ಗ್ರಾ.ಪಂ ಚುನಾವಣೆ: ವಿಭಿನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಜ್ಞಾವಂತ ಅಭ್ಯರ್ಥಿ
ಮಂಡ್ಯ, ಡಿಸೆಂಬರ್ 20: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಪ್ರತಿಷ್ಠೆಯ ಕಣವಾಗಿರುವ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಒಲಿಸಿಕೊಳ್ಳಲು ತರಾವೇರಿ ಆಶ್ವಾಸನೆಗಳನ್ನು ನೀಡುತ್ತಿದ್ದಾರೆ.
ಮಂಡ್ಯ ಜಿಲ್ಲೆಯಲ್ಲೊಬ್ಬ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ಚುನಾವಣಾ ಪೂರ್ವ ಪ್ರಣಾಳಿಕೆಯಂತೆ ತನ್ನ ಭರವಸೆಗಳನ್ನು ಚುನಾವಣಾ ಪ್ರಚಾರ ಪತ್ರದಲ್ಲಿ ತಿಳಿಸಿದ್ದಾನೆ.
ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!
ಮತದಾರರ ಮನಗೆಲ್ಲಲು ಗ್ರಾ.ಪಂ ಚುನಾವಣೆಗೆ ವಿಭಿನ್ನ ಪ್ರಣಾಳಿಕೆ ಬಿಡುಗಡೆ ಮಾಡಿರುವ ಪ್ರಜ್ಞಾವಂತ ಅಭ್ಯರ್ಥಿ ಸುಕುಮಾರ್, ಕಾನೂನು ಬದ್ಧವಾಗಿ ಜನರ ಸೇವೆಗೆ ಸೈ ಎಂದಿದ್ದಾನೆ.
"ನಿಮ್ಮ ಮತ-ನಮ್ಮ ಗ್ರಾಮ-ನನ್ನ ಯೋಜನೆ' ಎಂಬ ಘೋಷವಾಕ್ಯದೊಂದಿಗೆ ಕಣ್ಣಕ್ಕಿಳಿದಿರುವ ಅಭ್ಯರ್ಥಿ ಸುಕುಮಾರ್, ಮಂಡ್ಯ ತಾಲ್ಲುಕಿನ ಹಳುವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪುರ ಮತಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ದಾನೆ.
ಗ್ರಾಮಗಳ ಅಭಿವೃದ್ಧಿಗೆ ಶಾಸಕ, ಸಂಸದರ ಅವಶ್ಯಕತೆ ಇಲ್ಲ. ಕೇಂದ್ರ, ರಾಜ್ಯದ ಅನುದಾನ ನೇರವಾಗಿ ಗ್ರಾ.ಪಂಗೆ ಬರುತ್ತದೆ. ಆದ್ದರಿಂದ ಗ್ರಾಮಗಳ ಅಭಿವೃದ್ಧಿ ಬಹಳ ಸುಲಭ ಎಂದು ಪ್ರಚಾರ ಪತ್ರದಲ್ಲಿ ತಿಳಿಸಿದ್ದಾನೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತಾವು ಗೆದ್ದರೆ, ಗ್ರಾಮದ ರೈತರಿಗೆ ಆಧುನಿಕ ಬೇಸಾಯ ಪದ್ಧತಿ, ಕಳೆ, ಕೀಟ ನಿರ್ವಹಣೆ ಕುರಿತು ಕೃಷಿ ತಜ್ಞರಿಂದ ತರಬೇತಿ ನೀಡುವುದು, ಗ್ರಾಮಸ್ಥರಿಗೆ ಉಚಿತ ಆರೋಗ್ಯ ಶಿಬಿರ ಆಯೋಜನೆ ಸೇರಿದಂತೆ 16 ಅಂಶಗಳ ಭರವಸೆಯನ್ನು ಈಡೇರಿಸುವುದಾಗಿ ಹೇಳಿದ್ದಾರೆ.