• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಸೋಲಿಗೆ "ಒಳೇಟು" ಕಾರಣವಂತೆ

|

ಮಂಡ್ಯ, ಡಿಸೆಂಬರ್ 19: ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಎನ್ನುವ ಹಾಗೆ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿ ವಾರವೇ ಕಳೆದು ಹೋದರೂ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿದ್ದು ಹೇಗೆ ಎಂಬ ಚರ್ಚೆ ನಿಂತಿಲ್ಲ. ಇದರ ಬೆನ್ನಲ್ಲೇ ಜೆಡಿಎಸ್ ನ ಇನ್ನೆರಡು ಶಾಸಕರು ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎಂಬ ವದಂತಿ ಈಗಾಗಲೇ ಸೋಲಿನಿಂದ ಕಂಗೆಟ್ಟಿರುವ ಜೆಡಿಎಸ್ ‌ಗೆ ಬರಸಿಡಿಲಾಗಿ ಬಡಿಯ ತೊಡಗಿದೆ.

ಯಾವುದೇ ಕಾರಣಕ್ಕೂ ಒಕ್ಕಲಿಗರು ಜೆಡಿಎಸ್ ಕೈಬಿಡಲ್ಲ. ಹೀಗಾಗಿ ಗೆಲುವು ನಮ್ಮದೇ ಎಂಬ ಆತ್ಮವಿಶ್ವಾಸ ಜೆಡಿಎಸ್ ನಾಯಕರಲ್ಲಿತ್ತು. ಜತೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ನಾರಾಯಣ ಗೌಡರು, ಹಿಂದೆ ಜೆಡಿಎಸ್ ‌ನಿಂದ ಗೆಲುವು ಪಡೆದಿದ್ದರೂ ಅವರು ತಮ್ಮ ವರ್ಚಸ್ಸಿನಿಂದ ಗೆದ್ದಿಲ್ಲ. ಜನ ದೇವೇಗೌಡರು, ಕುಮಾರಸ್ವಾಮಿ ಮತ್ತು ಪಕ್ಷವನ್ನು ನೋಡಿ ಮತ ನೀಡಿದ್ದಾರೆ. ಈ ಬಾರಿಯೂ ಅದನ್ನೇ ಮಾಡಲಿದ್ದು ಜೆಡಿಎಸ್ ಅಭ್ಯರ್ಥಿ ದೇವರಾಜು ಸುಲಭವಾಗಿ ಗೆಲ್ಲುತ್ತಾರೆ ಎಂದು ನಂಬಿದ್ದರು. ಆದರೆ ಸೋಲು ಹೇಗಾಯಿತು ಎಂಬುದೇ ಈಗ ಜೆಡಿಎಸ್ ನಾಯಕರನ್ನು ತಲೆಕೆಡಿಸುತ್ತಿರುವಂತೆ ಮಾಡುತ್ತಿರುವ ವಿಚಾರ.

 ಎಚ್ಚೆತ್ತುಕೊಳ್ಳುತ್ತಿರುವ ಜೆಡಿಎಸ್ ನಾಯಕರು

ಎಚ್ಚೆತ್ತುಕೊಳ್ಳುತ್ತಿರುವ ಜೆಡಿಎಸ್ ನಾಯಕರು

ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಗೆ ಮೊದಲ ಬಾರಿಗೆ ಬಿಜೆಪಿ ಲಗ್ಗೆಯಿಡುತ್ತಿದ್ದಂತೆಯೇ ಜೆಡಿಎಸ್ ನಾಯಕರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಈಗಾಗಲೇ ಹಾಲಿ ಶಾಸಕ ಮಾಜಿ ಸಚಿವರೂ ಆಗಿರುವ ಡಿ.ಸಿ.ತಮ್ಮಣ್ಣನವರು ತಮ್ಮ ನಿವಾಸದಲ್ಲಿಯೇ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿ ಅವರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ.

ಕೆ.ಆರ್. ಪೇಟೆಯಲ್ಲಿ ಬಿಜೆಪಿ ಗೆಲುವಿಗೆ ನಿಜವಾಗಿಯೂ ಕಾರಣವಾಗಿದ್ದೇನು?

ಬಿಜೆಪಿಗೆ ಮೊದಲ ಬಾರಿಗೆ ಮಂಡ್ಯದಲ್ಲಿ ಗೆಲುವು ಸಿಕ್ಕಿದೆ. ಇದನ್ನೇ ಮುಂದಿಟ್ಟುಕೊಂಡು ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ‌ನ ತಳಮಟ್ಟದ ನಾಯಕರನ್ನು ತಮ್ಮ ಪಕ್ಷದತ್ತ ಸೆಳೆದುಕೊಂಡು ಪಕ್ಷ ಸಂಘಟನೆ ಮಾಡುವ ಎಲ್ಲ ಸಾಧ್ಯತೆಗಳು ಇರುವುದರಿಂದ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಜೆಡಿಎಸ್ ನಾಯಕರದ್ದಾಗಿದೆ.

 ಜೆಡಿಎಸ್ ನಲ್ಲಿ ಅದೇನದು ಒಳೇಟು?

ಜೆಡಿಎಸ್ ನಲ್ಲಿ ಅದೇನದು ಒಳೇಟು?

ಒಳೇಟು ಎಂಬ ಮತ್ತೊಂದು ಪ್ರಮುಖವಾದ ಮಾತು ಸ್ವತಃ ಜೆಡಿಎಸ್ ಅಭ್ಯರ್ಥಿಯಾಗಿದ್ದ ದೇವರಾಜುರವರಿಂದಲೇ ಹೊರಬಂದಿದೆ. ಹಾಗಾದರೆ ಒಳೇಟು ಎನ್ನುವುದೇನು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆದ ಜೆಡಿಎಸ್ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಒಳೇಟಿನ ಬಗ್ಗೆ ಚರ್ಚೆಯಾಗಿದೆ. ಇಲ್ಲಿ ಒಕ್ಕಲಿಗ ನಾಯಕರೇ ಜೆಡಿಎಸ್ ‌ಗೆ ಕೈಕೊಟ್ಟಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

 ಜೆಡಿಎಸ್ ಗೆ ಕೈಕೊಟ್ಟ ಒಕ್ಕಲಿಗ ಮತದಾರ

ಜೆಡಿಎಸ್ ಗೆ ಕೈಕೊಟ್ಟ ಒಕ್ಕಲಿಗ ಮತದಾರ

ಜೆಡಿಎಸ್ ನಾಯಕರ ಪ್ರಕಾರ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗರೇ ಬಹುಸಂಖ್ಯಾತರಾಗಿದ್ದು 80 ಸಾವಿರಕ್ಕೂ ಅಧಿಕ ಒಕ್ಕಲಿಗ ಮತದಾರರಿದ್ದಾರೆ. ನಾಲ್ವರು ಜಿ.ಪಂ ಮತ್ತು 16 ಜನ ತಾಲೂಕು ಪಂಚಾಯಿತಿ ಸದಸ್ಯರು ಇದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು ಶ್ರಮ ವಹಿಸಿದ್ದರೆ ಮತದಾರರನ್ನು ಒಲಿಸಿ ಜೆಡಿಎಸ್ ‌ಗೆ ಮತ ನೀಡುವಂತೆ ಮಾಡಿದ್ದರೆ ಸೋಲುವ ಮಾತೇ ಇರುತ್ತಿರಲಿಲ್ಲ. ಆದರೆ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರನ್ನು ಪಕ್ಷದ ನಾಯಕರು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.

ಮತ್ತೆ ಆಪರೇಷನ್ ಕಮಲ; ಇಬ್ಬರು ಜೆಡಿಎಸ್ ಶಾಸಕರು ಬಿಜೆಪಿಗೆ?

 ರೋಡ್ ಶೋಗೆ ಸೀಮಿತವಾದ ಪ್ರಚಾರ

ರೋಡ್ ಶೋಗೆ ಸೀಮಿತವಾದ ಪ್ರಚಾರ

ಇನ್ನು ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ದೇವೇಗೌಡರ ಕುಟುಂಬಕ್ಕೆ ಸೇರಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಿಖಿಲ್ ಕುಮಾರಸ್ವಾಮಿ, ದೇವೇಗೌಡರ ಪುತ್ರಿ ಅನುಸೂಯಮ್ಮ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಬಹುತೇಕರು ಕೇವಲ ರೋಡ್ ಶೋ ಮತ್ತು ಬಹಿರಂಗ ಸಭೆಗಳಿಗೆ ಸೀಮಿತರಾದರೇ ಹೊರತು ಕ್ಷೇತ್ರದಲ್ಲಿ ನೆಲೆನಿಂತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಅಗತ್ಯ ಮಾರ್ಗದರ್ಶನ ನೀಡಿ ಗೆಲುವಿನ ತಂತ್ರ ರೂಪಿಸಲಿಲ್ಲ. ಇದೆಲ್ಲವೂ ಜೆಡಿಎಸ್ ಸೋಲಿಗೆ ಕಾರಣವಾಗಿದೆ ಎನ್ನುವುದು ಕ್ಷೇತ್ರದಲ್ಲಿ ಕೇಳಿ ಬರುತ್ತಿರುವ ಮಾತುಗಳಾಗಿವೆ.

ಕುಮಾರಸ್ವಾಮಿಗೆ ಮೋಸ ಮಾಡಲ್ಲ : ರವೀಂದ್ರ ಶ್ರೀಕಂಠಯ್ಯ

ಉಪಚುನಾವಣೆ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಖಾತೆ ತೆರೆದಿರುವ ಬಿಜೆಪಿಯನ್ನು ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸಲು ಬಿಜೆಪಿ ನಾಯಕರು ಈಗಿನಿಂದಲೇ ಕಾರ್ಯತಂತ್ರ ರೂಪಿಸುತ್ತಿದ್ದರೆ, ಅತ್ತ ಜೆಡಿಎಸ್ ನಾಯಕರಿಗೆ ಹಾಲಿ ಶಾಸಕರು ಕಮಲ ಮುಡಿಯಲು ತಯಾರಾಗಿದ್ದಾರೆ ಎಂಬ ವದಂತಿ ನಿದ್ದೆಗೆಡಿಸುವಂತೆ ಮಾಡಿದೆ. ಮುಂದಿನ ವಿಧಾನಸಭಾ ಚುನಾವಣಾ ವೇಳೆಗೆ ಮಂಡ್ಯ ರಾಜಕೀಯದಲ್ಲಿ ಮಹತ್ತರದ ಬದಲಾವಣೆಗಳಾಗುವುದಂತು ನಿಶ್ಚಿತ.

English summary
The defeat at KR Pete is now a matter of concern for JDS leaders. There is a discussion that, the internal disputes in jds are main reason for the defeat
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X