ವಿರುದ್ಧ ಪರಾಭವಗೊಳ್ಳುತ್ತಾರೆ.

ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ, ಕಾಂಗ್ರೆಸ್ ಸಾರಥ್ಯ ವಹಿಸಿದ್ದ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಸಾಹುಕಾರ್ ಚನ್ನಯ್ಯ ಅವರನ್ನ 1957ರಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಎಸ್.ಬೊಮ್ಮೇಗೌಡರು ಸೋಲಿಸುತ್ತಾರೆ. ಆ ಹೊತ್ತಿಗೆ ಸಾಹುಕಾರ್ ಚನ್ನಯ್ಯ ಅಘೋಷಿತ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದರು.

Karnataka Election: History In Mandya District, CM Candidate Defeated By New Candidates

ಕೆರಗೋಡು ಕ್ಷೇತ್ರದಲ್ಲಿ ಯಜಮಾನಿಕೆ ರಾಜಕಾರಣ ಮಾಡಿದ ಎಚ್.ಡಿ.ಚೌಡಯ್ಯನವರು 1968 ಮತ್ತು 1972ರಲ್ಲಿ ನಡೆದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ವಿರುದ್ಧ ಪರಾಭವಗೊಳ್ಳುತ್ತಾರೆ. ಮಳವಳ್ಳಿ ಕ್ಷೇತ್ರದ ಪ್ರಭಾವಿ ವೀರಶೈವ ನಾಯಕ, ರಾಜ್ಯಸಭಾ ಸದಸ್ಯ ಬಿ.ಪಿ.ನಾಗರಾಜಮೂರ್ತಿ ದೆಹಲಿ ರಾಜಕಾರಣ ಪ್ರವೇಶಿಸುವ ಮುನ್ನ ಕಿರುಗಾವಲು ಕ್ಷೇತ್ರದಲ್ಲಿ ಜಿ.ಮಾದೇಗೌಡರಿಂದ ಪರಾಭವಗೊಂಡಿದ್ದರು. ಶಿಕ್ಷಣ, ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನಿಭಾಯಿಸಿದ್ದ ಬಿ.ಸೋಮಶೇಖರ್ ಕೂಡ 2008ರ ಚುನಾವಣೆಯಲ್ಲಿ ಸೋಲಿಗೆ ಶರಣಾಗಿದ್ದರು. ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ಪ್ರತಿಷ್ಠಿತ ಖಾತೆಗಳನ್ನು ನಿಭಾಯಿಸಿದ ಮಳವಳ್ಳಿ ಎಂ.ಮಲ್ಲಿಕಾರ್ಜುನಸ್ವಾಮಿ ಕೂಡ ಅನಂತರದ ದಿನಗಳಲ್ಲಿ ಸೋಲುಗಳನ್ನು ಅನುಭವಿಸುತ್ತಾರೆ.

ಸಿನಿಮಾ ಇಮೇಜಿನಲ್ಲೇ ಮಂಡ್ಯ ರಾಜಕೀಯದಲ್ಲಿ ನೆಲೆ ಕಂಡುಕೊಂಡವರು ಅಂಬರೀಶ್‌. ರಾಮನಗರ ಕ್ಷೇತ್ರದ ಸೋಲಿನ ನಂತರ ಮಂಡ್ಯ ಲೋಕಸಭೆಯಲ್ಲಿ 1998-99 ಮತ್ತು 2004ರ ಚುನಾವಣೆಗಳಲ್ಲಿ ಭರ್ಜರಿ ಗೆಲುವು ಸಾಧಿಸಿದರು. ಆದರೆ, 2008ರ ಶ್ರೀರಂಗಪಟ್ಟಣ ವಿಧಾನಸಭೆಯಲ್ಲಿ ರಮೇಶ್ ಬಾಬು ಬಂಡೀಸಿದ್ದೇಗೌಡರ ವಿರುದ್ಧ, 2009ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಎನ್.ಚಲುವರಾಯಸ್ವಾಮಿ ವಿರುದ್ಧ ಸೋಲುತ್ತಾರೆ. ಸ್ಪೀಕರ್ ಹಾಗೂ ಸಚಿವ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ ಕೆ.ಆರ್.ಪೇಟೆ ಕೃಷ್ಣ ಕೂಡ ಸೋಲಿನ ಸುಳಿಯಿಂದ ಹೊರಬರಲಾಗಲಿಲ್ಲ. 1999ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಅಂಬರೀಶ್‌ ವಿರುದ್ಧ ಹಾಗೂ 2008ರ ಕೆ.ಆರ್.ಪೇಟೆ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಶೇಖರ್ ವಿರುದ್ಧ ಪರಾಭವಗೊಳ್ಳುತ್ತಾರೆ.

ಜೆ.ಎಚ್.ಪಟೇಲ್ ಸಂಪುಟದಲ್ಲಿ ನೀರಾವರಿ ಸಚಿವರಾಗಿ ಪ್ರಸಿದ್ಧಿ ಪಡೆದಿದ್ದ ಕೆ.ಎನ್.ನಾಗೇಗೌಡರು 1999ರಲ್ಲಿ ಡಿ.ಸಿ.ತಮ್ಮಣ್ಣ ವಿರುದ್ಧ ಗೆಲ್ಲಲಾಗಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ, ಸಾರಿಗೆ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಉಪಮುಖ್ಯಮಂತ್ರಿ ಎಂದೇ ಬಿಂಬಿತವಾಗಿದ್ದ ಎನ್.ಚಲುವರಾಯಸ್ವಾಮಿ ಅವರನ್ನ ಹೊಸದಾಗಿ ರಾಜಕೀಯ ಪ್ರವೇಶಿಸಿದ ಸುರೇಶ್‌ಗೌಡ ನಾಗಮಂಗಲ ಕ್ಷೇತ್ರದಲ್ಲಿ ಸೋಲಿಸುತ್ತಾರೆ. ಒಟ್ಟಾರೆ ಮಂಡ್ಯದ ಹೆಸರಾಂತ ರಾಜಕೀಯ ದಿಗ್ಗಜರು ಈ ಸೋಲಿನ ಸುಳಿಯಿಂದ ಬಚಾವಾಗಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+