ಡಿಸಿಎಂ-ಕೃಷಿ ಸಚಿವರ ವಜಾಕ್ಕೆ ಒತ್ತಾಯಿಸಿ ಬಿಜೆಪಿ ಪಂಜಿನ ಮೆರವಣಿಗೆ: ಕಾಂಗ್ರೆಸ್ ವಿರೋಧ
ಮಂಡ್ಯ, ಆಗಸ್ಟ್ 14: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಮಂಡ್ಯ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ನಗರದ ಸರ್ ಎಂ.ವಿ. ಪ್ರತಿಮೆ ಬಳಿಯಿಂದ ಪಂಜಿನ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು, ರಾಜ್ಯ ಸರ್ಕಾರ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.

ಮೈಸೂರು ಬೆಂಗಳೂರು ಹೆದ್ದಾರಿ ಮಾರ್ಗವಾಗಿ ನಗರದ ಜೆ.ಸಿ. ವೃತ್ತಕ್ಕೆ ಧಾವಿಸಿದ ಕಾರ್ಯಕರ್ತರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದರು. ನಂತರ ಪ್ರತಿಭಟನೆಯ ಅಂತ್ಯಗೊಂಡಿತು. ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಸರ್ ಎಂ.ವಿ. ಪ್ರತಿಮೆ ಬಳಿಯೇ ಪ್ರತಿಭಟನಾ ಧರಣಿ ನಡೆಸುತ್ತಿದ್ದು, ಬಿಜೆಪಿಯವರ ಪಂಜಿನ ಮೆರವಣಿಗೆ ತೆರಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರೂ ಸಹ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲ ಉಂಟಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಬಿಜೆಪಿ ಕಾರ್ಯಕರ್ತರು ಮುಂದೆ ಸಾಗುವಂತೆ ಮನವಿ ಮಾಡಿದರು. ಬಿಜೆಪಿ ಕಾರ್ಯಕರ್ತರು ಹೆದ್ದಾರಿಯಲ್ಲಿ ಪಂಜಿನ ಮೆರವಣಿಗೆ ಹಿಡಿದು ಮುಂದೆ ಸಾಗಿದರು. ನಂತರ ಕಾಂಗ್ರೆಸ್‌ನವರೂ ಸಹ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಈ ವೇಳೆ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಭ್ರಷ್ಟಾಚಾರ ಮತ್ತು ಗುತ್ತಿಗೆದಾರರಿಂದ ಹಣದ ಬೇಡಿಕೆ ಇಟ್ಟಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ವಜಾಗೊಳಿಸಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಆ. 17ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಒಂದಲ್ಲ ಒಂದು ಭ್ರಷ್ಟಾಚಾರದಲ್ಲೇ ತೊಡಗಿದೆ. ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಕೃಷಿ ಸಚಿವರು ಅಮಾಯಕ ಸಾರಿಗೆ ಬಸ್ ಚಾಲಕನನ್ನು ವರ್ಗಾವಣೆ ಮಾಡಿ ದ್ವೇಷದ ರಾಜಕಾರಣ ಮಾಡಿದ್ದರು. ಇದೀಗ ಅವರದ್ದೇ ಇಲಾಖೆಯಲ್ಲಿ 6 ರಿಂದ 8 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಾದ್ಯಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕಾಗಿ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಕೇಂದ್ರದ ಕಾಂಗ್ರೆಸ್ ನಾಯಕರು ಸೂಚನೆ ನೀಡಿ ಎಲ್ಲ ಸಚಿವರೂ ಹಣ ಸಂಗ್ರಹ ಮಾಡುವಂತೆ ತಾಕೀತು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಚಲುವರಾಯಸ್ವಾಮಿ ಅವರು ಹಣಕ್ಕೆ ಬೇಡಿ ಇಟ್ಟಿದ್ದಾರೆ ಎಂದು ದೂರಿದರು.
ಉಪ ಮುಖ್ಯಮಂತ್ರಿ ಮತ್ತು ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ವಜಾಗೊಳಿಸಬೇಕು. ಅವರ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮಂಡ್ಯದಲ್ಲಿ ಅಭೂತಪೂರ್ವ ಹೋರಾಟ ನಡೆಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಇದು ಅವರಿಗೆ ಭಯ ಹುಟ್ಟಿಸಿದೆ ಎಂದು ಹೇಳಿದರು.

ನಾಳೆ ಸ್ವಾತಂತ್ರೋತ್ಸವ ಹಮ್ಮಿಕೊಂಡಿದ್ದು, ಕೃಷಿ ಸಚಿವರು ನಿರ್ಭೀತಿಯಿಂದ ಸ್ವಾತ್ಯೋತ್ಸವದಲ್ಲಿ ಭಾಗವಹಿಸಲಿ ಎಂಬ ಕಾರಣಕ್ಕೆ ನಾವು ಇಂದಿಗೆ ನಮ್ಮ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ವಾಪಸ್ಸು ಪಡೆಯುತ್ತಿದ್ದೇವೆ. ಆ. 17ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ. ನಂತರ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಸಚಿವ ಚಲುವರಾಯಸ್ವಾಮಿ ಅಷ್ಟೇ ಅಲ್ಲ. ಮುಖ್ಯಮಂತ್ರಿ ಅವರ ಕುಟುಂಬದವರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ವೈಎಸ್‌ಟಿ, ಡಿಕೆಎಸ್‌ಟಿ ಸೇರಿದಂತೆ ಹಲವು ತೆರಿಗೆಗಳನ್ನು ಪರೋಕ್ಷವಾಗಿ ವಸೂಲಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಹಿಂದೆ ನಮ್ಮ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಾದ ಕಿಸಾನ್ ಸಮ್ಮಾನ್ ಯೋಜನೆ, ಯಶಸ್ವಿನಿ, ವಿಮೆ, ವಿದ್ಯಾಸಿರಿ, ರೈತರಿಗೆಗಾಗಿ ಮೀಸಲಾದ ಎಲ್ಲ ಯೋಜನೆಗಳನ್ನು ರದ್ದು ಮಾಡಲಾಗಿದೆ. ಇದೊಂದು ರೈತ, ಮಹಿಳೆ, ಯುವಕರ, ಕಾರ್ಮಿಕರ ವಿರೋಧಿ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹಳ ವರ್ಷಗಳಿಂದ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಇದೀಗ ಅಧಿಕಾರಕ್ಕೆ ಬಂದು ಒಂದೆರಡು ತಿಂಗಳಲ್ಲೇ ಭಾರೀ ಭ್ರಷ್ಟಾಚಾರ ನಡೆಸುತ್ತಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯುವುದು ನಮ್ಮ ಮೊದಲ ಕರ್ತವ್ಯವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಭ್ರಷ್ಟಾಚಾರ, ಸಚಿವರ ವಜಾ ಮತ್ತು ಲೋಕಾಯುಕ್ತ ತನಿಖೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನಾ ಧರಣಿಯನ್ನು ಅಂತ್ಯಗೊಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಮುಖಂಡರಾದ ಡಾ. ಸಿದ್ದರಾಮಯ್ಯ, ಡಾ. ಇಂದ್ರೇಶ್, ಸಚ್ಚಿದಾನಂದ, ಎಸ್.ಪಿ. ಸ್ವಾಮಿ, ಚೇತನ್ ಶಿವರಾಮೇಗೌಡ, ಅಶೋಕ್ ಜಯರಾಂ, ವಿದ್ಯಾನಾಗೇಂದ್ರ, ಸಿ.ಟಿ. ಮಂಜುನಾಥ್, ಪಾ.ನಾ. ಸುರೇಶ್, ಎಚ್.ಆರ್. ಅರವಿಂದ್, ವಿವೇಕ್, ಸುಜಾತ ಕಷ್ಣ, ಶಿವಲಿಂಗಯ್ಯ, ಪ್ರಸನ್ನಕುಮಾರ್, ಹರ್ಷ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications