'ಸಿದ್ದರಾಮಯ್ಯ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು'

Posted By:
Subscribe to Oneindia Kannada

ಮಂಡ್ಯ, ಸೆಪ್ಟೆಂಬರ್ 21 : ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದು, ಒಂದು ವೇಳೆ ಸುಪ್ರೀಂ ಆದೇಶ ಪಾಲಿಸಿ ನೀರು ಹರಿಸಿದ್ದೇ ಆದಲ್ಲಿ ಕಾವೇರಿ ಜಲಾನಯನ ವ್ಯಾಪ್ತಿಯ 9 ಜಿಲ್ಲೆಗಳ ಜನಪ್ರತಿನಿಧಿಗಳು ರಾಜೀನಾಮೆ ನೀಡಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಬೇಕಾಗುತ್ತದೆ ಎಂದು ಜೆಡಿಎಸ್ ಬಂಡಾಯ ಶಾಸಕ ಎನ್. ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಕೊಳ್ಳದವರೇ ಆಗಿದ್ದು, ಅವರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ಮುಂದಿನ ಹೋರಾಟ ನಿಂತಿದೆ. ಒಂದು ವೇಳೆ ಅವರು ಸ್ಪಷ್ಟ ನಿಲುವು ತಾಳದಿದ್ದಲ್ಲಿ ಕಾವೇರಿ ಜಲಾನಯನ ವ್ಯಾಪ್ತಿಯ ಒಂಬತ್ತು ಜಿಲ್ಲೆಗಳ ಸಂಸದರು ಮತ್ತು ಶಾಸಕರು ಸ್ಪಷ್ಟ ತೀರ್ಮಾನ ತೆಗೆದುಕೊಂಡು ಕೇಂದ್ರಕ್ಕೆ ಮನ ಮುಟ್ಟುವ ಕೆಲಸ ಮಾಡಬೇಕಾಗುತ್ತದೆ ಎಂದರು.

ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲಾ ಪಕ್ಷದ ಶಾಸಕರು ಹಾಗೂ ಸಂಸದರು ಬದ್ಧರಾಗಿ ಒಗ್ಗಟ್ಟು ಪ್ರದರ್ಶಿಸಿ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಬೇಕು. ಇಲ್ಲದಿದ್ದಲ್ಲಿ ನಮ್ಮಂತಹ ಕಳ್ಳರು ಯಾರೂ ಇರುವುದಿಲ್ಲ. ಒಂದು ವೇಳೆ ಜನವಿರೋಧಿ ನಿಲುವು ತೆಗೆದುಕೊಂಡಲ್ಲಿ ಜನತೆಯೇ ನಮ್ಮನ್ನು ಅಟ್ಟಾಡಿಸಿಕೊಂಡು ಹೊಡೆಯುವಂತಹ ಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. [ಕೆಆರ್ ಎಸ್ ಖಾಲಿ ಖಾಲಿ: ಎಲ್ಲಿಂದ ನೀರು ಬಿಡೋಣ ಹೇಳಿ?]

Cauvery issue : Ready to resign, says Cheluvaraya swamy

ವಿಶೇಷ ಅಧಿವೇಶನಕ್ಕೆ ಆಗ್ರಹ : ಸಿದ್ದರಾಮಯ್ಯ ಅವರು ಕಾವೇರಿ ವಿಚಾರದಲ್ಲಿ ವಿಶೇಷ ಅಧಿವೇಶನ ಕರೆಯುವ ಮೂಲಕ ಎಲ್ಲಾ ಶಾಸಕರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುವುದು ಒಳಿತು. ಕೃಷ್ಣ, ಮಹಾದಾಯಿ, ಕಾವೇರಿ ವಿಚಾರದಲ್ಲಿ ಕೇಂದ್ರ ಮತ್ತು ಸುಪ್ರೀಂ ಕೋರ್ಟ್ ತೆಗೆದುಕೊಳ್ಳುತ್ತಿರುವ ನಿರ್ದಾಕ್ಷಿಣ್ಯ ತೀರ್ಮಾನಕ್ಕೆ ತಿರುಗೇಟು ನೀಡಬೇಕಾದರೆ ನಾವು ಒಗ್ಗಟ್ಟು ಪ್ರದರ್ಶಿಸುವ ಅಗತ್ಯತೆ ಪ್ರಸ್ತುತ ಸಂದರ್ಭ ಒದಗಿ ಬಂದಿದೆ ಎಂದು ತಿಳಿಸಿದರು.

ಬಿಜೆಪಿ ಸಂಸದರು ಮತ್ತು ಶಾಸಕರು ಉಡಾಫೆಯಿಂದ ವರ್ತಿಸುತ್ತಿರುವುದರಿಂದ ಈ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಮಹಾದಾಯಿ ವಿಚಾರದಲ್ಲೂ ಇವರು ನ್ಯಾಯ ದೊರಕಿಸಿಕೊಡಲಿಲ್ಲ. ಉತ್ತರ ಕರ್ನಾಟಕದ ಜನತೆ ಇವರಿಗೆ ತಕ್ಕ ಪಾಠ ಕಲಿಸದಿದ್ದರೆ ಅಂತಹ ಮೂರ್ಖರು ಬೇರೆ ಯಾರೂ ಇರುವುದಿಲ್ಲ ಎಂದು ಹೇಳಿದರು. [ಬಿಜೆಪಿ ನಾಯಕರ ಗೈರುಹಾಜರಿಯಲ್ಲಿ ಸರ್ವಪಕ್ಷ ಸಭೆ ಆರಂಭ]

ಸಿದ್ದರಾಮಯ್ಯ ಅವರು ಸರ್ವ ಪಕ್ಷ ಸಭೆ ಕರೆದಿದ್ದು, ಆದರೆ ಬಿಜೆಪಿಯವರು ಭಾಗವಹಿಸದಿರುವುದು ದುರಂತ. ಸಭೆಗೆ ಬಾರದಿದ್ದರೂ ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಅಲ್ಲದೆ ಮುಖ್ಯಮಂತ್ರಿಗಳೂ ಸಹ ಇದಕ್ಕೆ ಬದ್ಧರಾಗಿರಬೇಕು ಎಂದು ಹೇಳಿದರು.

ಹಿತರಕ್ಷಣಾ ಸಮಿತಿ ತೀರ್ಮಾನಕ್ಕೆ ಬದ್ಧ : ಕಾವೇರಿ ಮುಂದಿನ ಹೋರಾಟಕ್ಕೆ ಸಂಬಂಧಿಸಿದಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಜೆಡಿಎಸ್‌ನ ಎಂಟು ಬಂಡಾಯ ಶಾಸಕರು ಬದ್ಧರಾಗಿದ್ದು, ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಣಯವನ್ನು ನೋಡಿ ಮುಂದೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದರು.

ಕೇಂದ್ರದ ಮಲತಾಯಿ ಧೋರಣೆ ಕಾರಣ : ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗಲು ಕೇಂದ್ರ ಮಲತಾಯಿ ಧೋರಣೆಯೇ ಕಾರಣ. ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ಮೇಲುಸ್ತುವಾರಿ ಸಮಿತಿಯ ಮೂಲಕ ನೀರು ಬಿಡುವಂತೆ ಹೇಳಿ ರಾಜ್ಯ ಸರ್ಕಾರವನ್ನು ಪಥನಗೊಳಿಸಲು ತೆರೆ ಮರೆಯಲ್ಲಿ ಸಂಚು ರೂಪಿಸಿದೆ ಎಂದು ಆರೋಪಿಸಿದರು.

ಸುಪ್ರೀಂ ಬಗ್ಗೆ ಅನುಮಾನ : ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳು ನಾಲ್ಕು ವಾರಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾಗಬೇಕೆಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿರುವುದನ್ನು ನೋಡಿದರೆ, ನ್ಯಾಯಮೂರ್ತಿಗಳ ಬಗ್ಗೆ ಬಹಳ ಅನುಮಾನ ಮೂಡಿದೆ. ಒಟ್ಟಾರೆ ಕೇಂದ್ರ ಮತ್ತು ಕಾವೇರಿ ಮೇಲುಸ್ತುವಾರಿ ಸಮಿತಿ ರಾಜ್ಯದ ವಿರುದ್ಧವಾಗಿ ನಿಂತಿವೆ ಎನ್ನುವುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂದು ದೂರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cauvery Water Dispute : Cheluvaraya Swamy has said that all the MLAs and MPs of Mysuru, Mandya, Chamarajanagar should be ready to resign if Karnataka government decides to release Cauvery water to Tamil Nadu. He was speaking to media in Mandya on Wednesday.
Please Wait while comments are loading...