Cauvery Dispute; ಕೇಂದ್ರ ಸಚಿವರನ್ನು ಭೇಟಿಯಾದ ಸುಮಲತಾ

ಮಂಡ್ಯ, ಸೆಪ್ಟೆಂಬರ್ 19; ತಮಿಳುನಾಡಿಗೆ ಪ್ರತಿದಿ 5 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದೆ. ಸೆಪ್ಟೆಂಬರ್ 13 ರಿಂದ ಮುಂದಿನ 15 ದಿನಗಳ ಕಾಲ ನೀರು ಹರಿಸಬೇಕು ಎಂದು ಆದೇಶಿಸಲಾಗಿದ್ದು, ಕರ್ನಾಟಕದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕಾವೇರಿ ಜಲವಿವಾದದ ಹಿನ್ನಲೆಯಲ್ಲಿ ಮಂಡ್ಯದ ಸಂಸದೆ ಸುಮಲತಾ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಕಾವತ್ ಭೇಟಿ ಮಾಡಿದರು. ಕಾವೇರಿ ಕೊಳ್ಳದ ಪರಿಸ್ಥಿತಿ ವಿವರಿಸಿ, ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು. ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ರಾಜ್ಯದಲ್ಲಿ ಹೋರಾಟಗಳು ನಡೆಯುತ್ತಿವೆ.

Cauvery Dispute Mandya MP Sumalatha Meets Union Minister

ಈ ಕುರಿತು ಟ್ವೀಟ್ ಮಾಡಿರುವ ಅವರು, 'ರಾಜ್ಯ ಸರಕಾರ ಕೂಡ ಮಾನ್ಯ ಕೇಂದ್ರ ಸಚಿವರನ್ನು ಮತ್ತು ಸಂಬಂಧಿಸಿದ ಪ್ರಾಧಿಕಾರದ ಅಧ್ಯಕ್ಷರನ್ನು ಖುದ್ದಾಗಿ ಭೇಟಿ ಮಾಡಿ, ಭೀಕರವಾಗಿರುವ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿ. ತಮಿಳು ನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ, ನಾವೆಲ್ಲರೂ ನಮ್ಮ ರೈತರ ಪರವಾಗಿ ನಿಲ್ಲೋಣ' ಎಂದು ಹೇಳಿದ್ದಾರೆ.

ಕೇಂದ್ರ ಸಚಿವರ ಭೇಟಿ; ಗಜೇಂದ್ರ ಸಿಂಗ್ ಶೆಕಾವತ್ ಭೇಟಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸುಮಲತಾ, 'ಮಂಡ್ಯ ಮತ್ತು ಕರ್ನಾಟಕದ ರೈತರು ಬರ ಕಾರಣದಿಂದಾಗಿ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮಂಡ್ಯ ರೈತರ ಜೀವನಾಡಿ ಆಗಿರುವ ಕಾವೇರಿಯಿಂದ ನಿರಂತರವಾಗಿ ತಮಿಳು ನಾಡಿಗೆ ನೀರು ಬಿಡಲಾಗುತ್ತಿದೆ. ಮಂಡ್ಯ ಭಾಗದ ರೈತರ ಪರಿಸ್ಥಿತಿ ಚಿಂತಾಜನಕವಾಗಿರುವಾಗ ಮತ್ತೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೇಳಿದ್ದು ನಿಜಕ್ಕೂ ಆಘಾತಕಾರಿ ಬೆಳವಣಿಗೆ' ಎಂದು ತಿಳಿಸಿದ್ದಾರೆ.

'ಕೇವಲ ರೈತರ ಗದ್ದೆಗಳಿಗೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ. ಈ ಎಲ್ಲ ಸಂಗತಿಗಳನ್ನು ದೆಹಲಿಯಲ್ಲಿ ಇಂದು ಜಲಶಕ್ತಿ ಸಚಿವರಾದ ಮಾನ್ಯ ಶ್ರೀ ಗಜೇಂದ್ರ ಸಿಂಗ್ ಶಿಕಾವತ್ ಅವರನ್ನು ಭೇಟಿ ಮಾಡಿ ವಿವರಿಸಿದ್ದೇನೆ. ಆಯಾ ರಾಜ್ಯಗಳ ಜಂಟಿ ಸಮಿತಿಯನ್ನು ರಚಿಸುವುದಾಗಿ ಮತ್ತು ಮುಂದಿನ ವಾರದಲ್ಲೇ ಸಮೀಕ್ಷೆ ನಡೆಸುವುದಾಗಿ, ನಮ್ಮ ರೈತರ ಪರವಾಗಿ ನಿಂತುಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನೂ ಬಗೆಹರಿಸುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ. ಆದಷ್ಟು ಬೇಗ ಭರವಸೆ ಈಡೇರುತ್ತದೆ ಎನ್ನುವ ವಿಶ್ವಾಸ ನನ್ನದು' ಎಂದು ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ನೀರು ಹರಿಸಲು ಆದೇಶ; ಸೋಮವಾರ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಒಪ್ಪಿಗೆ. ಸಮಿತಿ ಹೇಳಿದಂತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂದು ಪ್ರಾಧಿಕಾರ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದೆ.

ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ಕೈಕೊಟ್ಟು ಕಾವೇರಿ ಕಣಿವೆ ಜಲಾಶಯಗಳು ಭರ್ತಿಯಾಗಿಲ್ಲ. ಕರ್ನಾಟಕ ಸರ್ಕಾರ ಈಗಾಗಲೇ ಸುಪ್ರೀಂಕೋರ್ಟ್‌ಗೆ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಕೆ ಮಾಡಿದೆ. ಇಂತಹ ಸಮಯದಲ್ಲೇ ಮತ್ತೆ ಕಾವೇರಿ ನೀರು ಹರಿಸಲು ಹೇಳಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚುತ್ತಿರುವ ಮತ್ತು ವಿಸ್ತರಿಸುತ್ತಿರುವ ಬರವನ್ನು ಗಮನಿಸಿ, ಕುಡಿಯುವ ನೀರಿನ ಅಗತ್ಯತೆ, ನೀರಾವರಿ ಅಗತ್ಯತೆಗಳಿಗೆ ನೀರಿನ ಅವಶ್ಯಕತೆ ಇರುವ ಹಿನ್ನಲೆಯಲ್ಲಿ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಪ್ರಾಧಿಕಾರಕ್ಕೆ ತಿಳಿಸಿತ್ತು.

ತಮಿಳುನಾಡು ಸರ್ಕಾರ ಪ್ರತಿದಿನ 6,500 ಕ್ಯುಸೆಕ್ ಬಾಕಿಯನ್ನು ಒಳಗೊಂಡು ಮುಂದಿನ 15 ದಿನ ಒಟ್ಟು 12,500 ಕ್ಯುಸೆಕ್ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿತ್ತು. ಅಂತಿಮವಾಗಿ ಪ್ರಾಧಿಕಾರಿ ಮುಂದಿನ 15 ದಿನ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಹರಿಸಿ ಎಂದು ಆದೇಶ ನೀಡಿದೆ.

ಡಿ. ಕೆ. ಶಿವಕುಮಾರ್ ಹೇಳಿಕೆ; ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಖಾತೆ ಸಚಿವ ಡಿ. ಕೆ. ಶಿವಕುಮಾರ್, "ಕಾವೇರಿ ನೀರು ಹರಿಸಬೇಕೊ, ಬೇಡವೋ ಎಂಬುದರ ಕುರಿತು ಯೋಚನೆ ಮಾಡಲಾಗುತ್ತಿದೆ. ಮಂಗಳವಾರ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಹಾಕುತ್ತಿದ್ದೇವೆ. ನಂತರ ತೀರ್ಮಾನ ಮಾಡಲಾಗುತ್ತದೆ" ಎಂದರು.

"ದೆಹಲಿಗೆ ಯಾವ ಸಮಯದಲ್ಲಾದರೂ ಭೇಟಿ ನೀಡಲು ನಾವು ತಯಾರಿದ್ದೇವೆ. ರಾಜ್ಯದ ಎಂಪಿಗಳು ಹಾಗೂ ಮುಖ್ಯಮಂತ್ರಿಗಳು ಶೀಘ್ರವೇ ಒಂದು ದಿನಾಂಕ ನಿಗದಿ ಮಾಡೋಣ ಎಂದು ಹೇಳಿದ್ದಾರೆ. ರಾಜ್ಯದ ಎಲ್ಲಾ ಎಂಪಿಗಳು ರಾಜಕಾರಣ ಬಿಟ್ಟು ನಮಗೆ ಸಹಾಯ ಮಾಡುತ್ತೇವೆ" ಎಂದು ಹೇಳಿದ್ದಾರೆ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+