ರಾಮನಗರ ಜಿಲ್ಲೆ ಮರುನಾಮಕರಣ ಹೇಗೆ ಮಾಡಬೇಕು ಎಂಬುದು ಗೊತ್ತಿದೆ: ಠಕ್ಕರ್ ಕೊಟ್ಟ ಡಿ ಕೆ ಶಿವಕುಮಾರ್
ಮಂಡ್ಯ, ಏಪ್ರಿಲ್ 26: ನನಗೆ ರಾಮನಗರದ ಹೆಸರನ್ನು ಹೇಗೆ ಬದಲಾವಣೆ ಮಾಡಬೇಕು ಎಂಬುದು ನನಗೆ ಗೊತ್ತಿದೆ. ನಾನು ಮಾಡಿಯೇ ಸಿದ್ದ. ಇದು ಬೆಂಗಳೂರು ದಕ್ಷಿಣವೇ. ನಾವು ಯಾರೂ ಸಹ ಹೊರಗಡೆಯಿಂದ ಬಂದು ಹೆಸರು ಕೊಡಿ ಎಂದು ಕೇಳುತ್ತಿಲ್ಲ. ಇದು ನಮ್ಮ ಹಕ್ಕು. ನಮ್ಮ ತಂದೆ ತಾಯಿ, ಹುಟ್ಟು ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಆಗುತ್ತದೆಯೇ? ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಠಕ್ಕರ್ ಕೊಟ್ಟಿದ್ದಾರೆ.
ಶಿವಕುಮಾರ್ ಕಂಡರೆ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಅಸೂಯೆಯೇ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಡಿ ಕೆ ಶಿವಕುಮಾರ್ ಉತ್ತರಿಸಿದ್ದು, ಏನಾದರೂ ಅಂದುಕೊಳ್ಳಲಿ, ನನ್ನ ಕಂಡರೆ ಅವರಿಗೆ ಪ್ರೀತಿ ಜಾಸ್ತಿ. ದೇವೇಗೌಡರ ಬಳಿ ನಮ್ರತೆಯಿಂದ ಬೇಡಿಕೊಳ್ಳುತ್ತೇನೆ. ಬಿಡದಿ ಟೌನ್ ಶಿಪ್ ನಿಮ್ಮ ಮಗನೇ ಮಾಡಿದ್ದು, ನಿಮ್ಮ ಕಾಲದಲ್ಲಿಯೇ ಆಗಿದ್ದು. ನಾವು ನೀವು ಹಾಕಿದ್ದನ್ನು ಮುಂದುವರೆಸುತ್ತಿದ್ದೇವೆ ಎಂದು ತಿಳಿಸಿದರು. ಬಿಡದಿ ಸೇರಿದಂತೆ ಏಳು ಕಡೆ ಟೌನ್ ಶಿಪ್ ಮಾಡಲು ಹೊರಟಿದ್ದವರು ಹಾಗೂ ಈ ಯೋಜನೆಯ ಪಿತಾಮಹ ಕುಮಾರಸ್ವಾಮಿ. ಈಗ ಅವರ ಕುಟುಂಬದವರೇ ವಿರೋಧ ಮಾಡಿದರೆ ಯಾವ ನ್ಯಾಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ಬಿಡದಿ ಟೌನ್ ಶಿಪ್ ಗೆ ದೇವೇಗೌಡರು ವಿರೋಧ ವ್ಯಕ್ತಪಡಿಸಿರುವ ಕುರಿತು ಮಾತನಾಡಿ, ದೇವೇಗೌಡರು ದೊಡ್ಡವರು. ಪಾಪ ಅವರು ಮರೆತಿರಬೇಕು. ಬಿಡದಿ, ಸಾತನೂರು, ನಂದಗುಡಿ ಈ ಭಾಗದಲ್ಲಿ ಟೌನ್ ಶಿಪ್ ಗೆ ನೋಟಿಫಿಕೇಶನ್ ಹೊರಡಿಸಿದ್ದು ಅವರ ಸುಪುತ್ರ ಕುಮಾರಸ್ವಾಮಿ. ಅವರೇ ಈ ತೀರ್ಮಾನ ಮಾಡಿ ಡಿಎಲ್ ಎಫ್ ಅವರಿಂದ 300 ಕೋಟಿ ರೂ. ಹಣ ಕಟ್ಟಿಸಿಕೊಂಡಿದ್ದರು. ಆನಂತರ ಬಿಜೆಪಿ ಸರ್ಕಾರ ಬಂದಾಗ ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಹಣ ವಾಪಸ್ ನೀಡಿದ್ದರು ಎಂದು ನೆನಪಿಸಿದರು.
ನಾನು ಈಗ ಯಾವುದೇ ಜಮೀನು ಡಿನೋಟಿಫಿಕೇಷನ್ ಮಾಡಲು ತಯಾರಿಲ್ಲ. ಇದು ಮಾಡಿದ ತಕ್ಷಣ ದುಡ್ಡು-ಕಾಸು ಹೊಡೆದರು ಎನ್ನುವ ಆರೋಪ ಬರುತ್ತದೆ. ಈಗಾಗಲೇ ನಾನು ಕೋರ್ಟ್, ಕಚೇರಿ ಅಲೆದು, ಜೈಲು ವಾಸವನ್ನೂ ಅನುಭವಿಸಿದ್ದೇನೆ. ನನ್ನ ಸ್ವಂತ ಜಮೀನಿನ ಬಗ್ಗೆಯೂ ಇವರುಗಳೇ ಆರೋಪ ಮಾಡಿದ್ದಾರೆ. ದೇವೇಗೌಡರೇ ನಿಮ್ಮ ಮಗ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರೇ ಯಾಕೆ ಈ ಜಮೀನು ಡಿನೋಟಿಫಿಕೇಷನ್ ಮಾಡಲಿಲ್ಲ. ಈಗೇಕೆ ಮಾತನಾಡುತ್ತಿದ್ದೀರಿ? ನಾನು ಎಲ್ಲಾ ರೈತರ ಬಳಿ ಮಾತನಾಡಿದ್ದೇನೆ. ಗ್ರೇಟರ್ ಬೆಂಗಳೂರು ನಗರ ಇಡೀ ದೇಶಕ್ಕೇ ಮಾದರಿಯಾಗುವಂತಹ ನಗರವನ್ನಾಗಿ ಮಾಡುತ್ತೇನೆ. ದೆಹಲಿ, ಚಂಡೀಗಡ್ ಮಾದರಿಗಿಂತ ಉತ್ತಮವಾಗಿ 10 ಸಾವಿರ ಎಕರೆಯಲ್ಲಿ ಬೆಂಗಳೂರು ನಗರಕ್ಕಿಂತ ಚೆನ್ನಾಗಿ ರೂಪಿಸಲಾಗುವುದು. ಇದಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಇಲ್ಲಿ ರೈತರು ತಮ್ಮ ಭೂಮಿ ಮಾರಲೂ ಆಗದೆ, ಅಭಿವೃದ್ಧಿಯನ್ನು ಮಾಡಲಾಗದೇ ಪರದಾಡುತ್ತಿದ್ದಾರೆ. ಈ ಬಗ್ಗೆ ಏನಾದರೂ ಒಂದು ತೀರ್ಮಾನ ಮಾಡಿ ಎಂದು ರೈತರೇ ನನ್ನ ಬಳಿ ಬಂದು ಮನವಿ ಮಾಡಿದ್ದಾರೆ. ಅವರು ತಮ್ಮ ಆಸ್ತಿ ಕಳೆದುಹೋಯಿತು ಎನ್ನಬಾರದು, ಅವರು ಖುಷಿ ಪಡಬೇಕು. ಭೂಮಿ ಹೋದರೂ ಉತ್ತಮ ಉತ್ತಮ ಪರಿಹಾರ ನೀಡಿದ್ದಾರೆ ಎನ್ನಬೇಕು. ರೈತರ ಮುಂದೆ ಎರಡು ಆಯ್ಕೆಗಳನ್ನು ನೀಡಿದ್ದು ಭೂಮಿಗೆ ಹಣದ ಪರಿಹಾರ ಅಥವಾ ಅಭಿವೃದ್ಧಿ ಪಡಿಸಿದ ಪರಿವರ್ತಿತ ಭೂಮಿ ಪಡೆಯಬಹುದು ಎಂದು ತಿಳಿಸಿದ್ದೇವೆ. ರಾಜಕೀಯವಾಗಿ ನಾವು ಏನೇ ಮಾಡಿದರೂ ವಿರೋಧ ಮಾಡುತ್ತಾರೆ ಎಂದು ಹೇಳಿದರು.
ನಾಡ ಹಬ್ಬ ದಸರಾವನ್ನು ಸಹ ವಿನೂತನವಾಗಿ ಆಚರಿಸಲು ಚರ್ಚೆ ನಡೆಸಲಾಗಿದೆ. ಹಳೆಯ ಒಂದಷ್ಟು ಪದ್ದತಿಗಳನ್ನು ಕೈಬಿಟ್ಟು ಹೊಸ ಪೀಳಿಗೆಯನ್ನು ಸೆಳೆಯುವಂತೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಸಭೆ ನಡೆಸೋಣ ಎಂದು ಹೇಳಿದ್ದಾರೆ. ಕಂಬಳ ನಮ್ಮ ರಾಜ್ಯದ ಕರಾವಳಿ ಭಾಗ ವಿಶೇಷವಾದ ಆಚರಣೆ, ಹೀಗಾಗಿ ಕಂಬಳವನ್ನು ದಸರಾದಲ್ಲಿ ಸೇರಿಸಲಾಗುವುದು. ಇದಕ್ಕೆ ಸ್ಥಳ ಹುಡುಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಕಾಶ್ಮೀರದಲ್ಲಿ ಭದ್ರತಾ ವೈಫಲ್ಯವಾಗಿದೆ ಎಂದು ಕೇಂದ್ರ ಒಪ್ಪಿಕೊಂಡಿರುವ ಕುರಿತು ಮಾತನಾಡಿ, ಕಾಂಗ್ರೆಸ್ ಪಕ್ಷ ಈ ಸಂದರ್ಭದಲ್ಲಿ ಯಾರನ್ನೂ ಟೀಕೆ ಮಾಡುವುದಿಲ್ಲ. ಇದು ಕೆಸರು ಎರಚುವಂತಹ ಸಂದರ್ಭವಲ್ಲ. ಅವರು ಏನು ಬೇಕಾದರೂ ಹೇಳಿಕೆ ನೀಡಲಿ. ಆದರೆ ನಾನು ಒಂದು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷನಾಗಿ ವಿರುದ್ಧ ಮಾತನಾಡಲು ಇಷ್ಟವಿಲ್ಲ. ಏನೇ ಮಾತನಾಡಿದರು ಅದು ಆಹಾರವಾಗುತ್ತದೆ. ಇದು ನನಗೆ ಇಷ್ಟವಿಲ್ಲ. ಜನರಿಗೆ ಮೊದಲು ಶಾಂತಿ, ನೆಮ್ಮದಿ ಮುಖ್ಯ. ದುಷ್ಕರ್ಮಿಗಳನ್ನು ಮುಗಿಸುತ್ತೇವೆ ಎಂದು ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ. ನಾವು ಮಾಡಿ ಎಂದು ಹೇಳಿದ್ದೇವೆ. ಮಿಕ್ಕಿದ್ದು ಅವರಿಗೆ ಬಿಟ್ಟಿದ್ದು ಎಂದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಜಾತಿ, ಧರ್ಮಗಳ ಸಂಕೋಲೆಗಳಿಗೆ ಸಿಲುಕಿಕೊಳ್ಳಬೇಡಿ. ಮಾನವೀಯತೆ ಹಾಗೂ ಕಾಂಗ್ರೆಸ್ ಪಕ್ಷವೇ ನಿಮ್ಮ ಜಾತಿಯಾಗಬೇಕು. ಒಂದು ನೀತಿ, ಸಿದ್ದಾಂತದ ಮೇಲೆ ಕೊನೆಯತನಕ ಬದುಕಬೇಕು. ಯುವ ಕಾಂಗ್ರೆಸ್ಸಿನಿಂದ ಬೆಳೆದವರು ಎಂದಿಗೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಿವಿಮಾತು ಹೇಳಿದರು.
ನಾನು ಶಾಲೆಯಲ್ಲಿ ಓದುವಾಗ, ಎಂಎಲ್ ಎ ಆದಾಗ ಜಾತಿ ಗೊತ್ತಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ನಮಗೆ ಅರಿವಿಲ್ಲದೇ ಈ ಸುಳಿಯಲ್ಲಿ ಸಿಲುಕಿಕೊಂಡೆವು. ನೀವು ಇವುಗಳ ಬಲೆಗೆ ಬೀಳಬೇಡಿ. ರಾಜಕೀಯದಲ್ಲಿ ಶ್ರಮಪಟ್ಟರೆ ಫಲವುಂಟು. ದೊಡ್ಡ ಸಮೂಹ ಸೇರಿಸಬೇಡಿ, ಪುಟ್ಟದಾಗಿ ಬೆಳೆಯುತ್ತಾ ಹೋಗಿ ಆಗ ಎಲ್ಲಾ ನಾಯಕರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ನಾನು ಹೀಗೆ ಬೆಳೆದಿದ್ದಕ್ಕೆ ಅಂತಿಮ ಪದವಿ ಓದುವಾಗಲೇ ಟಿಕೆಟ್ ನೀಡಿದರು. ನನಗೆ ಅವಕಾಶ ಕೊಟ್ಟವರು ದಡ್ಡರೇ?. ವಿದ್ಯಾರ್ಥಿ ನಾಯಕತ್ವ ಬೆಳೆಯಬೇಕು ಎಂದು ಕೀರ್ತಿ ಗಣೇಶ್ ನನ್ನು ನಿಗಮ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡಲಾಗಿದೆ ಎಂದರು.
ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಜಾತಿ, ಧರ್ಮ ನೋಡಿ ನೀಡುತ್ತಿಲ್ಲ. ಈ ಸಮಾಜದ ಎಲ್ಲಾ ವರ್ಗಗಳ ಜನರಿಗೆ ಗ್ಯಾರಂಟಿ ಯೋಜನೆ ಮೂಲಕ 52 ಸಾವಿರ ಕೋಟಿ ನೀಡುತ್ತಿದ್ದೇವೆ. ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಶಿಕ್ಷಣದ ಹಕ್ಕು, ನರೇಗಾ, ಆಹಾರ ಭದ್ರತಾ ಕಾಯ್ದೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರಲಾಯಿತು. ಜನಪರವಾದ ಒಂದೇ ಒಂದು ಯೋಜನೆಗಳನ್ನು ಬಿಜೆಪಿ ತಂದಿಲ್ಲ. 371 ಜೆ ಯೋಜನೆ ನಮ್ಮ ಹೆಗ್ಗಳಿಕೆ. ಅಂದು ಅಡ್ವಾನಿಯವರು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದರು.
ಅಂಗನವಾಡಿ ಯೋಜನೆ ತಂದಿದ್ದು ಇಂದಿರಾಗಾಂಧಿ ಅವರು, ಆಶಾ ಯೋಜನೆ ತಂದಿದ್ದು ಮನಮೋಹನ್ ಸಿಂಗ್ ಅವರು. ಸಿಇಟಿ ತಂದಿದ್ದು ವೀರಪ್ಪ ಮೊಯ್ಲಿ ಅವರು, ಬಂಗಾರಪ್ಪ ಅವರು ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಯೋಜನೆ ತಂದರು. ಇದರಿಂದ ವರ್ಷಕ್ಕೆ 17 ಸಾವಿರ ಕೊಡುತ್ತಿದ್ದೇವೆ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎಂದರು. ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಪಕ್ಷದ ನೇತೃತ್ವವಹಿಸಿಕೊಂಡ ವರ್ಷದಲ್ಲಿ ಹೊಸದಾಗಿ ಯುವ ಕಾಂಗ್ರೆಸ್ ನೇತೃತ್ವವಹಿಸಿಕೊಂಡಿರುವ ನೀವೇ ಪುಣ್ಯವಂತರು. ನೀವು ಗಾಂಧಿಯವರ ತತ್ವ, ಆದರ್ಶಗಳನ್ನು ಅಧ್ಯಯನ ಮಾಡಬೇಕು, ಸಾಧ್ಯವಾದಷ್ಟು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.












Click it and Unblock the Notifications