ಮಂಡ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಡಿಶುಂ ಡಿಶುಂ; ಚೆಲುವ ವರ್ಸಸ್ ಸುರೇಶ್
ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮಧ್ಯೆ ಭಿನ್ನಾಭಿಪ್ರಾಯಗಳು ಭುಗಿಲೆದ್ದಿದ್ದು, ರಾಜ್ಯದಲ್ಲಿ ಎರಡು ಪಕ್ಷಗಳ ನಾಯಕರು ನಾವು ಒಟ್ಟಾಗಿದ್ದೇವೆ. ಇನ್ನು ಐದು ವರ್ಷದ ಆಡಳಿತಾವಧಿಯನ್ನು ಸುಗಮವಾಗಿ ಪೂರೈಸುತ್ತೇವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಮಂಡ್ಯದಲ್ಲಿ ಎರಡು ಪಕ್ಷಗಳ ನಾಯಕರು ಒಗ್ಗಟ್ಟಾಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ.
ಸದ್ಯದ ಮಟ್ಟಿಗೆ ಮಂಡ್ಯದಲ್ಲಿ ಜೆಡಿಎಸ್ ನ ಪಾರುಪತ್ಯವೇ ನಡೆಯುತ್ತಿದ್ದು, ಜೆಡಿಎಸ್ ನ ಭದ್ರಕೋಟೆಯಲ್ಲಿ ಕಾಂಗ್ರೆಸ್ ಮೌನಕ್ಕೆ ಶರಣಾಗಿ ಅಥವಾ ಜೆಡಿಎಸ್ ನೊಂದಿಗೆ ಸಖ್ಯ ಬೆಳೆಸಿಕೊಂಡು ತೆಪ್ಪಗೆ ಕೂತರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚುವುದರಲ್ಲಿ ಸಂಶಯವಿಲ್ಲ.
ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದರೆ 10 ಸೀಟು ಗೆಲ್ಲುತ್ತಿತ್ತು : ಚಲುವರಾಯಸ್ವಾಮಿ
ಇದನ್ನು ಅರಿತ ಚೆಲುವರಾಯಸ್ವಾಮಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಕಾಂಗ್ರೆಸ್ ಸಕ್ರಿಯವಾಗಿರಬೇಕೆಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದಾರೆ. ಆದ್ದರಿಂದ ಆಗಾಗ ಮುಖ್ಯಮಂತ್ರಿ ಮತ್ತು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ರಾಜ್ಯ ನಾಯಕರ ಸೂಚನೆಯಂತೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿದ್ದರೆ ಮತ್ತು ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಗೆಲುವು ಕಂಡಿದ್ದರೆ ಜೆಡಿಎಸ್ ಅನ್ನು ವಿರೋಧಿಸುತ್ತಲೇ ಬಂದಿದ್ದ ಚೆಲುವರಾಯಸ್ವಾಮಿ, ರಮೇಶ್ ಬಂಡೀಸಿದ್ದೇಗೌಡ, ನರೇಂದ್ರಸ್ವಾಮಿ ಅವರಿಗೆ ರಾಜಕೀಯವಾಗಿ ಸಂಕಷ್ಟ ಎದುರಾಗುವ ಎಲ್ಲ ಲಕ್ಷಣಗಳಿದ್ದವು. ಹೀಗಾಗಿ ಅವರೆಲ್ಲ ಪರೋಕ್ಷವಾಗಿ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರನ್ನು ಬೆಂಬಲಿಸಿದರು.

ಸಮಯ ಸಿಕ್ಕಾಗ ಸಿಎಂಗೆ ಚುಚ್ಚುವ ಚೆಲುವರಾಯಸ್ವಾಮಿ
ಈ ಕಾರಣದಿಂದ ಜೆಡಿಎಸ್ ನ ನಾಯಕರು ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗಲೂ ಚೆಲುವರಾಯಸ್ವಾಮಿ ಅವರು ಮುಖ್ಯಮಂತ್ರಿಗಳನ್ನು ಮತ್ತು ಸಮ್ಮಿಶ್ರ ಸರಕಾರದ ನಿಲುವುಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಚುಚ್ಚುತ್ತಲೇ ಇರುತ್ತಾರೆ. ಅವರ ನಿಲುವು ಏನು ಎಂಬುದೇ ಸದ್ಯಕ್ಕೆ ಯಾರಿಗೂ ಗೊತ್ತಾಗುತ್ತಿಲ್ಲ. ಇನ್ನು ಚೆಲುವರಾಯಸ್ವಾಮಿ ಅವರ ಕ್ಷೇತ್ರ ನಾಗಮಂಗಲದ ಶಾಸಕ ಸುರೇಶ್ ಗೌಡ ಅವರೊಂದಿಗಿನ ಸಂಬಂಧವೂ ಎಣ್ಣೆ- ಸೀಗೆಕಾಯಿಯಂತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚೆಲುವರಾಯಸ್ವಾಮಿ ಅವರ ವಿರುದ್ಧ ಜೆಡಿಎಸ್ ನ ಸುರೇಶ್‌ಗೌಡ ಗೆಲುವು ಸಾಧಿಸಿದ್ದು, ಅಲ್ಲಿಂದ ಇಲ್ಲಿವರೆಗೂ ಇವರಿಬ್ಬರು ಬದ್ಧ ವೈರಿಗಳಾಗಿಯೇ ಮುಂದುವರೆದಿದ್ದಾರೆ. ಒಬ್ಬರ ಮೇಲೆ ಮತ್ತೊಬ್ಬರು ವಾಗ್ದಾಳಿ ನಡೆಸುವುದು ಮಾಮೂಲಾಗಿದೆ.

ಜೆಡಿಎಸ್ ನಾಯಕರನ್ನು ಕೆರಳಿಸಿದೆ
ಇದೀಗ ಕಾಂಗ್ರೆಸ್ ನಾಯಕ ಎನ್.ಚಲುವರಾಯಸ್ವಾಮಿ ಅವರು ಬಿಜೆಪಿ ಸೇರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಶಾಸಕ ಸುರೇಶ್‌ಗೌಡ ಹೇಳುವ ಮೂಲಕ ಕಾಂಗ್ರೆಸ್ ನೊಳಗೆ ಒಡುಕು ತಂದಿಡುವ ಪ್ರಯತ್ನ ಮಾಡಿದ್ದಾರೆ. ಏಕೆಂದರೆ ಇದುವರೆಗೆ ಚೆಲುವರಾಯಸ್ವಾಮಿ ಜೆಡಿಎಸ್ ನಾಯಕರನ್ನು ಟೀಕಿಸಿ, ಹೇಳಿಕೆ ನೀಡಿದರೂ ಕಾಂಗ್ರೆಸ್ ನಾಯಕರು ಚೆಲುವರಾಯಸ್ವಾಮಿ ಅವರಿಗೆ ನೋಟೀಸ್ ನೀಡಿಲ್ಲ, ಮೈತ್ರಿ ಪಕ್ಷದ ಬಗ್ಗೆ ಮಾತನಾಡಬೇಡಿ ಎಂಬ ಸೂಚನೆ ನೀಡಿಲ್ಲ. ಇದು ಸಾಮಾನ್ಯವಾಗಿ ಜೆಡಿಎಸ್ ನಾಯಕರನ್ನು ಕೆರಳಿಸಿರುವುದಂತೂ ಸತ್ಯ. ಹೀಗಾಗಿಯೇ ಸಮಯ ಸಿಕ್ಕಾಗಲೆಲ್ಲ ಜೆಡಿಎಸ್ ಶಾಸಕರಾದ ಸುರೇಶ್ ಗೌಡ ಅವರು ಚೆಲುವರಾಯಸ್ವಾಮಿ ವಿರುದ್ಧ ಮಾತನಾಡುತ್ತಲೇ ಬರುತ್ತಿದ್ದಾರೆ.
ಗ್ರಾಮ ವಾಸ್ತವ್ಯ ರಾಜಕೀಯ ಸ್ಟಂಟ್ : ಚಲುವರಾಯಸ್ವಾಮಿ

ಕೆಲಸವಿಲ್ಲದೆ ಚೇಷ್ಟೆ ಮಾಡಿಕೊಂಡಿದ್ದಾರೆ
ಇದೀಗ ವಾಗ್ದಾಳಿ ಮುಂದುವರೆಸಿರುವ ಸುರೇಶ್‌ಗೌಡ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗಿರುವ ಅರಿವಿದ್ದರೂ ಮೈತ್ರಿ ಧರ್ಮ ಪಾಲಿಸದೆ ಅಭ್ಯರ್ಥಿ ವಿರುದ್ಧ ಕೆಲಸ ಮಾಡೋ ಚೆಲುವರಾಯಸ್ವಾಮಿ ಮೊದಲು ಮೈತ್ರಿ ಧರ್ಮ ಎಂದರೆ ಏನೂಂತ ಹೇಳಲಿ. ಇಲ್ಲವೇ ಯಾವ ರೀತಿ ಮೈತ್ರಿ ಧರ್ಮ ಪಾಲನೆ ಮಾಡಬೇಕು ಎಂದು ಹೇಳಿದರೆ ನಾನೂ ಅವರ ಬಳಿ ಟ್ಯೂಷನ್ ಗೆ ಹೋಗುವುದಾಗಿ ವ್ಯಂಗ್ಯವಾಡಿದ್ದಾರೆ. ಸೋತಿರುವ ಚೆಲುವರಾಯಸ್ವಾಮಿ ಮಾಡೋಕೆ ಕೆಲಸವಿಲ್ಲದೆ ಅಲ್ಲಿ- ಇಲ್ಲಿ ಚೇಷ್ಟೆ ಮಾಡಿಕೊಂಡು ಕೆದಕಿಕೊಂಡು ಕುಳಿತಿದ್ದಾರೆ ಅಷ್ಟೆ ಎಂದು ಹೇಳಿದ್ದಾರೆ.

ಇಬ್ಬರ ವಾಕ್ಸಮರದಿಂದ ಜನರಿಗೆ ಮಜಾ
ನಾನು ಯಾವ ಕಾಂಗ್ರೆಸ್ ಕಾರ್ಯಕರ್ತರನ್ನೂ ಕಡೆಗಣನೆ ಅಥವಾ ತುಳಿಯುವ ಕೆಲಸ ಮಾಡುತ್ತಿಲ್ಲ. ಇವರಿಗೆ ಮೈತ್ರಿ ಸರಕಾರ ನೋಡಿ ಹೊಟ್ಟೆ ಉರಿ ತಡೆದುಕೊಳ್ಳಲಾಗುತ್ತಿಲ್ಲ. ಅವರಿಗೆ ಈ ಸರಕಾರದ ಏಳಿಗೆಯನ್ನು ಸಹಿಸುವುದಕ್ಕೆ ಆಗದೆ ಟೀಕಿಸುತ್ತಿದ್ದಾರೆ. ಮೊದಲೆಲ್ಲಾ ಶ್ರೀಲಂಕಾದಲ್ಲಿ ಕುಳಿತು ಕಿತಾಪತಿ ಮಾಡುತ್ತಿದ್ದರು. ಆದರೆ ಅಲ್ಲಿ ಬಾಂಬ್ ಸ್ಫೋಟವಾದ ಮೇಲೆ ಬೆಂಗಳೂರಲ್ಲಿ ಕುಳಿತು ಮಾಡುತ್ತಿದ್ದಾರೆ ಅಷ್ಟೆ ಎಂದು ಛೇಡಿಸಿದ್ದಾರೆ. ಒಟ್ಟಾರೆ ಇವರ ನಡುವಿನ ವಾಕ್ಸಮರ ಜನರಿಗೆ ಮಜಾ ಕೊಡುತ್ತಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ಕಾದು ನೋಡೋಣ.