ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ಬಿಜೆಪಿ ನಾಯಕ!
ಮಂಡ್ಯ, ಅಕ್ಟೋಬರ್ 28: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮುಂದಿನ ಚುನಾವಣೆಗೆ ಚನ್ನಪಟ್ಟಣದಲ್ಲೇ ಸ್ಪರ್ಧಿಸುವುದಾಗಿ ಈಗಾಗಲೇ ಖಚಿಪಡಿಸಿದ್ದಾರೆ. ಇದೀಗ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿ. ಪಿ. ಯೋಗೇಶ್ವರ್ ಕೂಡ ತಾವೂ ಎಚ್‌ಡಿಕೆ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಮಂಡ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಕೋಟಿ ಕನ್ನಡ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತಾನಾಡಿದ ಯೋಗೇಶ್ವರ್, "ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿಯೇ ಸ್ಪರ್ಧಿಸುತ್ತೇನೆ" ಎಂದು ಎಚ್‌ಡಿಕೆ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
" ಕುಮಾರಸ್ವಾಮಿ ಹಿಂದಿನ ಚುನಾವಣೆಯಲ್ಲಿ ಅಲ್ಲಿಂದಲೇ ಸ್ಪರ್ಧಿಸಿ ಗೆದ್ದಿದ್ದಾರೆ, ಮುಂದಿನ ಬಾರಿಯೂ ಅಲ್ಲೇ ಸ್ಪರ್ಧಿಸಬೇಕಲ್ವಾ?. ನನಗೆ ಚನ್ನಪಟ್ಟಣ ಸ್ವಂತ ಕ್ಷೇತ್ರವಾಗಿದ್ದು ನಾನು ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ" ಎಂದು ಖಚಿತಪಡಿಸುವ ಮೂಲಕ ಎಚ್‌ಡಿಕೆ ವಿರುದ್ಧ ಕಣಕ್ಕಿಳಿಯಲು ತಾವು ಸಿದ್ಧರಿರುವುದಾಗಿ ತಿಳಿಸಿದರು.
"ಕಳೆದ ಬಾರಿ ಅವರು ಚನ್ನಪ್ಟಣ ಕ್ಷೇತ್ರದಲ್ಲೇ ಗೆದ್ದಿದ್ದಾರೆ, ಈ ಬಾರಿಯೂ ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದಿದ್ದಾರೆ. "ನಾನು ಈ ಚುನಾವಣೆಯನ್ನು ಸ್ಪರ್ಧಾತ್ಮಕ ಭಾವದಿಂದ ಸ್ವೀಕರಿಸುತ್ತೇನೆ, ನಾನು ನಮ್ಮ ಪಕ್ಷದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ . ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುತ್ತೇನೆ" ಎಂದರು.

ಮುಂದಿನ ಬಾರಿಯೂ ಬಿಜೆಪಿ ಸರಕಾರ
ಕುಮಾರಸ್ವಾಮಿ ಈ ಬಾರಿ ಬಹುಮತ ಪಡೆದು ತಾವೇ ಮುಖ್ಯಮಂತ್ರಿಯಾಗಲಿದ್ದೇನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, "ಅವರ ಹೇಳಿಕೆಗಳಲ್ಲಿ ತೂಕ ಗಾಂಭೀರ್ಯವಿಲ್ಲ, ಆದರೆ ಒಂದಂತೂ ಸತ್ಯ, ನಾವು ಪೂರ್ಣ ಬಹುಮತ ಪಡೆಯುತ್ತೇವೆ, ಸರಕಾರ ರಚಿಸುತ್ತೇವೆ. ಜೆಡಿಎಸ್‌ಗೆ ಪೂರ್ಣ ಬಹುಮತ ಬರುತ್ತದೋ, ಇಲ್ಲವೋ ಎಂಬುದನ್ನು ಅವರು ಹೇಳುತ್ತಾರೆ. ಅದರೆ ಫಲಿತಾಂಶ ಏನಾಗಬಹುದು ಎಂಬುದು ನಮಗೆ, ನಿಮಗೆ ಎಲ್ಲರಿಗೂ ಗೊತ್ತಿದೆ. ಅವರಿಗೆ ವಿಶ್ವಾಸ ಇದೆ ಅಂದರೆ ನಾವು ಏನು ಹೇಳುವುದಕ್ಕಾಗುವುದಿಲ್ಲ, ಆದರೆ 2023ಕ್ಕೆ ನಮ್ಮ ಬಿಜೆಪಿ ಸರಕಾರ ರಚಿಸಿವುದಂತೂ ಕಟ್ಟಿಟ್ಟ ಬುತ್ತಿ" ಎಂದು ಯೋಗೀಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಜೆಡಿಎಸ್ ರಾಜ್ಯದ ಜನತೆ ಮನ್ನಣೆ ನೀಡಲ್ಲ
ಜೆಡಿಎಸ್ ಪಂಚರತ್ನ ಪಾದಯಾತ್ರೆ ಬಗ್ಗೆ ಮಾತನಾಡಿ, "ಕುಮಾರಸ್ವಾಮಿ ಯಾತ್ರೆ ಮಾಡುತ್ತಿರುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅವರು ಹೋರಾಟ ಮಾಡಲೇಬೇಕು, ಈಗಾಗಲೆ 2 ಬಾರಿ ಸಿಎಂ ಆಗಿ ರಾಜ್ಯದ ಜನತೆಗೆ ನಿರಾಶೆ ಉಂಟು ಮಾಡಿದ್ದಾರೆ, ಉತ್ತಮ ಆಡಳಿತ ಕೊಡಲು ವಿಫಲರಾಗಿದ್ದಾರೆ. ಇದೀಗ ಮತ್ತೆ ಜನರ ಮುಂದೆ ಹೋಗುತ್ತಿದ್ದಾರೆ. ಬಹುಶಃ ಜನ ಅವರಿಗೆ ಮನ್ನಣೆ ನೀಡುವುದಿಲ್ಲ ಎನ್ನುವುದು ನನ್ನ ಭಾವನೆ" ಎಂದು ತಿಳಿಸಿದರು.
ಕಳೆದ ತಿಂಗಳ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ವೇಳೆ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿ, "ಎಚ್‌ಡಿಕೆ ವಿಚಲಿತರಾದಂತೆ ಕಾಣುತ್ತಿದ್ದಾರೆ. ಅವರು 4 ವರ್ಷಗಳಿಂದ ಕ್ಷೇತ್ರದ ಕಡೆ ತಿರುಗಿ ನೋಡಿರಲಿಲ್ಲ , ಇದೀಗ ತಾಲೂಕಿನ ಜನ ಅವರನ್ನು ಮರೆತಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ಜನರ ದೃಷ್ಠಿಯನ್ನು ಬೇರೆ ಕಡೆ ತಿರುಗಿಸಲು ಅಲ್ಲಲ್ಲಿ ಗಲಾಟೆ ಮಾಡಿಸುತ್ತಿದ್ದಾರೆ, ಚುನಾವಣೆಯಲ್ಲಿ ಕ್ಷೇತ್ರದ ಜನತೆ ಅವರಿಗೆ ಸರಿಯಾಗಿ ಪಾಠ ಕಲಿಸುತ್ತಾರೆ" ಎಂದು ತಿರುಗೇಟು ನೀಡಿದರು.

ಮೀಸಲಾತಿ ಕೊಟ್ಟಿರುವುದು ನಮ್ಮ ಸರಕಾರ
ಮೀಸಲಾತಿ ವಿಚಾರದಲ್ಲಿ ಆಯೋಗ ರಚನೆ ಮಾಡಿದ್ದು ನಮ್ಮ ಸರಕಾರ ಎಂದಿದ್ದ ಹೆಚ್‌ಡಿಕೆ ಹೇಳಿಕೆಗೆ ತಿರುಗೇಟು ನೀಡಿ, "ಆಯೋಗ ರಚನೆ ಮಾಡಿದ್ದು ಅವರಾದರೆ, ಅದನ್ನು ಜಾರಿಗೆ ತಂದಿರುವ ಶ್ರೇಯ ನಮ್ಮ ಸರಕಾರಕ್ಕೆ ಸಲ್ಲಬೇಕು. ಚುನಾವಣೆ ಸಂದರ್ಭದಲ್ಲಿ ಸರಕಾರ ದೃಢ ನಿರ್ಧಾರ ತೆಗೆದುಕೊಂಡಿದೆ" ಎಂದು ತಿಳಿಸಿದರು.

ಸುಮಲತಾ ಬಿಜೆಪಿಗೆ ಸೇರುತ್ತಾರೆಂಬ ಆಶಾಭಾವನೆ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಸೇರಬಹುದಾ? ಎಂಬ ಪ್ರಶ್ನೆಗೆ ಉತ್ತರಿಸಿ, "ಮಂಡ್ಯ ಸಂಸದರು ಬಿಜೆಪಿ ಸೇರುವ ವಿಚಾರವಾಗಿ ಕಳೆದ ಕೆಲವು ದಿನಗಳಿಂದಲೂ ಮಾತಕತೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ಪಕ್ಷ ಸೇರಬಹುದು, ಪಕ್ಷದ ಮುಖಂಡರ ಜೊತೆಗೆ ಒಂದೆರಡು ಸುತ್ತಿನ ಮಾತುಕತೆ ನಡೆದಿತ್ತು, ಬರುತ್ತಾರೆ ಎಂಬ ಆಶಾಭಾವನೆ ನಮ್ಮಲ್ಲಿದೆ" ಎಂದರು.
ಚುನಾವಣೆ ಸಿದ್ಧತಾ ಕಾರ್ಯದ ಬಗ್ಗೆ ಮಾತನಾಡಿ, "ನಾನು ಪ್ರಸ್ತುತ ಚುನಾವಣೆ ಅಖಾಡದಲ್ಲಿ ಹಳ್ಳಳ್ಳಿಗೆ ಸುತ್ತಿ ನಮ್ಮ ಸರಕಾರದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದೇನೆ" ಎಂದರು.












Click it and Unblock the Notifications