Mandya: ಹೊರಗಿನ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ನಾವೇ ಸೋಲಿಸ್ತೇವೆ; ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಹೊರಗಿನಿಂದ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನೇ ಪಡೆಯದ ಬಂಡವಾಳಶಾಹಿಯನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಮಾಡುತ್ತಿರುವುದರಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ಡಾ. ಎಚ್.ಎನ್. ರವೀಂದ್ರ ತಿಳಿಸಿದರು.
ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪತ್ರಕರ್ತರೊಂದಿಗೆ 'ದುಃಖ-ದುಮ್ಮಾನ' ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಹಲವು ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಚರ್ಚೆ ಮಾಡದೆ ಏಕಪಕ್ಷೀಯವಾಗಿ ಅಭ್ಯರ್ಥಿ ಆಯ್ಕೆ ಮಾಡಲು ಮುಂದಾಗಿದ್ದು, ಇದರಿಂದ ಪಕ್ಷದ ಹುದ್ದೆಗೆ ರಾಜೀನಾಮೆಗೆ ನೀಡಿದ್ದೇನೆ ಎಂದರು.
ದುಡ್ಡಿದ್ದರೆ ಮಾತ್ರ ಟಿಕೆಟ್!
ಜಿಲ್ಲೆಯಲ್ಲಿ ಸ್ಥಳೀಯ ನಾಯಕರು ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಹೊಂದಿದ್ದಾರೆ, ಆದರೂ ಸಹ ಹೊರಗಿನವರಿಗೆ ಮನ್ನಣೆ ನೀಡಲಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಹಣವೇ ಮಾನದಂಡವೇ? ಜಿಲ್ಲೆಯ ಸಾಮಾನ್ಯ ಕುಟುಂಬ ವರ್ಗದವರು ಪ್ರತಿ ವರ್ಷ ದೇವರ ಸೇವೆ ಮಾಡಿ ನೂರಾರು ಜನಕ್ಕೆ ಊಟ ಹಾಕುತ್ತಾರೆ. ಆದರೆ ಕಾಂಗ್ರೆಸ್ ನಾಯಕರು 'ಅನ್ನ ಹಾಕುವ ಜನರನ್ನು ದುಡ್ಡಿನಲ್ಲಿ ಅಳೆಯಲು ಮುಂದಾಗಿದ್ದಾರೆ' ದುಡ್ಡು ಕೊಡದಿದ್ದರೆ ಜಿಲ್ಲೆಯ ಜನತೆ ಮತ ಹಾಕಲ್ಲ ಎಂದು ಜಿಲ್ಲೆಯ ಜನರನ್ನು ಅವಮಾನಿಸಲು ಮುಂದಾಗಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಜೆಡಿಎಸ್‌ನ ಏಳು ಶಾಸಕರು, ವಿಧಾನ ಪರಿಷತ್‌ನ ಮೂವರು ಸದಸ್ಯರು, ಅಷ್ಟೇ ಏಕೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಆದರೆ ಜಿಲ್ಲೆಯ ಜನತೆ ತಿರಸ್ಕಾರ ಮಾಡಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ಶಾಸಕರು ಲೋಕಸಭಾ ಕ್ಷೇತ್ರದ ಏಳು ಕ್ಷೇತ್ರದಲ್ಲಿ ಇದ್ದಾರೆ ಎಂದು ಬೀಗುತ್ತಿರುವ ನಾಯಕರು ಇದರಿಂದ ಪಾಠ ಕಲಿಯಬೇಕು ಎಂದರು.
ಹಣ ಇದ್ದವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಎಂಬ ಮಾನದಂಡ ಸರಿಯಲ್ಲ. ಲೋಕಸಭೆ ಚುನಾವಣೆಯಲ್ಲಿ ಹಣ ಇದ್ದವರಿಗೆ ಮನ್ನಣೆ ನೀಡಿದರೆ ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೂ ಹೊರಗಿನಿಂದಲೇ ಹಣ ಇರುವ ಅಭ್ಯರ್ಥಿಯನ್ನು ಕರೆ ತರುವ ಚಾಳಿ ಮುಂದುವರೆಸಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಹುದ್ದೆಗೆ ಮಾತ್ರ ರಾಜೀನಾಮೆ ನೀಡಿದ್ದೇನೆ, ಪಕ್ಷ ತೊರೆಯುವ ಪ್ರಶ್ನೆ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಹೋರಾಟ ಮುಂದುವರೆಯಲಿದೆ. ಪಕ್ಷದಲ್ಲಿನ ಗ್ಯಾಂಗ್ರಿನ್‌ಗೆ ಅಂತ್ಯವಾಡಬೇಕಾಗಿದೆ, ಇದಕ್ಕಾಗಿ ತುರ್ತು ಆಪರೇಷನ್ ಅಗತ್ಯವಾಗಿದೆ, ಅದಕ್ಕಾಗಿ ಆಸ್ಪತ್ರೆ ಹುಡುಕಾಟದಲ್ಲಿದ್ದೇನೆ ಎಂದರು.
ಹಣ ಇದೆ ಎಂಬ ಮಾತ್ರಕ್ಕೆ ಹೊರಗಿನಿಂದ ಅಭ್ಯರ್ಥಿ ಕರೆತಂದು ನಿಲ್ಲಿಸಿದರೆ ಚುನಾವಣೆಯಲ್ಲಿ ಬೇರೆಯದೆ ತೀರ್ಮಾನ ಮಾಡುತ್ತೇವೆ. ನಮ್ಮನ್ನು ಮನವೊಲಿಸುವ ಕಾಲ ಮಿಂಚಿಹೋಗಿದೆ. ಹೊರಗಿನ ಅಭ್ಯರ್ಥಿಗಳಿಗೆ ಮನ್ನಣೆ ನೀಡುವುದಿಲ್ಲ, ಸ್ಥಳೀಯ ಅಭ್ಯರ್ಥಿ ಕಣಕ್ಕಿಳಿಸುವುದಾದರೆ ನಮ್ಮ ಮನಸ್ಸು ಬದಲಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾರೊಬ್ಬರಿಗೂ ಸದಾಭಿಪ್ರಾಯ ಇಲ್ಲ. ಎಲ್ಲ ಅಸಮಾಧಾನಿತರ ಪ್ರತಿನಿಧಿಯಾಗಿ ನಾನು ಧ್ವನಿ ಎತ್ತಿದ್ದೇನೆ. ರಾಜಕಾರಣ ಮುಂದಿಟ್ಟು ವ್ಯಕ್ತಿಗತ ದ್ವೇಷ ಮಾಡುವ ಮನಸ್ಥಿತಿ ನಮ್ಮದಲ್ಲ, ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು, ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದರೆ ನಾನು ನೇರವಾಗಿ ವಿರೋಧ ಮಾಡಲಿದ್ದೇನೆ, ಇದಕ್ಕಾಗಿ ಪರ್ಯಾಯ ಹಾದಿ ಹಿಡಿಯಲಿದ್ದೇನೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications