Get Updates
Get notified of breaking news, exclusive insights, and must-see stories!

ಟಿಕೆಟ್ ಪಡೆಯಲು ಯಾರಿಗೆ, ಎಷ್ಟು ಹಣ ನೀಡಿದ್ದೀರಿ?: ಎಂ.ಶ್ರೀನಿವಾಸ್‌ಗೆ ಎಚ್‌.ಡಿ.ಕೆ ಪ್ರಶ್ನೆ

ಮಂಡ್ಯ, ಮೇ, 05: ಈ ಹಿಂದೆ ನಾಲ್ಕು ಬಾರಿ ಜೆಡಿಎಸ್ ಟಿಕೆಟ್ ಪಡೆದಿದ್ದ ಎಂ. ಶ್ರೀನಿವಾಸ್ ಅವರು ಬಿ.ಫಾರಂಗಾಗಿ ಯಾರಿಗೆ ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸವಾಲು ಹಾಕಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜು (ಕಲ್ಲು ಕಟ್ಟಡ) ಆವರಣದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಆರ್. ರಾಮಚಂದ್ರ ಪರ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯದ ಕಾಳಿಕಾಂಬ ಸಮುದಾಯ ಭವನದಲ್ಲಿ ಅವರಿಗೆ ಟಿಕೆಟ್ ಕೊಡದಂತೆ ಕುರ್ಚಿಗಳನ್ನು ಎತ್ತೆಸೆದು ಗಲಾಟೆ ಮಾಡಿದ್ದರೂ, ಅದನ್ನು ಲೆಕ್ಕಿಸದೆ ಶ್ರೀನಿವಾಸ್ ಅವರಿಗೇ ಟಿಕೆಟ್ ದೊರಕಿಸಿದ್ದೆ. ಆಗ ಹಣದ ಮಾತಿರಲಿಲ್ಲ. ಈಗ ನನ್ನ ವಿರುದ್ಧ ಹಣ ಪಡೆದ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

Give me the Clarification on Paid amount for ticket: HD Kumaraswamy challenges M.Srinivas

ಮೊದಲ ಪಟ್ಟಿಯಲ್ಲೇ ಶಾಸಕರಿಗೆ ಅಪಮಾನ ಮಾಡಬಾರದೆಂಬ ಕಾರಣಕ್ಕೆ ಅವರ ಹೆಸರನ್ನು ಘೋಷಿಸಿದ್ದೆ. ಅವರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬೇರೊಬ್ಬ ಅಭ್ಯರ್ಥಿ ಹೆಸರನ್ನು ಕೊಡುವಂತೆ ಸಾಕಷ್ಟು ಬಾರಿ ಕೇಳಿದ್ದೆ. ಕೊನೇ ಗಳಿಗೆಯಲ್ಲಿ ಕೊಟ್ಟರೆ ನನಗೆ ಕೊಡಿ ಇಲ್ಲವೇ ನನ್ನ ಅಳಿಯನಿಗೆ ಕೊಡಿ ಎಂದು ಕೇಳಿದರು. ಇದು ಸರಿಯಲ್ಲ, ಸಾಮಾನ್ಯ ಕಾರ್ಯಕರ್ತನಿಗೆ ಕೊಡಬೇಕು ಎಂಬ ಉದ್ದೇಶದಿಂದ ರಾಮಚಂದ್ರ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಶಂಕರಗೌಡರ ಮೊಮ್ಮಗ ಕೆ.ಎಸ್.ವಿಜಯಾನಂದ ಅವರಿಗೆ ಒಂದು ವರ್ಷದ ಹಿಂದೆಯೇ ನಾನು ತಾಕೀತು ಮಾಡಿದ್ದೇನೆಂದರೆ, ನೀನು ಜನರ ನಡುವೆ ಬೆಳೆದು ಬಾ, ಜನರ ಕಷ್ಟ ಸುಖಗಳಿಗೆ ಸ್ಪಂಧಿಸವ ಕೆಲಸ ಮಾಡುವಂತೆ ಸಲಹೆ ನೀಡಿದ್ದೆ. ನಿನ್ನ ಹೆಸರನ್ನೂ ಘೋಷಣೆ ಮಾಡುತ್ತೇನೆ ಅಂತಲೂ ಹೇಳಿದ್ದೆ.
ಆದರೆ, ಆತ ಶ್ರೀನಿವಾಸ್ ಅವರ ಮೂಲಕವೇ ಹೇಳಿಸುತ್ತೇನೆ ಘೋಷಣೆ ಮಾಡುವುದು ಬೇಡ ಎಂದು ತಡೆದ. ಜೊತೆಗೆ ಜನರ ಬಳಿ ಹೋಗದೆ, ಸಂಘಟನೆಯನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿದ್ದ. ಇದರಿಂದ ಆತನಿಗೆ ಟಿಕೆಟ್ ಕೊಡಲಿಲ್ಲ. ಇದು ನಮ್ಮ ತಪ್ಪಾ? ಎಂದು ಪ್ರಶ್ನಿಸಿದರು.

7 ಕ್ಷೇತ್ರಗಳ ಅಭ್ಯರ್ಥಿಗಳ ವಿವರ

ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದು ಸಕ್ಕರೆ ನಾಡಿನಲ್ಲಿ ಅಭ್ಯರ್ಥಿಗಳ ಪ್ರಚಾರದ ಭರಾಟೆಯೂ ಜೋರಾಗಿದೆ. ಹಾಗಾದರೆ 7 ಕ್ಷೇತ್ರಗಳಿಂದ ಕಣದಲ್ಲಿರುವ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ವಿವರವನ್ನು ಇಲ್ಲಿ ತಿಳಿಯಿರಿ.

ಮಂಡ್ಯ ವಿಧಾನಸಭಾ ಕ್ಷೇತ್ರ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪಿ.ರವಿಕುಮಾರ್, ಬಿಜೆಪಿಯಿಂದ ಅಶೋಕ್ ಜಯರಾಂ, ಜೆಡಿಎಸ್‌ನಿಂದ ಮನ್‌ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ ಹಾಗೂ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಶಂಕರಗೌಡರ ಮೊಮ್ಮಗ ಕೆ.ಎಸ್. ವಿಜಯಾನಂದ, ಸರ್ವೋದಯ ಕರ್ನಾಟಕ ಪಕ್ಷದಿಂದ ಎಸ್.ಸಿ. ಮಧುಸೂಧನ್ ಸೇರಿದಂತೆ ಹಲವರು ಕಣದಲ್ಲಿದ್ದಾರೆ.

ಮದ್ದೂರು ವಿಧಾನಸಭಾ ಕ್ಷೇತ್ರ

ಹಾಗೆಯೇ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲೂ ಅಭ್ಯರ್ಥಿಗಳ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಕಾಂಗ್ರೆಸ್‌ನಿಂದ ಕೆ.ಎಸ್. ಉದಯ್, ಬಿಜೆಪಿಯಿಂದ ಮನ್‌ಮುಲ್ ನಿರ್ದೇಶಕ ಎಸ್.ಪಿ. ಸ್ವಾಮಿ, ಜೆಡಿಎಸ್‌ನಿಂದ ಹಾಲಿ ಶಾಸಕ ಡಿ.ಸಿ. ತಮ್ಮಣ್ಣ ಸೇರಿದಂತೆ ಹಲವರು ಅಖಾಡದಲ್ಲಿದ್ದು, ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.

ಮಳವಳ್ಳಿ ವಿಧಾನಸಭಾ ಕ್ಷೇತ್ರ

ಇನ್ನು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಮಳವಳ್ಳಿಯಲ್ಲಿ ಕಾಂಗ್ರೆಸ್‌ನಿಂದ ಪಿ.ಎಂ. ನರೇಂದ್ರಸ್ವಾಮಿ, ಬಿಜೆಪಿಯಿಂದ ಮುನಿರಾಜು, ಜೆಡಿಎಸ್‌ನಿಂದ ಹಾಲಿ ಶಾಸಕ ಡಾ. ಕೆ. ಅನ್ನದಾನಿ ಸ್ಪರ್ಧಾ ಕಣದಲ್ಲಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ಹಾಗೆಯೇ ಪ್ರತಿಷ್ಠಿತ ಕ್ಷೇತ್ರವಾಗಿರುವ ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಬಿಜೆಪಿಯಿಂದ ಯುವ ನಾಯಕ ಎಸ್. ಸಚ್ಚಿದಾನಂದ, ಜೆಡಿಎಸ್‌ನಿಂದ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಇತರರು ಕಣದಲ್ಲಿದ್ದು, ಅಬ್ಬರ ಪ್ರಚಾರದಲ್ಲಿ ತೊಡಗಿದ್ದಾರೆ.

ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ

ಜಿಲ್ಲೆಯಲ್ಲೇ ಕಮಲವನ್ನು ಅರಳಿಸಿದ್ದ ಕೆ.ಆರ್. ಪೇಟೆ ಕ್ಷೇತ್ರವೂ ಪ್ರತಿಷ್ಠೆಯ ಕಣವಾಗಿದೆ. ಹೇಳಿ ಕೇಳಿ ಜೆಡಿಎಸ್ ಭದ್ರಕೋಟೆಯಂತಿದ್ದ ಕ್ಷೇತ್ರದಲ್ಲಿ ಕಳೆದ ಉಪ ಚುನಾವಣೆಯಲ್ಲಿ ಕೆ.ಸಿ. ನಾರಾಯಣಗೌಡ ಅವರ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಈ ಬಾರಿ ಮತ್ತೊಮ್ಮೆ ಆಯ್ಕೆ ಬಯಸಿ ಕಣದಲ್ಲಿದ್ದರೆ, ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬಿ.ಎಲ್. ದೇವರಾಜು ಕೈ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ನಿಂದ ಮನ್‌ಮುಲ್ ನಿರ್ದೇಶಕ ಎಚ್.ಟಿ. ಮಂಜು ಅವರು ಸ್ಪರ್ಧಿಸಿದ್ದಾರೆ. ಇವರೊಂದಿಗೆ ಹಲವರು ಸ್ಪರ್ಧಾ ಕಣದಲ್ಲಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ.

ನಾಗಮಂಗಲ ವಿಧಾನಸಭಾ ಕ್ಷೇತ್ರ

ಜಿಲ್ಲೆಯ ರಾಜಕೀಯದಲ್ಲೇ ಛಾಪು ಮೂಡಿಸಿದ್ದ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಎಐಸಿಸಿ ಸದಸ್ಯ ಎನ್.ಚಲುವರಾಯಸ್ವಾಮಿ ಅವರು ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡರ ಪತ್ನಿ ಸುಧಾ ಶಿವರಾಮೇಗೌಡ ಅಖಾಡದಲ್ಲಿದ್ದಾರೆ. ಇನ್ನು ಜೆಡಿಎಸ್‌ನಿಂದ ಹಾಲಿ ಶಾಸಕ ಕೆ. ಸುರೇಶ್‌ಗೌಡ ಮತ್ತೊಮ್ಮೆ ಆಯ್ಕೆ ಬಯಸಿ ಕಣದಲ್ಲಿದ್ದಾರೆ. ಇವರೊಂದಿಗೆ ಹಲವರು ಸ್ಪರ್ಧಾ ಕಣದಲ್ಲಿದ್ದು, ಪ್ರಚಾರದಲ್ಲಿ ತೊಡಗಿದ್ದಾರೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರ

ಐತಿಹಾಸಿಕ ಕ್ಷೇತ್ರವಾಗಿರುವ ಮೇಲುಕೋಟೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೂ, ಚಳವಳಿಗೆ ಹೆಸರಾದ ಕೆ.ಎಸ್. ಪುಟ್ಟಣ್ಣಯ್ಯ ಅವರ ಪುತ್ರ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಿದ್ದರೆ, ಬಿಜೆಪಿಯಿಂದ ಡಾ. ಇಂದ್ರೇಶ್ ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಿಂದ ಹಾಲಿ ಶಾಸಕ ಸಿ.ಎಸ್. ಪುಟ್ಟರಾಜು ಮತ್ತೊಮ್ಮೆ ಅದೃಷ್ಠ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಇವರೊಂದಿಗೆ ಹಲವರು ಕಣದಲ್ಲಿದ್ದು, ತೀವ್ರ ಪೈಪೋಟಿ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+