Sadananda Gowda: ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ನಿವೃತ್ತಿ ಘೋಷಿಸಿದ್ರಾ ಸದಾನಂದಗೌಡ: ಡಿವಿಎಸ್ ಹೇಳಿದ್ದೇನು?
ಮಂಡ್ಯ, ನವೆಂಬರ್ 09: ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವಂತೆ ಯಾರೂ ನನಗೆ ಸೂಚನೆ ಕೊಟ್ಟಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರವೇ ಹೊರತು ಇದರಲ್ಲಿ ಯಾರದ್ದೇ ಹಸ್ತಕ್ಷೇಪ ಇಲ್ಲ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸ್ಪಷ್ಟಪಡಿಸಿದರು.
ಮದ್ದೂರು ತಾಲೂಕಿನ ಸಿದ್ದೇಗೌಡನದೊಡ್ಡಿಯಲ್ಲಿ ಬರ ಅಧ್ಯಯನ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತಿ ಘೋಷಿಸುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿರುವುದು ನನಗೆ ಗೊತ್ತಿಲ್ಲ. ಈ ರೀತಿ ಅವರು ಹೇಳಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮನುಷ್ಯನಿಗೆ ಕೆಲವು ಇತಿಮಿತಿ ಇರಬೇಕು. ಮೂವತ್ತು ವರ್ಷದಿಂದ ಎಲ್ಲ ಸ್ಥಾನಮಾನ ನೋಡಿದ್ದೇನೆ, ಪಕ್ಷದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದೆ, ಕೇಂದ್ರ ಸರ್ಕಾರದಲ್ಲಿ ಏಳು ವರ್ಷ ಸಚಿವರಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದೆ. ರಾಜ್ಯ ಅಧ್ಯಕ್ಷನಾಗಿ ಪಕ್ಷವನ್ನು ಮುನ್ನಡೆಸಿದ್ದೇನೆ. ರಾಜಕೀಯದಲ್ಲಿ ಇಷ್ಟು ಮಾತ್ರ ಸಾಕಲ್ಲವೇ ಎಂದು ಪ್ರಶ್ನಿಸಿದರು.
ರಾಜಕಾರಣಕ್ಕೆ ಪ್ರವೇಶಿಸಿ 25 ವರ್ಷದ ನಂತರ ಚುನಾವಣಾ ರಾಜಕೀಯದಿಂದ ದೂರ ಆಗಬೇಕೆಂದು ಚಿಂತನೆ ಮಾಡಿದ್ದು ನಿಜ. ಆದರೆ ಪಕ್ಷದ ಒತ್ತಡದ ಹಿನ್ನೆಲೆಯಲ್ಲಿ ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಈ ಬಾರಿ ಆರು ತಿಂಗಳ ಮುನ್ನವೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದೇನೆ. ಇದರಿಂದ ಪಕ್ಷಕ್ಕೆ ಹೊಸಬರನ್ನು ಹುಡುಕಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಿಜೆಪಿ ದೊಡ್ಡ ಮಟ್ಟಿಗೆ ಸಂಘಟನೆ ಆಗುತ್ತಿದೆ. 40 ವರ್ಷಕ್ಕಿಂತ ಕೆಳಗಿನವರು ದೇಶದಲ್ಲಿ 60 ಪರ್ಸೆಂಟ್ ಇದ್ದಾರೆ. ನಾನು ಸಾಯುವಾಗ ನನ್ನ ಶವಕ್ಕೆ ಬಿಜೆಪಿ ಬಟ್ಟೆ ಹಾಕಬೇಕು ಎನ್ನುವ ರಾಜನೀತಿ ಒಪ್ಪಲ್ಲ. ಪಕ್ಷದ ಕೆಲಸ ಮಾಡಲು ಅವಕಾಶ ಕೊಡಿ ಎಂದು ವರಿಷ್ಠರಲ್ಲಿ ಕೇಳಿದ್ದೆ. ಪಕ್ಷದಲ್ಲಿ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ ಎಂದ ಅವರು, ರಾಜಕೀಯ ಜೀವನದಲ್ಲಿ ಯಾರ ಹಿಂದೆಯೂ ಚೀಲ ಹಿಡಿದು ಹೋಗಿಲ್ಲ, ಬೆಣ್ಣೆ ಹಿಡಿದು ಹೋಗಿಲ್ಲ, ಗುಂಪುಗಾರಿಕೆಯು ಮಾಡಿಲ್ಲ, ನಮ್ಮದು ಅಪ್ಪಟ ಬಿಜೆಪಿ ಎಂದು ಹೇಳಿದರು.
ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುವ ಕುರಿತು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.
ಸೋಮಶೇಖರ್ ಹೇಳಿಕೆ ಬಗ್ಗೆ ವಾದ ಮಾಡಲ್ಲ
ಒಂದು ಕೈಯಲ್ಲಿ ಐದು ಬೆರಳು ಸಮವಾಗಿ ಇರುವುದಿಲ್ಲ. ಅದೇ ರೀತಿ ರಾಜಕೀಯ ಪಕ್ಷದಲ್ಲಿ ಕೆಲವರು ಇರುತ್ತಾರೆ. ಅದರ ಬಗ್ಗೆ ನಾನು ವಾದ ಮಾಡುವುದಿಲ್ಲ. ರಾಜಕೀಯ ಪಕ್ಷದಲ್ಲಿ ಎಲ್ಲರೂ ಒಂದೇ ರೀತಿ ಇರಲ್ಲ, ಬೇರೆ ಮನಸ್ಸು ಇರುತ್ತದೆ. ಈ ಬಗ್ಗೆ ಉತ್ತರ ಕೊಡುವುದು ಸರಿಯಲ್ಲ ಎಂದು ಬಿಜೆಪಿ ಪಕ್ಷದ ಬರ ಅಧ್ಯಯನ ಬಗ್ಗೆ ಸ್ವ ಪಕ್ಷಿಯ ಶಾಸಕ ಎಸ್.ಟಿ ಸೋಮಶೇಖರ್ ಆಕ್ಷೇಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದರು. ಸೋಮಶೇಖರ್ ಹೇಳಿರುವುದು ಕಾಂಗ್ರೆಸ್ ರೈತರಿಗೆ ವಿಷ ಕೊಡುತ್ತಾರೆ ಎಂದು, ಅದು ಸರಿಯಾಗಿದೆ. ವಿಷ ಕೊಡುವುದು ಬಿಜೆಪಿಯಲ್ಲ ಎಂದು ಹೇಳಿದರು.











Click it and Unblock the Notifications