ಸಚಿವ ಚಲುವರಾಯಸ್ವಾಮಿ ವಿರುದ್ಧ ದೂರು: ಕೃಷಿ ಅಧಿಕಾರಿಗಳು ಸಿಐಡಿ ವಶಕ್ಕೆ
ಮಂಡ್ಯ, ಆಗಸ್ಟ್ 21 : ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಇಬ್ಬರು ಕೃಷಿ ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆ.ಆರ್.ನಗರ ತಾಲೂಕಿನ ಸಹಾಯಕ ಕೃಷಿ ಅಧಿಕಾರಿ ಗುರುಪ್ರಸಾದ್, ಸಹಾಯಕ ಅಧಿಕಾರಿ ಸುದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಸಹಾಯಕ ಕೃಷಿ ಅಧಿಕಾರಿಗಳು 6 ರಿಂದ 8 ಲಕ್ಷ ರೂಪಾಯಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರ ಮೂಲಕ ಹಣದ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ರಾಜ್ಯಪಾಲರಿಗೆ ಪತ್ರ ಬರೆದವರು ಈ ಇಬ್ಬರು ಕೃಷಿ ಅಧಿಕಾರಿಗಳು ಎಂಬ ಮಾಹಿತಿ ಮೇರೆಗೆ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಡ್ಯ ಜಿಲ್ಲೆಯ ಸಹಾಯಕ ಕೃಷಿ ಅಧಿಕಾರಿಗಳು ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ದೂರು ಪತ್ರದಲ್ಲಿರುವ ಸಹಿಗಳೆಲ್ಲವೂ ನಕಲಿ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಇದೀಗ ಪ್ರಕರಣದಲ್ಲಿ ಕೆ.ಆರ್.ನಗರ ತಾಲೂಕಿನ ಕೃಷಿ ಅಧಿಕಾರಿಗಳ ಪಾತ್ರವಿರುವ ಬಗ್ಗೆ ಮಾಹಿತಿ ದೊರಕಿರುವುದು ಹೊಸ ತಿರುವನ್ನು ಪಡೆದುಕೊಂಡಿದೆ.
ದೂರು ಪತ್ರವನ್ನು ಮೈಸೂರಿನ ಸರಸ್ವತಿಪುರಂನ ಪ್ರಧಾನ ಅಂಚೆ ಕಚೇರಿಯಿಂದ ರಾಜ್ಯಪಾಲರಿಗೆ ಕಳುಹಿಸಲಾಗಿದ್ದು, ಅಲ್ಲಿನ ಸಿ.ಸಿ ಟಿವಿ ದೃಶ್ಯಗಳನ್ನು ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರೂ, ಪತ್ರ ಕಳುಹಿಸಿದ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ.
ಇದೀಗ ತನಿಖಾ ತಂಡಕ್ಕೆ ದೂರು ಪತ್ರ ಬರೆದವರು ಕೆ.ಆರ್.ನಗರ ಮೂಲದ ಕೃಷಿ ಅಧಿಕಾರಿಗಳೆಂಬ ಮಾಹಿತಿ ದೊರಕಿದೆ. ಈ ಇಬ್ಬರು ಅಧಿಕಾರಿಗಳ ಹೆಚ್ಚಿನ ವಿಚಾರಣೆಯಿಂದ ಮಹತ್ವದ ಮಾಹಿತಿಗಳು ಹೊರಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ.












Click it and Unblock the Notifications