ಹಿಜಾಬ್ ವಿವಾದ: 5 ಲಕ್ಷ ರೂ. ಘೋಷಿಸಿದ್ದ ಜಮಿಯತ್ ಉಲಮಾ-ಇ-ಹಿಂದ್ ವಿರುದ್ಧ ದೂರು
ಮಂಡ್ಯ, ಫೆಬ್ರವರಿ 10: ಶಾಂತವಾಗಿದ್ದ ಕರ್ನಾಟಕದಲ್ಲಿ ಅಶಾಂತಿಯ ಕಿಡಿ ಹೊತ್ತಿಸಿದ ಹಿಜಾಬ್ ವಿವಾದ ಪ್ರಕರಣ ಸದ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಉಡುಪಿ ಕಾಲೇಜಿನಲ್ಲಿ ಶುರುವಾದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಕರ್ನಾಟಕದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದೆ.
ಹಲವು ರಾಜಕೀಯ ನಾಯಕರು ಕೇಸರಿ ಶಾಲು ಹಾಗೂ ಹಿಜಾಬ್ ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸದ್ಯ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ಹೈಕೋರ್ಟ್ ತೀರ್ಪು ಬರುವುದನ್ನು ಎಲ್ಲರೂ ಕಾಯುತ್ತಿದ್ದಾರೆ.
ಇದೇ ವೇಳೆ ಹಿಜಾಬ್ ವಿವಾದದ ಸಂದರ್ಭದಲ್ಲಿ "ಅಲ್ಲಾ-ಹು-ಅಕ್ಬರ್' ಎಂದು ಹಿಂದೂ ಹುಡುಗರ ಎದುರು ಘೋಷಣೆ ಕೂಗಿದ ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್‌ಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಕ್ಕಾಗಿ ಜಮಿಯತ್ ಉಲಮಾ-ಇ-ಹಿಂದ್ ವಿರುದ್ಧ ಮಂಡ್ಯದ ಹಿಂದೂ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.

ಜಮಾತ್ ಉಲೆಮಾ-ಎ-ಹಿಂದ್ ಕೋಮು ವಿಭಜನೆ ಮತ್ತು ಅವರ ಮೂಲಭೂತವಾದವನ್ನು ಪ್ರೋತ್ಸಾಹಿಸುತ್ತಿದೆ ಎಂದು ಕಾರ್ಯಕರ್ತರು ಹೇಳಿದ್ದು, ಆದಾಯದ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಮಂಡ್ಯದ ಪಿಇಎಸ್ ಕಾಲೇಜಿನ ಬಳಿ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಎದುರು ಕೆಲವು ಹುಡುಗರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದರು. ಇದಕ್ಕೆ ಪ್ರತಿರೋಧವಾಗಿ ವಿದ್ಯಾರ್ಥಿನಿಯು ಅಲ್ಲಾ-ಹು-ಅಕ್ಬರ್ ಎಂಬ ಘೋಷಣೆ ಕೂಗಿದ್ದರು.
ಮುಸ್ಕಾನ್ ಖಾನ್ ಅಲ್ಲಾ-ಹು-ಅಕ್ಬರ್ ಎಂದು ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗಿರುವುದರ ಮಧ್ಯೆ ಜಮಾತ್ ಉಲೆಮಾ-ಎ-ಹಿಂದ್ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಟ್ವೀಟ್ ಮಾಡಿತ್ತು.
ಮಂಡ್ಯದ ಘಟನೆ ಬಗ್ಗೆ ವಿದ್ಯಾರ್ಥಿನಿ ಹೇಳಿದ್ದೇನು?
ಮಂಗಳವಾರ ನಾನು ಎಂದಿನಂತೆ ಕಾಲೇಜಿಗೆ ತೆರಳಿದ್ದೆ. ಈ ವೇಳೆ ಕೆಲವು ಯುವಕ ಗುಂಪು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ನಾನು ಅಲ್ಲಾ ಹು ಅಕ್ಬರ್ ಎಂಬ ಘೋಷಣೆ ಕೂಗಿದೆ. ಆದರೆ ನನ್ನನ್ನು ಹಿಂಬಾಲಿಸಿ ಬಂದ ಆ ಗುಂಪಿನಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಶೇ.10ರಷ್ಟಿದ್ದರೆ, ಉಳಿದ ಶೇ.90ರಷ್ಟು ನಮ್ಮ ಕಾಲೇಜಿನವರೇ ಆಗಿರಲಿಲ್ಲ ಎಂದು ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಹೇಳಿದ್ದಾರೆ.

ವಿಸ್ತೃತ ಪೀಠದಲ್ಲಿ ಇಂದು ಹಿಜಾಬ್ ಅರ್ಜಿ ವಿಚಾರಣೆ
ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್‌ನಲ್ಲಿ ವಿಶೇಷ ಪೀಠ ರಚನೆ ಮಾಡಲಾಗಿದೆ.
ಬುಧವಾರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಬಳಿಕ ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದ್ದರು.
ಈಗ ಅರ್ಜಿಗಳ ವಿಚಾರಣೆಗೆ ವಿಶೇಷ ಪೂರ್ಣ ಪೀಠವನ್ನು ರಚನೆ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೂರ್ಣ ಪೀಠ ಗುರುವಾರ ಮಧ್ಯಾಹ್ನ 2.30ರಿಂದ ಅರ್ಜಿ ವಿಚಾರಣೆ ನಡೆಯಲಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಇದ್ದು, ಇಂದು ಮಧ್ಯಾಹ್ನವೇ ವಿಚಾರಣೆ ಆರಂಭವಾಗಲಿದೆ.












Click it and Unblock the Notifications