HD Kumaraswamy: ಕುಟುಂಬ ರಾಜಕಾರಣ, ಹೊರಗಿನವರೆಂಬ ಅಪಸ್ವರ: ಮಂಡ್ಯದಲ್ಲಿ ಕುಮಾರಸ್ವಾಮಿಗೆ ಸುಲಭವಲ್ಲ ಗೆಲುವಿನ ಹಾದಿ!
ಮಂಡ್ಯ, ಏಪ್ರಿಲ್. 10: ಮಂಡ್ಯ ರಾಜಕಾರಣ ಯಾವಾಗಲೂ ಕೂಡ ಕುತೂಹಲದ ವಿಷಯವಾಗಿಯೇ ಇದೆ. ಅದು ಲೋಕಸಭಾ ಚುನಾವಣೆ ಆಗಿರಲಿ ವಿಧಾನಸಭಾ ಚುನಾವಣೆಯಾಗಿರಲಿ. ಹೆಚ್ಚು ಸುದ್ದಿಯಾಗುವುದು ಮಾತ್ರ ಮಂಡ್ಯ ಕ್ಷೇತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಬಾರಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ಪರ್ಧೆಗೆ ನಿಂತಿರುವುದು ಮಂಡ್ಯವನ್ನು ಹೈವೋಲ್ಟೇಜ್ ಕ್ಷೇತ್ರವನ್ನಾಗಿಸಿದೆ.
ಮಂಡ್ಯ ನಮ್ಮದು ಎಂದು ಒಮ್ಮೆ ಕಾಂಗ್ರೆಸ್, ಒಮ್ಮೆ ಜೆಡಿಎಸ್ ಹೇಳಿಕೊಳ್ಳುತ್ತಲೆ ಇವೆ. ಸಕ್ಕರೆ ನಾಡಿನ ಮೇಲೆ ಹಿಡಿತ ಸಾಧಿಸಲು ಎರಡು ಪಕ್ಷಗಳು ಶತಾಯಗತಾಯ ಪ್ರಯತ್ನ ನಡೆಯುತ್ತಲೇ ಇದೆ. ಅಂಕಿ- ಅಂಶಗಳು, ಮತದಾನದ ಪ್ರಮಾಣ ಗಮನಿಸಿದರೇ ಇದು ಕಾಂಗ್ರೆಸ್ ಕ್ಷೇತ್ರ ಎನ್ನುವ ಅಂದಾಜು ಎಂತಹವರಿಗೂ ತಿಳಿಯುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಎಚ್ ಡಿ ಕುಮಾರಸ್ವಾಮಿ ಸ್ಪರ್ಧೆಯಿಂದ ಕ್ಷೇತ್ರ ಹೈಲೈಟ್ ಆಗುತ್ತಿದ್ದರೂ ಕೂಡ ಅವರ ಗೆಲುವಿನ ಹಾದಿ ಅಷ್ಟು ಸುಲಭದಲ್ಲ.

'ಮಂಡ್ಯದ ಗಂಡು' ಆಗುತ್ತಾರಾ ಎಚ್‌ಡಿ ಕುಮಾರಸ್ವಾಮಿ!?
ಹೌದು... ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಅದಕ್ಕೆ ಕಾರಣ ಕೂಡ ಹಲವು. ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಬೆಂಬಲ, ಗೌಡರ ಕುಟುಂಬ ರಾಜರಾರಣದ ವಿರುದ್ಧ ಇರುವ ಅಸಮಾಧಾನ ಮತ್ತು ಎಚ್ ಡಿ ಕುಮಾರಸ್ವಾಮಿ ಹೊರಗಿನವರು ಎಂಬ ಭಾವನೆಗಳು ಕೂಡ ಎಚ್‌ಡಿಕೆ ಸೋಲಿಗೆ ಕಾರಣವಾಗಬಹುದು.
ಮಂಡ್ಯ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಕೂಡ ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದರಿಂದ ಕ್ಷೇತ್ರದಲ್ಲಿ ಒಂದು ಕಡೆ ಮಾತ್ರ ಜೆಡಿಎಸ್ ಶಾಸಕರಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಿಡಿತ ಹೆಚ್ಚಾಗಿದೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುಗೆ ಮತ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಎಚ್ ಡಿ ಕುಮಾರಸ್ವಾಮಿಗೆ ತಿರುಗುಬಾಣವಾಗಲಿದೆ.
ಕಾಂಗ್ರೆಸ್ ಬಳಿ ಕುಟುಂಬ ರಾಜಕಾರಣ ಎಂಬ ಅಸ್ತ್ರ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಫೈನಲ್ ಆಗಿ ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳಿದ್ದಾರೆ. ಇದರಲ್ಲಿ ಎಚ್‌ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪ್ರಮುಖರು. ಗೆದ್ದೆ ಗೆಲ್ಲುವೆ ಎನ್ನುವ ವಿಶ್ವಾಸದಲ್ಲಿ ಇಬ್ಬರು ಇದ್ದಾರೆ. ಆದರೆ, ಗೆಲುವನ್ನು ನಿರ್ಧರಿಸುವವರು ಮಾತ್ರ ಮತದಾರರು.

ಎಚ್ ಡಿ ಕುಮಾರಸ್ವಾಮಿ ಅವರನ್ನು ಹೆಚ್ಚು ಟೀಕೆಗೆ ಗುರಿ ಮಾಡುವುದು ಅವರ ಕುಟುಂಬ ರಾಜಕಾರಣ. ತಂದೆ ಮಕ್ಕಳ ಪಕ್ಷ ಎಂದೇ ಕರೆಸಿಕೊಳ್ಳುವ ಜೆಡಿಎಸ್‌ನಿಂದ ಪ್ರಮುಖ ಅಭ್ಯರ್ಥಿ ಕಣಕ್ಕೆ ಇಳಿಯಬೇಕು ಎಂದರೆ ಅದು ದೊಡ್ಡಗೌಡರ ಮಕ್ಕಳು ಅಥವಾ ಮೊಮ್ಮಕ್ಕಳು ಕಣದಲ್ಲಿ ಇರುತ್ತಾರೆ ಎಂಬ ಟೀಕೆಯೊಂದಿದೆ. ಇದು ಕುಮಾರಸ್ವಾಮಿಗೆ ಚುನಾವಣೆಯಲ್ಲಿ ದೊಡ್ಡ ಹೊಡೆತ ನೀಡಲಿದೆ.
ಹೊರಗಿಂದ ಬಂದವರಾ ಎಚ್‌ಡಿ ಕುಮಾರಸ್ವಾಮಿ?
ಮಂಡ್ಯ ಚುನಾವಣೆಯಲ್ಲಿ ಕೇಳಿ ಬರುತ್ತಿರುವ ಮತ್ತೊಂದು ವಿಷಯ ಎಚ್ ಡಿ ಕುಮಾರಸ್ವಾಮಿ ಹೊರಗಿನವರು ಎಂಬುದು. ಹೌದು... ಎಚ್ ಡಿ ಕುಮಾರಸ್ವಾಮಿ ರಾಮನಗರ ಜಿಲ್ಲೆಗೆ ಸೇರಿದವರು. ರಾಮನಗರ, ಚನ್ನಪಟ್ಟಣಗಳಲ್ಲೇ ಇರುವ ಅವರು ಈಗ ಮಂಡ್ಯದ ಕಡೆ ಮುಖ ಮಾಡಿದ್ದಾರೆ. ಚುನಾವಣೆ ಬಂದಾಗ ಕ್ಷೇತ್ರಗಳನ್ನು ಮನಬಂದಂತೆ ಬದಲಿಸುತ್ತಾರೆ ಎಂಬ ಆರೋಪ ಕೂಡ ಅವರ ಮೇಲಿದೆ.
ಮಗನಿಗಾಗಿ ಕ್ಷೇತ್ರ ಬಿಟ್ಟು ಕೊಟ್ಟು ಬಳಿಕ ತಮ್ಮ ಚನ್ನಪಟ್ಟಣ ಕ್ಷೇತ್ರವನ್ನೂ ಬಿಟ್ಟು ಮಂಡ್ಯಗೆ ಬಂದಿದ್ದಾರೆ ಎಂಬ ಆರೋಪ ಎಚ್‌ಡಿಕೆ ಮೇಲಿದೆ. ಜೊತೆಗೆ ಕಳೆದ ಬಾರಿ ಅಷ್ಟು ದೊಡ್ಡ ವಿರೋಧ ವ್ಯಕ್ತಪಡಿಸಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರನ್ನು ಓಲೈಸಿಕೊಳ್ಳಲು ಮಾಡುತ್ತಿರುವ ಓಲೈಕೆ ರಾಜಕಾರಣ ಕೂಡ ಅವರ ವಿರುದ್ಧ ಮತ ಚಲಾಯಿಸುವಂತೆ ಮಾಡಲಿದೆ.
ಇತ್ತೀಚೆಗೆ ಜಾತಿ ಲೆಕ್ಕಾಚಾರ ಸಮೀಕ್ಷೆಯೊಂದು ಹೊರಬಂದಿದ್ದು, ಜಾತಿವಾರು ಸಮೀಕ್ಷೆ ಮಾಡಿದರೆ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸೋಲು ಎಂಬುದನ್ನು ಬಹಿರಂಗಪಡಿಸಿದೆ. ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಬರೋಬ್ಬರಿ 36,503 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದಿದೆ.












Click it and Unblock the Notifications