ಮಂಡ್ಯ: ಲೋಕಸಭಾ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ: ಆಕಾಂಕ್ಷಿಗಳು ಯಾರ್ಯಾರು?
ಮಂಡ್ಯ, ಜೂನ್ 15 : ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳಾಗಲು ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ಆರಂಭವಾಗಿದೆ.
ಈಗಾಗಲೇ ಮಾಜಿ ಸಂಸದೆ ರಮ್ಯಾ ಹೆಸರು ಚಾಲ್ತಿಯಲ್ಲಿರುವಾಗಲೇ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಸಹೋದರ ಲಕ್ಷ್ಮೀಕಾಂತ್ ಮತ್ತು ಅವರ ಪುತ್ರ ಸುನಿಲ್ ಲಕ್ಷ್ಮೀಕಾಂತ್ ಅವರ ಹೆಸರುಗಳು ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರಬಲವಾಗಿ ಕೇಳಿಬರುತ್ತಿವೆ. ಮಾಜಿ ಸಂಸದೆ ರಮ್ಯಾ ಹೆಸರು ಜೊತೆಗೆ ಮತ್ತಿಬ್ಬರ ಹೆಸರುಗಳು ಕೇಳಿಬರುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ನಾಗಮಂಗಲ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 1994 ರಿಂದಲೂ ಚಲುವರಾಯಸ್ವಾಮಿ ಗೆಲುವಿಗೆ ಸಹೋದರ ಲಕ್ಷ್ಮೀಕಾಂತ್ ಪ್ರಮುಖ ಪಾತ್ರ ವಹಿಸಿದ್ದರು. ನೇರವಾಗಿ ರಾಜಕಾರಣದಲ್ಲಿ ಗುರುತಿಸಿಕೊಳ್ಳದಿದ್ದರೂ ತೆರೆಯ ಹಿಂದೆ ಸಾಕಷ್ಟು ಕೆಲಸಗಳನ್ನು ಮಾಡುವ ಮೂಲಕ ಸ್ವಾಮಿಗೌಡ ಅವರ ಪರವಾಗಿ ಕೆಲಸ ಮಾಡುತ್ತಿದ್ದರು.
ಲೋಕಸಭಾ ಚುನಾವಣೆ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಲಕ್ಷ್ಮೀಕಾಂತ್ ಹಾಗೂ ಸುನಿಲ್ ಲಕ್ಷ್ಮೀಕಾಂತ್ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಕಾಂಗ್ರೆಸ್ ಪಕ್ಷದ ವರಿಷ್ಠರುಗಳು ಚುನಾವಣೆಯಲ್ಲಿ ಹಿರಿತನವನ್ನು ಪರಿಗಣಿಸುವುದಾದರೆ, ಲಕ್ಷ್ಮೀಕಾಂತ್ ಅಥವಾ ಯುವಕರಿಗೆ ಆದ್ಯತೆ ಇದ್ದರೆ ಸುನಿಲ್ ಲಕ್ಷ್ಮೀಕಾಂತ್ ಅವರನ್ನು ಪರಿಗಣಿಸಬೇಕು ಎಂದು ಅವರ ಬೆಂಬಲಿಗರ ಅನಿಸಿಕೆಯಾಗಿದೆ.

ತಮ್ಮ ಕುಟುಂಬದ ಸ್ಪರ್ಧೆ ಬಗ್ಗೆ ಚಲುವರಾಯಸ್ವಾಮಿ ಎಲ್ಲೂ ಪ್ರಸ್ತಾಪ ಮಾಡಿಲ್ಲವಾದರೂ, ಬೆಂಬಲಿಗರು ಮಾತ್ರ ಚುನಾವಣೆಯಲ್ಲಿ ಲಕ್ಷ್ಮೀಕಾಂತ್ ಅಥವಾ ಸುನಿಲ್ ಲಕ್ಷ್ಮೀಕಾಂತ್ ಅವರ ಸ್ಪರ್ಧೆ ಬಗ್ಗೆ ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ದಿವಾಕರ್ ಮತ್ತು ಬೆಂಬಲಿಗರು ಸಧ್ಯದಲ್ಲೇ ಸಚಿವ ಚಲುವರಾಯಸ್ವಾಮಿಯವರನ್ನು ಭೇಟಿ ಮಾಡಿ ಲಕ್ಷ್ಮೀಕಾಂತ್ ಅಥವಾ ಸುನಿಲ್ ಅವರನ್ನು ಕಣಕ್ಕಿಳಿಸುವಂತೆ ಒತ್ತಡ ಹೇರಿದ್ದಾರೆಂದು ತಿಳಿದು ಬಂದಿದೆ.
ಕಳೆದ 2018ರ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತು ಮನೆ ಸೇರಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಒಬ್ಬರೇ ಒಬ್ಬ ಕಾಂಗ್ರೆಸ್ ಜನಪ್ರತಿನಿಧಿಗಳು ಇರಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿದ ಚಲುವರಾಯಸ್ವಾಮಿ ಅವರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ದಿನೇಶ್ ಗೂಳೀಗೌಡ ಅವರನ್ನು ಗೆಲುವಿಗೆ ವಿಶೇಷ ತಂತ್ರ ರೂಪಿಸಿದ್ದರು.
ನಂತರ ನಡೆದ ಪದವೀಧರ ಕ್ಷೇತ್ರದ ಚುನಾವಣೆಯಲ್ಲೂ ಮಧು ಮಾದೇಗೌಡ ಅವರ ಗೆಲುವಿಗೆ ರಣತಂತ್ರ ರೂಪಿಸಿ ಇಬ್ಬರನ್ನೂ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದಕ್ಕೂ ಮುನ್ನ ನಡೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರನ್ನು ಬೆಂಬಲಿಸಿ ಅಧಿಕ ಮತಗಳ ಅಂತರದಿಂದ ಗೆಲ್ಲಲು ಕಾರಣರಾಗಿದ್ದರು ಎಂದು ಹೇಳಲಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಜಿಲ್ಲೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆದಿದೆ. ಈ ಹಿನ್ನೆಲೆಯಲ್ಲಿ ಚಲುವರಾಯಸ್ವಾಮಿ ಮತ್ತು ಲಕ್ಷ್ಮೀಕಾಂತ್ ಬೆಂಬಲಿಗರು, ಲಕ್ಷ್ಮೀಕಾಂತ್ ಅಥವಾ ಸುನಿಲ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವಂತೆ ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಚಿವ ಚಲುವರಾಯಸ್ವಾಮಿ ತಮ್ಮ ಕುಟುಂಬದವರಿಗೇ ಮಣೆ ಹಾಕುತ್ತಾರೋ ಅಥವಾ ಹೈಕಮಾಂಡ್ ನೀಡುವ ಅಭ್ಯರ್ಥಿಯನ್ನೇ ಬೆಂಬಲಿಸುತ್ತಾರೋ, ಇಲ್ಲವೇ ಹೈಕಮಾಂಡ್‌ಗೆ ಮನವರಿಕೆ ಮಾಡಿ ತಮ್ಮ ಕುಟಂಬದವರ ಪೈಕಿ ಒಬ್ಬರಿಗೆ ಟಿಕೆಟ್ ಕೊಡಿಸುತ್ತಾರೋ ಎನ್ನುವುದು ನಿಗೂಢವಾಗಿದೆ.












Click it and Unblock the Notifications