ಮಂಡ್ಯದಲ್ಲಿ ಹೆಚ್ಚಿದ ಕಾವೇರಿ ಕಾವು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರೈತರ ಬಂಧನ
ಮಂಡ್ಯ, ಆಗಸ್ಟ್ 22: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ (ಮೂಲ ಸಂಘಟನೆ) ಕಾರ್ಯಕರ್ತರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಗೆ ನುಗ್ಗಲು ಯತ್ನಿಸಿದ್ದಾರೆ.
ಮಂಡ್ಯ ಜಿಲ್ಲೆಯ ಇಂಡುವಾಳು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ರೈತರನ್ನು ಬಂಧಿಸಿದ್ದಾರೆ. ಸಂಘಟನೆಯ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮಂಜೇಶ್‌ಗೌಡ, ಸೊ.ಶಿ. ಪ್ರಕಾಶ್, ಬನ್ನೂರು ನಾರಾಯಣ, ಸಿದ್ದೇಗೌಡ, ಇ.ಬಸವರಾಜ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಮೇಶ್‌ಗೌಡ ಸೇರಿ ನೂರಾರು ರೈತರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ಇಂಡುವಾಳು ಗ್ರಾಮದ ಶಾಲಾ ಆವರಣದಿಂದ ಮೆರವಣಿಗೆ ಹೊರಟು ಸರ್ವಿಸ್ ರಸ್ತೆಯಲ್ಲಿ ಸಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲೆಯ ಶಾಸಕರು ಮತ್ತು ಸಂಸದರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಅರ್ಧ ತಾಸಿಗೂ ಹೆಚ್ಚು ಸಮಯ ವಾಹನ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಈ ವೇಳೆ ರೈತರು ಎಕ್ಸ್‌ಪ್ರೆಸ್ ಹೆದ್ದಾರಿಗೆ ನುಗ್ಗಲು ಮುಂದಾದಾಗ ಪೊಲೀಸರು ತಡೆದಿದ್ದು, ಪ್ರತಿಭಟನಾನಿರತ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಪರಸ್ಪರ ತಳ್ಳಾಟ-ನೂಕಾಟ ನಡೆದಿದೆ. ಘಟನೆಯಲ್ಲಿ ರೈತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪೊಲೀಸರ ವಿರುದ್ಧವೂ ರೈತರು ಆಕ್ರೋಶ ಹೊರಹಾಕಿದರು.
ಸಂಸದೆ ಸುಮಲತಾ ವಿರುದ್ಧ ಆಕ್ರೋಶ
ರೈತರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಬೇಕಾದ ಸಂಸದೆ ಸುಮಲತಾ ಹಾಗೂ ಬಿಜೆಪಿಯ ಸಂಸದರು ಬೀದಿಗಿಳಿದು ಹೋರಾಟ ಮಾಡುವ ಮೂಲಕ ರೈತರು ಮತ್ತು ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದವರು ಬೀದಿಗಿಳಿದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ನೀರನ್ನೆಲ್ಲ ತಮಿಳುನಾಡಿಗೆ ಹರಿಸುತ್ತಿದೆ. ಇದೀಗ ಸರ್ವಪಕ್ಷ ಸಭೆ ಕರೆದು ರೈತರ ಎದುರು ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ರೈತರು ಕಿಡಿಕಾರಿದರು.
ಕಾವೇರಿ ಕಣಿವೆ ಜಲಾಶಯಗಳಿಂದ ನೀರು ಬಿಡುವ ಮುನ್ನ ಎಚ್ಚೆತ್ತುಕೊಂಡು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾಗದೆ, ಏಕಾಏಕಿ ನೀರು ಬಿಟ್ಟು ಜಲಾಶಯಗಳನ್ನು ಬರಿದು ಮಾಡಿದೆ. ಸರ್ಕಾರ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುವವಂತೆ ಮಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಪ್ರತಿಭಟನೆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು.












Click it and Unblock the Notifications