ಬೆತ್ತಲೆ ವಿಡಿಯೋ ಅವಾಂತರ: ಮಂಡ್ಯದ ಮಹಿಳೆ ಆತ್ಮಹತ್ಯೆ
ಮಂಡ್ಯ, ಮಾರ್ಚ್ 3 : ತನ್ನ ಪತಿಯ ಸ್ನೇಹಿತ ತನ್ನ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಘಟನೆಯಿಂದ ಮನನೊಂದು ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸೋಮನಹಳ್ಳಿ ವಾಸಿ ಎಸ್. ಎನ್. ನವೀನಕುಮಾರ್ ಎಂಬುವವರ ಪತ್ನಿ ಸಂಗೀತಾ ಉ. ಪವನ ಎಂಬುವವರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಆರು ವರ್ಷದ ಹಿಂದೆ ಮದುವೆಯಾಗಿದ್ದ ಸಂಗೀತಾ ಮತ್ತು ನವೀನ್ ಕುಮಾರ್ ಗೆ 5 ವರ್ಷ ವಯಸ್ಸಿನ ಮಗಳೂ ಇದ್ದಾಳೆ.[ಆತ್ಮಹತ್ಯೆ ತಡೆಗೆ ಫೇಸ್ ಬುಕ್ ನಿಂದ ಹೊಸ ತಂತ್ರಜ್ಞಾನ]

ರೈಲ್ವೆ ಇಲಾಖೆಯಲ್ಲಿ ಕೆಲಸದಲ್ಲಿದ್ದ ಬಿ.ಕೆ.ಅನಿಲ ಕುಮಾರ್ ಎಂಬಾತ ನವೀನಕುಮಾರನ ಸ್ನೇಹಿತನಾಗಿದ್ದ. ಆಗಾಗ ಸ್ನೇಹಿತನ ಮನೆಗೆ ಬರುತ್ತಿದ್ದ ಅನಿಲ ಕುಮಾರ್ ಯಾರಿಗೂ ತಿಳಿಯದಂತೆ ತನ್ನ ಮೊಬೈಲ್ ನಲ್ಲಿ ನವೀನ್ ಕುಮಾರ್ ಪತ್ನಿ ಸಂಗೀತಾ ಅವರ ಬೆತ್ತಲೆ ವಿಡಿಯೋ ಮಾಡಿಟ್ಟುಕೊಂಡಿದ್ದ.[ಮೈಸೂರಿನಲ್ಲಿ ಪತಿಯ ಎದುರೇ ಪ್ರಾಣ ಬಿಟ್ಟ ಗರ್ಭಿಣಿ]
ಈ ವಿಷಯವನ್ನು ಅನಿಲ ಕುಮಾರನ ಪತ್ನಿ ಸುಗಂಧಿನಿ ಸಂಗೀತಾ ಮತ್ತು ನವೀನ್ ಕುಮಾರ್ ಗೆ ಇತ್ತೀಚೆಗೆ ತಿಳಿಸಿದ್ದಳು. ವಿಷಯ ತಿಳಿದ ನಂತರ ಅನಿಲ್ ಮತ್ತು ನವೀನ್ ನಡುವೆ ದೊಡ್ಡ ಜಗಳವೇ ನಡೆದಿತ್ತು.
ಸ್ವಲ್ಪ ದಿನ ಸುಮ್ಮನಿದ್ದ ಅನಿಲ್ 15 ದಿನದ ಹಿಂದೆ ಮತ್ತೆ ನವೀನ್ ಗೆ ಫೋನ್ ಮಾಡಿ ವಿಡಿಯೋವನ್ನು ನೆನಪಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾನೆ. ಎಷ್ಟೆ ಬೇಡಿಕೊಂಡರೂ ಕೇಳದ ಅನಿಲ್ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಬಿಟ್ಟಿದ್ದಾನೆ.
ಇದರಿಂದ ಅವಮಾನಿತಳಾದ ಸಂಗೀತಾ ಬೇರೆ ದಾರಿ ತೋಚದೆ ಬುಧವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪತಿ ನವೀನ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಅನಿಲ್ ಕುಮಾರ್ ನನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications