ಮಂಡ್ಯದಲ್ಲಿ ನಿಖಿಲ್ ಪರ ಎನ್.ಚಂದ್ರಬಾಬು ನಾಯ್ಡು ಪ್ರಚಾರ
ಮಂಡ್ಯ, ಏಪ್ರಿಲ್ 14 : 'ಸುಮಲತಾ ಮಳವಳ್ಳಿ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ. ಅವರು ನಾಯ್ಡು ಜನಾಂಗದವರು. ಮಂಡ್ಯ ಗೌಡ್ತಿ ಅಲ್ಲ' ಎಂದು ಮಂಡ್ಯ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದರು.
ಈಗ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರನ್ನು ಮಂಡ್ಯಕ್ಕೆ ಕರೆಸಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ಮಾಡಿಸಲಾಗುತ್ತಿದೆ. ಹೌದು, ಏಪ್ರಿಲ್ 15ರಂದು ಚಂದ್ರಬಾಬು ನಾಯ್ಡು ಮಂಡ್ಯಕ್ಕೆ ಆಗಮಿಸಲಿದ್ದಾರೆ.
'ಮೇಲುಕೋಟೆ, ಪಾಂಡವಪುರದಲ್ಲಿ ಏಪ್ರಿಲ್ 15ರ ಸೋಮವಾರ ಎನ್.ಚಂದ್ರಬಾಬು ನಾಯ್ಡು ಅವರು ಪ್ರಚಾರ ನಡೆಸಲಿದ್ದಾರೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶನಿವಾರ ಕೆ.ಆರ್.ನಗರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸಿದ್ದರು. ಈಗ ಪ್ರಚಾರಕ್ಕಾಗಿ ಎನ್.ಚಂದ್ರಬಾಬು ನಾಯ್ಡು ಅವರು ಆಗಮಿಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ. ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣದಲ್ಲಿದ್ದಾರೆ. ಬಿಜೆಪಿ ಸಹ ಸುಮಲತಾ ಅವರಿಗೆ ಬೆಂಬಲ ನೀಡಿದೆ.
ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವುದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಪ್ರಚಾರ ನಡೆಸಿ ನಿಖಿಲ್ ಪರವಾಗಿ ಮತಯಾಚನೆ ಮಾಡಿದ್ದಾರೆ.
ಏಪ್ರಿಲ್ 18ರಂದು ಮಂಡ್ಯ ಕ್ಷೇತ್ರದ ಚುನಾವಣೆ ನಡೆಯಲಿದೆ. ಸುಮಲತಾ ಅಂಬರೀಶ್ ಅವರ ಪರವಾಗಿ ನಟರಾದ ದರ್ಶನ್ ಮತ್ತು ಯಶ್ ಪ್ರಚಾರ ನಡೆಸುತ್ತಿದ್ದಾರೆ.












Click it and Unblock the Notifications