ಒಳ್ಳೆ ಹುಡುಗಿ ಸಿಕ್ಕಳು ಅಂತ ಪುಟ್ಟರಾಜು ಬದಲಿಗೆ ಕುಮಾರಸ್ವಾಮಿ ಮದುವೆ ಆಗುತ್ತಿದ್ದಾರೆ- ಚಲುವರಾಯಸ್ವಾಮಿ ವ್ಯಂಗ್ಯ
ಮಂಡ್ಯ ಮಾರ್ಚ 26: ವಿರೋಧದ ನಡುವೆ ಮಂಡ್ಯದಿಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈ ಬಗ್ಗೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧಿಸುವ ಬಗ್ಗೆ ಸಾಕಷ್ಟು ವಿರೋಧ ಹಾಗೂ ಒತ್ತಾಯಗಳು ಕೇಳಿ ಬಂದಿದ್ದವು. ಮಾತ್ರವಲ್ಲದೆ ಮೈತ್ರಿ ಪಕ್ಷ ಬಿಜೆಪಿ ಕೂಡ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಹೀಗಾಗಿ ಈ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸಿಎಸ್ ಪುಟ್ಟರಾಜು ಕಣಕ್ಕಿಳಿಯಲಿದ್ದಾರೆ ಎಂದು ಕುಮರಸ್ವಾಮಿ ಅವರೇ ಹೇಳಿದ್ದರು.

ಆದರೀಗ ಅದು ಬದಲಾಗಿದೆ. ಮಂಡ್ಯದಿಂದ ಪುಟ್ಟರಾಜು ಬದಲು ಸ್ವತ: ಎಚ್‌ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಈ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, 'ಸಿಎಸ್ ಪುಟ್ಟರಾಜು ಅಭ್ಯರ್ಥಿ ಎಂದು ಹೇಳಿ ತಾವೇ ಅಭ್ಯರ್ಥಿ ಆಗುತ್ತಿದ್ದಾರೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತಾಗಿದೆ. ಒಳ್ಲೆ ಹುಡುಗಿ ಇದ್ದಾಳೆ ಈ ಬಾರಿ ನಾನೇ ಮದುವೆ ಆಗುತ್ತೇನೆ . ಪುಟ್ಟರಾಜು ನಿನಗೆ ಮುಂದೆ ಒಳ್ಳೆ ಹುಡುಗಿ ಹುಡುಕೋಣ ಎಂದಿದ್ದಾರೆ' ಎಂದು ವ್ಯಂಗ್ಯವಾಡಿದ್ದಾರೆ.
'ಪಾಪ ಆ ಪುಟ್ಟರಾಜಯ ಕೈಯಲ್ಲಿ ಸಭೆ ಮಾಡಿಸಿದರು. ಆತ ಎಲ್ಲಾ ದೇವಸ್ಥಾನಗಳನ್ನು ಸುತ್ತಿ ಬಂದ. ಆದರೆ ಈಗ ಕುಮಾರಸ್ವಾಮಿ ಅವರು ಹುಡುಗಿ ಚೆನ್ನಾಗಿದ್ದಾಳೆ ನಾನೇ ಮದ್ವೆ ಆಗುತ್ತೇನೆ ಅಂತಿದ್ದಾರೆ. ಬುಟ್ಟಿಯೊಳಗೆ ನಾಗರಹಾವು ಇದೆ, ಬಿಡುತ್ತೇವೆ ಅಂತ ಹೇಳುತ್ತಿರುವ ಕುಮಾರಸ್ವಾಮಿ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಹೋದ ಕಡೆಯೆಲ್ಲಾ ನನ್ನ ಕರ್ಮ ಭೂಮಿ ಅಂತಾರೆ. ಮಂಡ್ಯ, ಹಾಸನ, ಕೋಲಾರ ಮೂರು ಆದರೆ ಪರವಾಗಿಲ್ಲ. ಚಿಕ್ಕಬಳ್ಳಾಪುರಕ್ಕೂ ತುಮಕೂರಿಗೂ ಹೋಗಿ ಬಂದಿದ್ದಾರೆ' ಎಂದು ಕುಟುಕಿದ್ದಾರೆ.

ಇನ್ನೂ ಕಳೆದ ಚುನಾವಣೆಯಲ್ಲಿ ಸುಮಲತಾ ವಿರುದ್ಧ ನಿಂತಿದ್ದ ಅವರು(ಕುಮಾರಸ್ವಾಮಿ) ಈಗ ಅಕ್ಕ ಅಮ್ಮ ಅಂತಿದ್ದಾರೆ. ಈ ಮಾತನ್ನು ಕಳೆದ ಚುನಾವಣೆಯಲ್ಲಿ ಅಂದಿದ್ದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು ಎಂದು ಚಲುವರಾಯಸ್ವಾಮಿ ಟಾಮಗ್ ಕೊಟ್ಟಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕ. ಆದರೆ ಮದ್ದೂರು, ಮಳವಳ್ಳಿ ಭಾಗದ ಒಕ್ಕಲಿಗರು ಕುಮಾರಸ್ವಾಮಿ ಅವರ ಸ್ವರ್ಧೆಗೆ ಸಹಮತ ವ್ಯಕ್ತಪಡಿಸುತ್ತಿಲ್ಲ ಎನ್ನಲಾಗುತ್ತಿದೆ. ಆಪ್ತ ಬಳಗದವರು ಮಾತ್ರ ಕುಮಾರಸ್ವಾಮಿ ಅಭ್ಯರ್ಥಿ ಆಗಲೆಂದು ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗ ಚನ್ನಪಟ್ಟಣ ಕಾರ್ಯಕರ್ತರ ಮಾತು ಧಿಕ್ಕರಿಸಿ ಮಂಡ್ಯ ಅಖಾಡಕ್ಕೆ ಕುಮಾರಸ್ವಾಮಿ ಧುಮುಕಿದ್ದಾರೆ. ಮುಂದಾಗುವ ಪರಿಣಾಮಗಳ ಕುರಿತು ತೀವ್ರ ಚಿಂತಿತರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತರೆ ಚನ್ನಪಟ್ಟಣ ಜನತೆ ಮುಂದೆ ಹೋಗುವುದು ಹೇಗೆ? ಗೆದ್ದರೂ ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಮತ್ತೆ ಗೆಲುವು ಸಾಧಿಸುವುದು ಸುಲಭವೂ ಅಲ್ಲ ಎಂದು ಹೇಳಲಾಗುತ್ತಿದೆ.
ಅಲ್ಲದೆ, ಪದೇ ಪದೇ ಕ್ಷೇತ್ರ ಬದಲಿಸಿ ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಅಸಹನೆಯಿಂದ ಕಾರ್ಯಕರ್ತರು, ಮುಖಂಡರು ಅನ್ಯ ಪಕ್ಷದತ್ತ ಮುಖಮಾಡಿದರೆ ಬಿಜೆಪಿ ಭದ್ರಕೋಟೆಯಾದ ಚನ್ನಪಟ್ಟಣ ಅನ್ಯಪಕ್ಷದ ಪಾಲಾಗಬಹುದು ಎಂಬ ಆತಂಕ ಕುಮಾರಸ್ವಾಮಿಗೆ ಕಾಡುತ್ತಿದೆ.












Click it and Unblock the Notifications