ಪುತ್ರನೊಂದಿಗೆ ಶೀಘ್ರವೇ ಕಾಂಗ್ರೆಸ್ ಸೇರಲಿದ್ದಾರೆ ಮಂಡ್ಯದ ಮಾಜಿ ಸಂಸದ
ಮಂಡ್ಯ, ಡಿಸೆಂಬರ್ 30: ಮಂಡ್ಯದ ಮಾಜಿ ಸಂಸದ, ಮಾಜಿ ಶಾಸಕ ಎಲ್. ಆರ್. ಶಿವರಾಮೇಗೌಡ ಕಾಂಗ್ರೆಸ್ ಸೇರಲಿದ್ದಾರೆ. ಜೆಡಿಎಸ್ ಪಕ್ಷದಲ್ಲಿದ್ದ ಅವರು ಬಳಿಕ ಬಿಜೆಪಿ ಸೇರಿದ್ದರು. ಆದರೆ ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಅವರು ಕಾಂಗ್ರೆಸ್ ನಾಯಕರ ಜೊತೆ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಅವರು ಪುತ್ರ ಎಲ್. ಎಸ್. ಚೇತನ್ ಗೌಡ ಜೊತೆ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ.
ಸೋಮವಾರ ಮಂಡ್ಯದಲ್ಲಿ ಮಾತನಾಡಿದ ಎಲ್. ಆರ್. ಶಿವರಾಮೇಗೌಡ, "ಈಗಾಗಲೇ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಶೀಘ್ರವೇ ನಾನು ಅಧಿಕೃತವಾಗಿ ಮಗನ ಜೊತೆ ಪಕ್ಷಕ್ಕೆ ಸೇರ್ಪಡೆ ಆಗುತ್ತೇನೆ" ಎಂದು ಹೇಳಿದರು.

ಎಲ್. ಆರ್. ಶಿವರಾಮೇಗೌಡ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಜೊತೆ ವೇದಿಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನವೆಂಬರ್‌ನಲ್ಲಿ ನಡೆದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ ಪರ ಪ್ರಚಾರದಲ್ಲಿ ಅವರು ಪಾಲ್ಗೊಂಡಿದ್ದರು. ಹಾಸನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿಯೂ ಭಾಗವಹಿಸಿದ್ದರು.
ಕಾಂಗ್ರೆಸ್ ಸೇರಲು ಸಲಹೆ: ಸೋಮವಾರ ಮಾತನಾಡಿದ ಎಲ್. ಆರ್. ಶಿವರಾಮೇಗೌಡ, "ಏನು ನಾನು ಹೆಚ್ಚು ಕಡಿಮೆ ಕಾಂಗ್ರೆಸ್‌ನಲ್ಲಿದ್ದೇನೆ ಎಂದು ತಿಳಿದುಕೊಳ್ಳಿ. ಅಧಿಕೃತವಾಗಿ ಸೇರ್ಪಡೆಗೊಳ್ಳಬೇಕು" ಎಂದು ಹೇಳಿದರು.
"ಉಪ ಚುನಾವಣೆ ಸಮಯದಲ್ಲಿ ಚನ್ನಪಟ್ಟಣದಲ್ಲಿ ಸೇರಿಕೊಳ್ಳಿ ಎಂದರು. ನಾನೇ ಬೇಡ ಎಂದೆ. ಹಾಸನದಲ್ಲಿ ಸೇರಿಕೊಳ್ಳಿ ಎಂದರು ಆಗಲಿಲ್ಲ. ಬಳಿಕ ಬೆಳವಾವಿ ಅಧಿವೇಶನ, ಮಹಾಧಿವೇಶನ ಎಲ್ಲಾ ಇತ್ತು" ಎಂದು ತಿಳಿಸಿದರು.
"ಈಗ ಎಲ್ಲಾ ಮುಗಿದಿದೆ. ಆದರೆ ಈಗ ಸೇರಲು ಧನುರ್ಮಾಸ ಈಗೇಕೆ ಸೇರುತ್ತೀರಿ ಎನ್ನುತ್ತಿದ್ದಾರೆ. ಅದಕ್ಕೆ ಧನುರ್ಮಾಸ ಮುಗಿದ ಬಳಿಕ ಸೇರಿಕೊಳ್ಳುತ್ತೇನೆ" ಎಂದು ಎಲ್. ಆರ್. ಶಿವರಾಮೇಗೌಡ ಸ್ಪಷ್ಟಪಡಿಸಿದರು.
"ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ನಾನು ನನ್ನ ರಾಜಕೀಯ ಪ್ರಾರಂಭ ಮಾಡಿದ್ದು ಕಾಂಗ್ರೆಸ್ ಪಕ್ಷದಿಂದ. ಬೇಕಾದಷ್ಟು ಕಾರಣಗಳು, ವಿಧಿ ಇಲ್ಲದೇ ಬೇರೆ ಬೇರೆ ಪಕ್ಷಗಳಿಗೆ ಹೋಗಬೇಕಾಯಿತು" ಎಂದರು.
"ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಕೆಲವು ಅನಿವಾರ್ಯ ಸಂದರ್ಭದವನ್ನು ಹೇಳಲು ಆಗುವುದಿಲ್ಲ. ಈಗ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತೇನೆ. ಜೀವಿತದ ಅವಧಿ ತನಕ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಏನು ಸೇವೆ ಮಾಡುವುದಕ್ಕೆ ಆಗುತ್ತದೆಯೋ ಅದನ್ನು ಮಾಡುತ್ತೇನೆ" ಎಂದು ತಿಳಿಸಿದರು.
"ನಾವೆಲ್ಲ ಬೆಳೆದಿದ್ದು ಕಾಂಗ್ರೆಸ್ ಪಕ್ಷದಿಂದ ನಾನು ಎರಡು ಬಾರಿ ಪಕ್ಷೇತರನಾಗಿ ಗೆದ್ದಾಗಲೂ ಕಾಂಗ್ರೆಸ್ ಜೊತೆಗೆ ಇದ್ದೆ. ಈ ಬಾರಿ ನಾನು ಮಗನ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ" ಎಂದು ಎಲ್. ಆರ್. ಶಿವರಾಮೇಗೌಡ ಹೇಳಿದರು.
ಕೆಲವು ದಿನಗಳ ಹಿಂದೆ ಎಲ್. ಆರ್. ಶಿವರಾಮೇಗೌಡ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದರು. ಬಳಿಕ ಮಾತನಾಡಿದ್ದ ಅವರು, "ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಮುಂದೆ ಯಾವ ಪಕ್ಷಕ್ಕೆ ಸೇರುತ್ತೇನೆ ಎಂದು ಹೇಳುತ್ತೇನೆ. ಬಿಜೆಪಿಗೆ ರಾಜೀನಾಮೆ ನೀಡುವಾಗ ನಾನು ಪುತ್ರ ಇಬ್ಬರೂ ಒಟ್ಟಿಗೆ ರಾಜೀನಾಮೆ ನೀಡಿದ್ದೇವೆ. ಇಬ್ಬರೂ ಒಟ್ಟಿಗೆ ಬೇರೆ ಪಕ್ಷ ಸೇರುತ್ತೇವೆ" ಎಂದು ಹೇಳಿದ್ದರು.
2018ರ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಎಲ್. ಆರ್. ಶಿವರಾಮೇಗೌಡ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ ಜಯಗಳಿಸಿದ್ದರು. ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರನ್ನು ಉಪ ಚುನಾವಣೆ ಅಭ್ಯರ್ಥಿ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಘೋಷಣೆ ಮಾಡಿದ್ದರು.
ಎಲ್. ಆರ್. ಶಿವರಾಮೇಗೌಡ 1989, 1994ರಲ್ಲಿ ನಾಗಮಂಗಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 144,875 ಮತಗಳನ್ನು ಪಡೆದು ಜೆಡಿಎಸ್‌ನ ಚಲುವರಾಯಸ್ವಾಮಿ ವಿರುದ್ಧ ಸೋಲು ಕಂಡಿದ್ದರು.












Click it and Unblock the Notifications