ಪ್ರಜಾಧ್ವನಿ ಯಾತ್ರೆಯಲ್ಲಿ ಹಣ ಎಸೆದ ಆರೋಪ: ಡಿಕೆ ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು, ಮಾರ್ಚ್. 30: ಮಂಗಳವಾರ ಮಂಡ್ಯ ಜಿಲ್ಲೆಯಲ್ಲಿ ಪ್ರಚಾರದ ವೇಳೆ ಜನರ ಮೇಲೆ ಹಣ ಎಸೆದ ಆರೋಪದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಯಾತ್ರೆಯಲ್ಲಿ ಡಿಕೆ ಶಿವಕುಮಾರ್ ನಗದು ಹಂಚಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಡ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗೋಪಾಲಕೃಷ್ಣ ಅವರು ಎಫ್‌ಐಆರ್ ದಾಖಲಾಗಿರುವ ಬೆಳವಣಿಗೆಗಳನ್ನು ಖಚಿತಪಡಿಸಿದ್ದು, ಸ್ಥಳೀಯ ಚುನಾವಣಾಧಿಕಾರಿಯೊಬ್ಬರು ಡಿಕೆ ಶಿವಕುಮಾರ್ ವಿರುದ್ಧ ಬುಧವಾರ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 155 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಚಾರದ ವೇಳೆ ನಗದು ಎಸೆದಿದ್ದಾರೆ ಎಂಬ ಮಾಧ್ಯಮ ವರದಿಗಳ ಆಧಾರದ ಮೇಲೆ ಲಿಖಿತ ದೂರು ದಾಖಲಿಸಲಾಗಿದೆ. ದೂರಿನ ತನಿಖೆಗೆ ನಾಳೆ ತನಿಖಾಧಿಕಾರಿಯನ್ನು ನೇಮಿಸಲಾಗುವುದು ಎಂದು ಅಧಿಕಾರಿ ಹೇಳಿದರು. ಮಂಡ್ಯ ತಾಲೂಕಿನ ಬೇವಿನಹಳ್ಳಿಯಲ್ಲಿ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಶಿವಕುಮಾರ್ ಪ್ರಚಾರ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇದೇ ವೇಳೆ ಅವರು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜಾನಪದ ಕಲಾವಿದರಿಗೆ ಮಾತ್ರ ಹಣ ನೀಡುತ್ತಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ. ಪ್ರಜಾಧ್ವನಿ ಯಾತ್ರೆ ಬೇವಿನಹಳ್ಳಿ ತಲುಪಿದಾಗ ಕೆಲವು ಸಂಗೀತ ತಂಡದ ಸದಸ್ಯರು ವಾಹನದ ಬಳಿ ಬಂದು ಹಣ ಕೇಳಿದರು. ಹೀಗಾಗಿ ಹಣ ನೀಡಿದ್ದಾರೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಡಿಕೆ ಶಿವಕುಮಾರ್ ತಮ್ಮ ಜೇಬಿನಿಂದ ಹಣವನ್ನು ಅವರಿಗೆ ನೀಡಲು ಪ್ರಯತ್ನಿಸಿದರು, ಆದರೆ ಅವರು ವಾಹನದ ಮೇಲೆ ನಿಂತಿದ್ದರಿಂದ ಅವರನ್ನು ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಕಲಾವಿದರ ಕಡೆಗೆ ನೋಟುಗಳನ್ನು ಎಸೆದಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ನಿನ್ನೆ ಎಎನ್‌ಐ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಬಸ್ ಮೇಲೆ ನಿಂತಿರುವ ಕೆಪಿಸಿಸಿ ಅಧ್ಯಕ್ಷ ತಮ್ಮ ಜೇಬಿನಿಂದ ಹಣ ತೆಗೆದು ಮೆರವಣಿಗೆ ನೋಡುತ್ತಿದ್ದ ಜನರ ಮೇಲೆ ಎಸೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು.

ಇನ್ನು, ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಡಿಕೆ ಶಿವಕುಮಾರ್, " ಕಲಾವಿದರಿಗೆ ಹಣ ನೀಡುವುದು ಸಾಂಸ್ಕೃತಿಕ ಪದ್ಧತಿ. ಅದನ್ನು ಮಾಡಿದ್ದೇನೆ ಅಷ್ಟೇ ಅದನ್ನು ಚುನಾವಣೆ ಸಮಯದಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಹೆಚ್ಚೇನೂ ಅಲ್ಲ" ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ ಡಿಕೆ ಶಿವಕುಮಾರ್ ಹಾಗೂ ಶ್ರೀರಂಗಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ ಸಿ ಎನ್.ರವಿಕುಮಾರ್ ನೇತೃತ್ವದ ನಿಯೋಗ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿತ್ತು.
ಪ್ರಬಲ ಒಕ್ಕಲಿಗ ಸಮುದಾಯದ ಭದ್ರಕೋಟೆ ಎಂದೇ ಹೇಳಲಾಗುವ ಮಂಡ್ಯದಲ್ಲಿ ಡಿಕೆ ಶಿವಕುಮಾರ್ ಅವರು ವ್ಯಾಪಕ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವ ಡಿಕೆ ಶಿವಕುಮಾರ್, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂದು ಪಟ್ಟು ಹಿಡಿದಂತೆ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರೀ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದ ಪ್ರಜಾಧ್ವನಿ ಕಾರ್ಯಕ್ರಮ ರೋಡ್ ಶೋ ನಡೆಸಿ ಮಾತನಾಡಿರುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.











Click it and Unblock the Notifications