ನೀರಾವರಿ ಅಲ್ಲದ ಕೃಷಿ ಭೂಮಿಯಲ್ಲಿ ಕಬ್ಬು-ಭತ್ತ ಬಿಟ್ಟು ಶ್ರೀಗಂಧ ಬೆಳೆದು ಸಿರಿವಂತರಾಗಿ: ಮಂಡ್ಯ ರೈತರಿಗೆ ಸಲಹೆ
ನೀರಾವರಿ ಅಲ್ಲದ ಕೃಷಿ ಭೂಮಿಯಲ್ಲಿ ಶ್ರೀಗಂಧ ಬೆಳೆ ಬೆಳೆಯಿರಿ ಎಂದು ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ್ ಮಂಡ್ಯ ರೈತರಿಗೆ ಸಲಹೆ ನೀಡಿದರು.
ಮಂಡ್ಯ, ಫೆಬ್ರವರಿ, 23: ವಾಣಿಜ್ಯ ಬೆಳೆಗಳಾದ ಕಬ್ಬು-ಭತ್ತವನ್ನೇ ನಂಬಿರುವ ಮಂಡ್ಯದ ರೈತರ ಬದುಕು ಹಸನಾಗಲೇ ಇಲ್ಲ. ಆದರೆ ಶ್ರೀಗಂಧ ಬೆಳೆ ಬೆಳೆದ ರೈತರು ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘದ ಅಧ್ಯಕ್ಷ ಅಮರನಾರಾಯಣ್ ಹೇಳಿದರು.
2022-23 ನೇ ಸಾಲಿನ ಆತ್ಮ ಯೋಜನೆಯಡಿ ಶ್ರೀಗಂಧ, ವನಕೃಷಿ ಮತ್ತು ಸಮಗ್ರ ಕೃಷಿ ಪದ್ಧತಿ ಕುರಿತು ತರಬೇತಿ ಹಾಗೂ ವಿಚಾರ ಸಂಕೀರಣ ಉದ್ಘಾಟಿಸಿ ಅವರು ಮಾತನಾಡಿದರು. ಮಂಡ್ಯದಲ್ಲಿ 51 ಭಾಗ ನೀರಾವರಿ ಜಮೀನು ಇದೆ. 42 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದೆ. ರೈತರು ನೀರಾವರಿ ಇಲ್ಲದ ಕೃಷಿ ಭೂಮಿಯಲ್ಲಿ ಶ್ರೀಗಂಧ ಬೆಳೆ ಬೆಳೆದು ಆರ್ಥಿಕವಾಗಿ ಲಾಭ ಪಡೆದುಕೊಳ್ಳಬಹುದು ಎಂದರು.

ಶ್ರೀಗಂಧ ಬೆಳೆಯ ಬಗ್ಗೆ ತಿಳಿದುಕೊಳ್ಳಬೇಕಿದೆ
ಅಂದಿನ ಮೈಸೂರಿನ ಮಹಾರಾಜರು ಹೆಚ್ಚಾಗಿ ಸಿಗುತ್ತಿದ್ದ ಶ್ರೀಗಂಧ ಬೆಳೆಯನ್ನು ಕಂಡು ಮೈಸೂರು ಸ್ಯಾಂಡಲ್ ಸೋಪ್, ಗಂಧದ ಎಣ್ಣೆ ಕಾರ್ಖಾನೆಗೆ ಬುನಾದಿ ಹಾಕಿದರು. ಅದರ ಪರಿಣಾಮ ಇಂದು ದೇಶ -ವಿದೇಶಗಳಲೆಲ್ಲಾ ಶ್ರೀಗಂಧದ ಬೆಳೆ ಶ್ರೀಮಂತವಾಗಿದೆ. ಇಡೀ ಭಾರತದಲ್ಲೇ ಕರ್ನಾಟಕ ಶೇಕಡಾ 71ರಷ್ಟು ಶ್ರೀಗಂಧ ಪೂರೈಸುತ್ತಿದೆ. ಈ ನಿಟ್ಟಿನಲ್ಲಿ ರೈತರು ಶ್ರೀಗಂಧದ ಬೆಳೆಯ ಬಗ್ಗೆ ತಿಳಿದುಕೊಂಡು ಬೆಳೆಯನ್ನು ಬೆಳೆಯಬೇಕಿದೆ ಎಂದು ಸಲಹೆ ನೀಡಿದರು.
ರೈತರಲ್ಲಿ ಅರಿವು ಮೂಡಿಸುತ್ತಿದ್ದೇವೆ
ಕರ್ನಾಟಕ ಶ್ರೀಗಂಧ ಮತ್ತು ವನ ಕೃಷಿ ಬೆಳಗಾರರ ಸಂಘವು ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಸಂಚರಿಸಿ ಶ್ರೀಗಂಧ ಬೆಳೆಯ ಬಗ್ಗೆ ರೈತರಲ್ಲಿ ಅರಿವು ಮೂಡಿಸುತ್ತಿದೆ. ಸರ್ಕಾರ ಶ್ರೀಗಂಧ ಬೆಳೆಯನ್ನು ತೋಟಗಾರಿಕೆ ಬೆಳೆ ಎಂದು ಪರಿಗಣಿಸಬೇಕು. ಹಾಗೆಯೇ ತೋಟಗಾರಿಕೆ ಇಲಾಖೆಯಿಂದ ಸಾಲ, ಸೌಲಭ್ಯ ಹಾಗೂ ವಿಮೆ ಇನ್ನಿತರ ಸೌಲಭ್ಯವನ್ನು ಒದಗಿಸಬೇಕು. ಶ್ರೀ ಗಂಧದ ಕೃಷಿಯಲ್ಲಿ ಉಪಯೋಗಿಸುವ ಗೊಬ್ಬರ, ಗಿಡಗಳ ನಡುವೆ ಅಂತರ, ರೋಗಗಳ ಕುರಿತಂತೆ ರೈತರಿಗೆ ಮಾಹಿತಿ ಕೈಪಿಡಿ ಒದಗಿಸಬೇಕು ಎಂದು ಮನವಿ ಮಾಡಿದರು.
ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸಲಹೆ
ಜಿಲ್ಲಾ ಪಂಚಾಯತ್ ಸಿಇಓ ಶಾಂತ ಎಲ್. ಹುಲ್ಮನಿ ಮಾತನಾಡಿ, ಪ್ರಗತಿಪರ ರೈತರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿರುವ ವಿಧಾನ ಹಾಗೂ ಹೊಸ ತಂತ್ರಜ್ಞಾನಗಳ ಬಳಕೆ ಕುರಿತ ಯಶೋಗಾಥೆಗಳನ್ನು ಇತರೆ ರೈತರೊಂದಿಗೆ ಹಂಚಿಕೊಳ್ಳಿ. ರೈತರಿಗೆ ಹೆಚ್ಚು ಕಾರ್ಯಾಗಾರಗಳನ್ನು ಆಯೋಜಿಸಿ. ರೈತರು ಕೃಷಿಯಲ್ಲಿ ಖುದ್ದು ತಮ್ಮ ಅನುಭವ, ತೊಂದರೆಗಳು ಮತ್ತು ಸುಧಾರಣೆ ಅಂಶಗಳನ್ನು ಹಂಚಿಕೊಳ್ಳಲಿದ್ದಾರೆ. ಇಲ್ಲಿ ಮೂಡುವ ಅಭಿಪ್ರಾಯಗಳು ಸರ್ಕಾರದ ಹಂತಕ್ಕೆ ತಲುಪಿದರೆ ರೈತರ ಪರವಾಗಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದರು.

ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಶಾಲೆಗಳಲ್ಲಿ 1200 ಆಟದ ಮೈದಾನಗಳನ್ನು ನಿರ್ಮಾಣ ಮಾಡಲು ಕೆಲಸವನ್ನು ಕೈಗೊಳ್ಳಲಾಗುತ್ತಿದೆ. ಹಾಗೆಯೇ ಸ್ಮಶಾನದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಂ. ಬಾಬು, ಸಂಜಿವಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಎಸ್ ಅಶೋಕ್, ತೋಟಗಾರಿಕೆ ಇಲಾಖೆಯ ನಿರ್ದೇಶಕ ಮಂಜುನಾಥ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಹರ್ಷ, ಕೃಷಿ ಇಲಾಖೆಯ ವಿಷಯ ತಜ್ಞೆ ಸುಚಿತ್ರ ಕೆ.ಪಿ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications