ಮಂಡ್ಯ: ಕೊಟ್ಟ ಮಾತು ತಪ್ಪಿ ತಮಿಳುನಾಡಿಗೆ ನೀರು ಹರಿಸಿದ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ
ಮಂಡ್ಯ, ಸೆಪ್ಟೆಂಬರ್ 19: ಕೃಷ್ಣರಾಜಸಾಗರ ಜಲಾಶದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಹಾಗೂ ರೈತರು ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ನಗರದ ಸರ್.ಎಂ.ವಿ. ಪ್ರತಿಮೆ ಬಳಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆ.ಆರ್.ಎಸ್.ನಿಂದ ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಮಾತು ಕೊಟ್ಟಿದ್ದ ಸರ್ಕಾರ ಇದೀಗ ನೀರು ಬಿಟ್ಟು ರೈತರಿಗೆ ದ್ರೋಹ ಮಾಡಿದೆ, ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಕುಡಿಯುವ ನೀರನ್ನು ಸಹ ಬರಿದು ಮಾಡಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಲು ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.
ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳಲ್ಲಿನ ನೀರಿನ ಸಂಗ್ರವನ್ನು ಅಲಲೋಕಿಸಿ ನೀರಿನ ಲಭ್ಯತೆ ಅರಿಯದೆ ಅವೈಜ್ಞಾನಿಕವಾಗಿ ನೀರು ಬಿಡಲು ಆದೇಶ ಮಾಡಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದು ಮಾಡುವಂತೆ ಆಗ್ರಹಿಸಿದರು. ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು, ಕರ್ನಾಟಕದ ರೈತರ ಕಾಪಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ಎಂಎಸ್ ಆತ್ಮಾನಂದ, ಕೆ.ಬೋರಯ್ಯ, ಮಾಜಿ ಶಾಸಕರಾದ ಸಿ ಎಸ್ ಪುಟ್ಟರಾಜು, ಡಾ. ಕೆ ಅನ್ನದಾನಿ, ಸುರೇಶಗೌಡ, ಕೆ.ಟಿ. ಶ್ರೀಕಂಠೇಗೌಡ, ಜಿ.ಬಿ ಶಿವಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇಶ್, ಸಾತನೂರು ಜಯರಾಮ್, ಮೈಶುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ದಸಂಸ ಮುಖಂಡ ವೆಂಕಟಗಿರಿಯಯ್ಯ, ಎಂ.ವಿ. ಕೃಷ್ಣ, ರೈತ ಸಂಘದ ಇಂಡವಾಳು ಚಂದ್ರಶೇಖರ್. ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಅಂಬುಜಮ್ಮ, ಕರವೇ ಶಂಕರೇಗೌಡ ಕಾರಸವಾಡಿ ಮಹದೇವ್, ಇಂಡುವಾಳು ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.












Click it and Unblock the Notifications