Siddaramaiah On Sumalatha: ಸುಮಲತಾ ಗೆಲ್ಲಿಸಿದ್ದು ಸರಿಯಲ್ಲ ಅಂತ ಈಗ ಅನ್ನಿಸುತ್ತಿದೆ; ಸಿದ್ದು ಪಶ್ಚಾತ್ತಾಪ
2023ರ ಕರ್ನಾಟಕ ವಿಧಾನಸಭಾ ಚುನಾವಣೆ ಒಂದು ವಾರ ಮಾತ್ರ ಬಾಕಿ ಇದ್ದು, ಗೆಲುವಿಗಾಗಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ರಾಜ್ಯ ನಾಯಕರೊಂದಿಗೆ ರಾಷ್ಟ್ರೀಯ ನಾಯಕರೂ ಕ್ಷೇತ್ರಗಳಲ್ಲಿ ಭರ್ಜರಿ ಸಮಾವೇಶ ಹಾಗೂ ರೋಡ್ ಶೋ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ. ಮೇ 10ರಂದು ನಡೆಯುವ ಮತದಾನದಂದು ಮತದರರು ಯಾರ ಪರ ನಿಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಮಂಡ್ಯದ ನಾಗಮಂಗಲದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, "ಲೋಕಸಭಾ ಚುನಾವಣೆ ವೇಳೆ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಸೇರಿದಂತೆ ಎಲ್ಲರಿಗೂ ಜೆಡಿಎಸ್ ಅಭ್ಯರ್ಥಿ ಪರ ನಿಲ್ಲುವಂತೆ ಹೇಳಿದ್ದೆ. ಆದರೆ, ಜನರು ನನ್ನ ಮಾತು ಕೇಳಲಿಲ್ಲ. ಆಯಮ್ಮನ್ನ (ಸುಮಲತಾ ಅಂಬರೀಶ್) ಗೆಲ್ಲಿಸಿದ್ದು ಸರಿಯಲ್ಲ ಅಂತಾ, ನನಗೆ ಈಗ ಅನಿಸುತ್ತಿದೆ," ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
"ಲೋಕಸಭಾ ಚುನಾವಣೆಯಲ್ಲಿ ನಾನು ಜೆಡಿಎಸ್ ಅಭ್ಯರ್ಥಿ ಪರ ನಿಲ್ಲುವಂತೆ ಹೇಳಿದ್ದೆ. ಆದರೆ ಜನರು ನನ್ನ ಮಾತು ಕೇಳಲಿಲ್ಲ. ಸುಮಲತಾ ಗೆಲ್ಲಿಸಿದ್ದು ಸರಿಯಲ್ಲ ಅಂತಾ ಈಗ ನನಗೆ ಅನಿಸ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸುಮಲತಾ ಅಂಬರೀಶ್ ಗೆಲ್ಲಿಸಬಾರದಿತ್ತು," ಎಂದಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಅಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಇನ್ನು ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ, ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ಬೆಂಬಲಿಸಿದ್ದರು.
ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಸುಮಲತಾ ಅಂಬರೀಶ್ ಅವರು ನಿಖಿಲ್ ಕುಮಾರಸ್ವಾಮಿಯನ್ನು 1 ಲಕ್ಷಕ್ಕೂ ಅಧಿಕ ಮತಗಳಿಂದ ಮಣಿಸಿದ್ದರು. ಇದೀಗ 2023ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಮಂಡ್ಯ ಸೇರಿದಂತೆ ಸುತ್ತಮುತ್ತಲಿನ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಇನ್ನು ಮಾತು ಮುಂದುವರೆಸಿದ ಸಿದ್ದರಾಮಯ್ಯ, "ಬಿಜೆಪಿ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿ ಹೋಗಿದೆ. ಬೀದಿ ಬೀದಿಯಲ್ಲಿ ಭ್ರಷ್ಟಾಚಾರದ ವಿಚಾರ ಚರ್ಚೆಯಾಗುತ್ತಿದೆ. ವಿಧಾನಸೌಧದ ಪ್ರತಿ ಗೋಡೆಗಳೂ ದುಡ್ಡು ದುಡ್ಡು ಎನ್ನುತ್ತಿವೆ. ಇಂತಹ 40 ಪರ್ಸೆಂಟ್ ಸರ್ಕಾರ ಇರಬೇಕಾ? ಈ ನರೇಂದ್ರ ಮೋದಿ ಅಚ್ಚೇ ದಿನ್ ಆಯೇಗಾ ಅಂತಾರಲ್ಲ, ನಿಮಗೇನಾದರೂ ಅಚ್ಚೇ ಬಂತೇನ್ರಪ್ಪ?," ಎಂದು ಸಭೀಕರನ್ನು ಪ್ರಶ್ನಿಸಿದ್ದಾರೆ.
ನಾಗಮಂಗಲ ಜನತೆ ತುಂಬಾ ಸಜ್ಜನರಿದ್ದಾರೆ. ನಿಮ್ಮ ಉತ್ಸಾಹ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿ ಗೆಲ್ಲುವುದು ಸೂರ್ಯ ಚಂದ್ರರಷ್ಟೇ ಸತ್ಯ. ಒಕ್ಕಲಿಗ ಸಮಾಜದ ಪ್ರಮುಖ ನಾಯಕರಲ್ಲಿ ಚಲುವರಾಯಸ್ವಾಮಿ ಕೂಡ ಒಬ್ಬರು. ಚೆಲುವರಾಯಸ್ವಾಮಿಗೆ ನಾಯಕತ್ವದ ಗುಣ ಇದೆ. ಅಂತಹವರನ್ನು ನೀವು ಗೆಲ್ಲಿಸಲೇಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿಕೊಂಡರು.
ಜೆಡಿಎಸ್-ಎಚ್‌ಡಿಕೆ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಇದೇ ವೇಳೆ ಜೆಡಿಎಸ್ ಪಕ್ಷದ ವಿರುದ್ಧ ಹರಿಹಾಯ್ದ ವರುಣಾ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ, ಜೆಡಿಎಸ್‌ನವರು ಅವಕಾಶವಾದಿಗಳು, ಅತಂತ್ರ ಸರ್ಕಾರ ಬರಲಿ ಅಂತಾ ಕಾಯುತ್ತಿದ್ದಾರೆ ಎಂದು ಟೀಕಿಸಿದರು.
"ಯಾವುದೇ ಪೂರ್ಣ ಪ್ರಮಾಣದ ಸರ್ಕಾರ ಬರದಿರಲಿ ಅಂತಾ ಜೆಡಿಎಸ್ ನಿತ್ಯವೂ ಹೋಮ-ಹವನ, ಪೂಜೆ ಮಾಡಿಸ್ತಿದ್ದಾರೆ. ಎರಡೂ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬರಲಿ ಅಂತಾ ಪೂಜೆ ಮಾಡಿಸ್ತಿದ್ದಾರೆ. ಅವಕಾಶ ಸಿಕ್ಕರೇ ಕಾಂಗ್ರೆಸ್ ಜೊತೆಯಾದ್ರೂ ಹೋಗ್ತಾರೆ, ಬಿಜೆಪಿ ಜೊತೆಯಾದ್ರೂ ಹೋಗ್ತಾರೆ. ಈ ಬಾರಿ ನಮ್ಮ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದೇ ಬರುತ್ತೆ," ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications