ಕಮಲದ ಧ್ವಜ ಹಾಕಿಕೊಂಡ ಕುಮಾರಸ್ವಾಮಿ: ಬದುಕಿದ್ದು ಸತ್ತಂತೆ ಎಂದ ಡಿ.ಕೆ ಶಿವಕುಮಾರ್
ಮಂಡ್ಯ, ಏಪ್ರಿಲ್ 01: ಈ ರಾಜಕಾರಣ ನೋಡಿದರೆ ನಾಚಿಗೆ ಆಗುತ್ತದೆ. ಮಂಡ್ಯದಲ್ಲಿ ಪುಟ್ಟರಾಜು ಅವರು ಟಿಕೆಟ್ಗಾಗಿ ಕಾದು ಕುಳಿತಿದ್ದ, ಇದೀಗ ಅವರಿಗೆ ಗೋವಿಂದ. ಕುಮಾರಸ್ವಾಮಿ ಕಮಲದ ಧ್ವಜ ಹಾಕಿಕೊಂಡಿದ್ದಾರೆ. ಬದುಕಿದ್ದು ಸತ್ತಂತೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಮೈತ್ರಿಯಂತೆ ಕುಮಾರಸ್ವಾಮಿ ಅವರಿಗೆ ಸಹಾಯ ಮಾಡಲು ಬಂದಿದ್ದೆ. ಆದರೆ ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಆಗಿಲ್ಲ. ಆದರೆ ಈಗ ತಮ್ಮ ಅಧಿಕಾರ ತೆಗೆದವರ ಜೊತೆಯೇ ಕುಮಾರಸ್ವಾಮಿ ಹೋಗಿದ್ದಾರೆ ಎಂದರು.

ಮಂಡ್ಯ ಜನತೆಯ ಸ್ವಾಭಿಮಾನವನ್ನು ಹೊತ್ತಿರುವ ನಾಮಪತ್ರ ಸಲ್ಲಿಕೆಗೆ ಜೊತೆಯಾಗಿದ್ದೇನೆ. ನೀವು ಮತಯಂತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒತ್ತುವ ಓಟಿನ ಸದ್ದು ಮೋದಿ ಅವರಿಗೆ ಕೇಳಿಸಬೇಕು. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಭಾವಿಸಿದ್ದೆ. ಆದರೆ ಈಗ ಜನರ ಪ್ರೀತಿ ವಿಶ್ವಾಸ ನೋಡಿದ ಮೇಲೆ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸ ಮೂಡಿದೆ ಎಂದರು.
ಮಂಡ್ಯದ ಜನ ಬುದ್ಧಿವಂತರು, ಪ್ರಜ್ಞಾವಂತರು. ಮಂಡ್ಯದವರು ತಮ್ಮ ಪಾರುಪತ್ಯವನ್ನು ಬೇರೆಯವರಿಗೆ ಬಿಟ್ಟು ಕೊಡುವುದಿಲ್ಲ. ಮಂಡ್ಯದ ಜನ ಸ್ವಾಭಿಮಾನಿಗಳು ಟೂರಿಂಗ್ ಟಾಕೀಸ್ ರಾಜಕಾರಣ ಮಾಡುವವರಿಗೆ ಬೆಲೆ ಕೊಡುವುದಿಲ್ಲ. ಇಲ್ಲಿ ಸಿನಿಮಾ ರಾಜಕಾರಣ ನಡೆಯುವುದಿಲ್ಲ. ಇಲ್ಲಿ ಏನೇ ಇದ್ದರೂ ಬದುಕಿನ ರಾಜಕಾರಣಕ್ಕೆ ಮಾತ್ರ ಬೆಲೆ ಎಂದರು.

ಈ ಕ್ಷೇತ್ರದ ಜನ ತಮ್ಮ ಮತವನ್ನು ಮಂಡ್ಯದವರಿಗೇ ನೀಡುತ್ತಾರೆ. ನಾಗಮಂಗಲದಲ್ಲಿ ಜನಿಸಿ ಬೆಂಗಳೂರಿನಲ್ಲಿ ದೊಡ್ಡ ಉದ್ಯಮಿಯಾಗಿ ಸಾವಿರಾರು ಜನಕ್ಕೆ ಉದ್ಯೋಗ ನೀಡಿರುವ ವೆಂಕಟರಮಣೇಗೌಡ ಅವರಿಗೆ ಮಂಡ್ಯದ ಜನ ಮತ ಹಾಕಲಿದ್ದಾರೆ. ಕಳೆದ ಬಾರಿ ಕುಮಾರಸ್ವಾಮಿ ಅವರ ಪುತ್ರನ ಪರವಾಗಿ ಇಲ್ಲಿ ಪ್ರಚಾರ ಮಾಡಿರುವ ಬಗ್ಗೆ ಮಾತನಾಡಿದ ಅವರು, ನಾನು ಕಳೆದ ಬಾರಿ ಆತ್ಮಸಾಕ್ಷಿಯಾಗಿ, ಪ್ರಾಮಾಣಿಕವಾಗಿ ಅವರಿಗೆ ಸಹಾಯ ಮಾಡಿದ್ದೆ. ಆದರೆ ಜನ ಮತ ನೀಡಲಿಲ್ಲ. ಹೀಗಾಗಿ ನಾವು ಈ ಬಾರಿ ಹೊರಗಿನವರಿಗೆ ಟಿಕೆಟ್ ನೀಡುವುದು ಬೇಡ. ಸ್ಥಳೀಯರಿಗೆ ಟಿಕೆಟ್ ನೀಡಿದ್ದೇವೆ ಎಂದರು.












Click it and Unblock the Notifications