ಮಂಡ್ಯ ಫಲಿತಾಂಶದ ಕುರಿತು ಕುಮಾರಸ್ವಾಮಿಗೆ ಗುಪ್ತಚರ ಇಲಾಖೆ ವರದಿ
Recommended Video
ಬೆಂಗಳೂರು, ಏ.27: ಮಂಡ್ಯ ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಗುಪ್ತಚರ ಇಲಾಖೆಯು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಕೆಲವು ಮಾಹಿತಿ ನೀಡಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಗುಪ್ತಚರ ವರದಿಯಲ್ಲಿ ಮಂಡ್ಯ, ಮಳವಳ್ಳಿ, ಮದ್ದೂರು ಕ್ಷೇತ್ರಗಳಲ್ಲಿ ಜೆಡಿಎಸ್ಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಆ ಮೂರು ಕ್ಷೇತ್ರದ ಶಾಸಕರಾದ ಶ್ರೀನಿವಾಸ್, ಅನ್ನದಾನಿ ಮತ್ತು ಡಿ.ಸಿ. ತಮ್ಮಣ್ಣ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೆಲುವಿನ ಕುರಿತು ತಲೆ ಕೆಡಿಸಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಕುಮಾರಸ್ವಾಮಿ ಅವರು ಏ.21 ರ ನಂತರ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಅವರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.
ನಿನ್ನೆ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ರಾಜ್ಯ ಬಿಜೆಪಿ ಚುನಾವಣೆ ನಿರ್ವಹಣಾ ಸಮಿತಿ ಸಭೆಯಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗನಗೌಡ ಲೋಕಸಭೆ ಚುನಾವಣೆ ವರದಿ ಸಲ್ಲಿಸಿದ್ದರು.
ಇದರಲ್ಲಿ ಬಿಜೆಪಿ ಬೆಂಬಲ ನೀಡಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸುಮಾರು 45 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗಿತ್ತು.
ಕೆಲವು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮುಖಂಡರುಗಳು ಫಲಿತಾಂಶ ತಮ್ಮ ಕೈಯಲ್ಲಿಯೋ ಇದೆಯೇನೋ, ತಮಗೆಲ್ಲಾ ತಿಳಿದಿದೆ ಎನ್ನುವ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಸರಿಯೋ ತಪ್ಪೋ ಎಂದು ತಿಳಿಯಲು ಮೇ.23ರವರೆಗೆ ಕಾಯಲೇಬೇಕಿದೆ.

ಗೆದ್ದರೂ, ಸೋತರೂ ಎಲ್ಲೂ ಹೋಗಲ್ಲ ಮಂಡ್ಯದಲ್ಲೇ ಇರ್ತೀನಿ
ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ನಾನು ಸೋತರೂ ಗೆದ್ದರೂ ಮಂಡ್ಯದಲ್ಲಿಯೇ ಇರುತ್ತೇನೆ' ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದರು.
ನಾವು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಮಾಡುವುದೂ ಇಲ್ಲ' ಎಂದು ಸ್ಪಷ್ಟಪಡಿಸಿದ್ದರು.

ಏ.18ರಂದು ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಏ.18 ರಂದು ಚುನಾವಣೆ ನಡೆದಿತ್ತು. ನಿಖಿಲ್ ಕುಮಾರ ಸ್ವಾಮಿ ಹಾಗೂ ಸುಮಲತಾ ಅಂಬರೀಶ್ ನಡುವೆ ಒಳ್ಳೆಯ ಫೈಟ್ ನಡೆದಿದೆ. ಚುನಾವಣಾ ಪ್ರಚಾರವನ್ನೂ ಸಾಕಷ್ಟು ಮಾಡಿದ್ದರು. ನಿಖಿಲ್ ಪರವಾಗಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಮಾಡಿದರೆ, ಸುಮಲತಾ ಅವರ ಪರ ನಟರಾದ ಯಶ್, ದರ್ಶನ್ ಮಾಡಿದ್ದರು. ಮೇ.23ಕ್ಕೆ ಮಂಡ್ಯದ ಜೊತೆಗೆ ಇನ್ನುಳಿದ ಲೋಕಸಭಾ ಕ್ಷೇತ್ರಗಳ ಫಲಿತಾಂಶ ಕೂಡ ಹೊರಬೀಳಲಿದೆ.ಮಂಡ್ಯದಲ್ಲಿ 80.23ರಷ್ಟು ಮತದಾನವಾಗಿದೆ. ಮಂಡ್ಯದಲ್ಲಿ ಮಹಿಳೆಯೊಬ್ಬರು ಪತಿಯ ಅಂತ್ಯಸಂಸ್ಕಾರ ನೆರವೇರಿಸಿ ಮತ ಹಾಕಿದ್ದರು. ಮಂಡ್ಯ ಹಾಗೂ ದಕ್ಷಿಣ ಕನ್ನಡದಲ್ಲಿ ಮಹಿಳೆಯರು ಮತ ಹಾಕಿದ ಬಳಿಕ ಮಗುವಿಗೆ ಜನ್ಮ ನೀಡಿದ್ದರು.. ಹಲವು ವಧುವರರು ಕಲ್ಯಾಣ ಮಂಡಪದಿಂದಲೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದರು.

ಲೋಕಸಭಾ ಚುನಾವಣೆಯಲ್ಲಿ ಬೆನ್ನೆಲುಬಾಗಿ ನಿಂತವರಿಗೆ ಧನ್ಯವಾದ ಎಂದ ಸುಮಲತಾ
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನನಗೆ ಕ್ಷೇತ್ರದಾದ್ಯಂತ ಉತ್ತಮ ಜನ ಬೆಂಬಲ ಸಿಕ್ಕಿತು. ನಾನು ಹಾಕಿದ ಪ್ರತಿ ಹೆಜ್ಜೆಗೆ ಕಾಂಗ್ರೆಸ್ ಕಾರ್ಯಕರ್ತರು ಕಾರಣಕರ್ತರಾಗಿದ್ದಾರೆ. ಹಾಗೆಯೇ ಬಹಿರಂಗ ಬೆಂಬಲ ನೀಡಿದ ಬಿಜೆಪಿ, ರೈತಸಂಘಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.

ಬೆಟ್ಟಿಂಗ್ ಕಟ್ಟಬೇಡಿ ಎಂದು ಮಂಡ್ಯದ ಜನರಿಗೆ ಸುಮಲತಾ ಮನವಿ
ಮಂಡ್ಯ ಚುನಾವಣೆ ಅಭ್ಯರ್ಥಿಗಳಿಗೆ ಮಾತ್ರ ಪ್ರತಿಷ್ಠೆಯಾಗಿಲ್ಲ, ಮಂಡ್ಯ ಜನರಿಗೂ ಬಹುದೊಡ್ಡ ಪ್ರತಿಷ್ಠೆ. ಈ ಪ್ರತಿಷ್ಠೆಯ ಪ್ರತಿರೂಪವಾಗಿ ಮಂಡ್ಯ ಕ್ಷೇತ್ರದಲ್ಲಿ ಬೆಟ್ಟಿಂಗ್ ಸದ್ದು ಜೋರಾಗಿ ಕೇಳಿಬರುತ್ತಿದೆ. ನಿಖಿಲ್ ಮತ್ತು ಸುಮಲತಾ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಶುರುವಾಗಿದೆ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟುತ್ತಿರುವ ಬೆಂಬಲಿಗರು, ಹಣ, ಜಮೀನು ಸೇರಿದಂತೆ ಇತರೆ ವಸ್ತುಗಳನ್ನ ಬೆಟ್ಟಿಂಗ್‌ಗೆ ಇಡುತ್ತಿದ್ದಾರಂತೆ. ಈ ಬಗ್ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದು, ''ಇದನ್ನು ನಾನು ಖಂಡಿಸುತ್ತೇನೆ'' ಎಂದಿದ್ದಾರೆ.












Click it and Unblock the Notifications