ಜಾಮಿಯಾ ಮಸೀದಿ ವಿರುದ್ಧ ಹನುಮಂತನ ಹೆಸರಿನಲ್ಲಿ 108 ಭಕ್ತರಿಂದ ಹೈಕೋಟ್‌ನಲ್ಲಿ ದಾವೆ
ಮಂಡ್ಯ, ನವೆಂಬರ್ 2: ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಹೈಕೋರ್ಟ್ ಮೆಟ್ಟಿಲೇರುತ್ತಿದೆ. ಮಂದಿರವೋ ಅಥವಾ ಮಸೀದಿಯೋ ಎಂಬ ಇತ್ಯರ್ಥಕ್ಕೆ ಕೊನೆಯ ಸಿದ್ಧತೆಗಳು ನಡೆದಿವೆ. ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹನುಮಂತನ ಹೆಸರಿನಲ್ಲಿ 108 ಭಜರಂಗ ದಳ ದಾವೆ ಹೂಡಲಿದ್ದಾರೆ.
ಕಳೆದ ಹಲವಾರು ವರ್ಷಗಳಿಂದಲೂ ಜಾಮೀಯಾ ಮಸೀದಿ ವಿವಾದ ಮುಂದುವರಿದುಕೊಂಡು ಬರುತ್ತಿದೆ. ಮಸೀದಿಯಲ್ಲ ಮಂದಿರ ಎಂದು ವಾದಿಸುತ್ತಿರುವ ಹಿಂದೂ ಸಂಘಟನೆಗಳು ಕೆಲ ತಿಂಗಳ ಹಿಂದೆಯಷ್ಟೇ ಶ್ರೀರಂಗಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನೂ ಮಾಡಿದ್ದರು.
ವಿಧಾನಸಭೆ ಚುನಾವಣೆ: ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆ ಛಿದ್ರ: ಶಿವರಾಮೇಗೌಡ
ಜಾಮೀಯಾ ಮಸೀದಿಯಲ್ಲ ಅದು ಹನುಮ ಮಂದಿರ ಎಂದು ಹೋರಾಟಗಾರರು ವಾದಿಸಿದ್ದರು. ಮಸೀದಿ ಜಾಗ ಹಿಂದೂಗಳಿಗೆ ಮರಳಿ ನೀಡುವಂತೆ ಸರಕಾರಕ್ಕೆ ಗಡುವು ನೀಡಿದ್ದರು. ಆದರೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಇದೀಗ ಕೋಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರ ರೀತಿ ಹನುಮ ಮಂದಿರಕ್ಕಾಗಿ ನ್ಯಾಯಾಂಗ ಹೋರಾಟ ನಡೆಸಲು ಕೊನೆಯ ಹಂತದ ಸಿದ್ಧತೆಗಳನ್ನು ಪೂರ್ಣಗೊಳಿಸಿ 108 ಮಂದಿ ಹನುಮ ಭಕ್ತರು ನ್ಯಾಯಾಲಯದಲ್ಲಿ ದಾವೆ ಹೂಡಲಿದ್ದಾರೆ. ಹನುಮಂತನ ಹೆಸರಿನಲ್ಲಿ ಭಜರಂಗಸೇನೆ ರಾಜ್ಯಾಧ್ಯಕ್ಷ ಬಿ. ಮಂಜುನಾಥ್ ಹನುಮ ಭಕ್ತರೊಡಗೂಡನೆ ನ್ಯಾಯಾಲಯದಲ್ಲಿ ದಾವೆ ಹೂಡಲಿದ್ದಾರೆ. ಅದಕ್ಕಾಗಿ ಎಲ್ಲ 108 ಭಕ್ತರ ಆದಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಕೆಲ ದಿನಗಳಿಂದ ನಡೆಸುತ್ತಿದ್ದು, ಇದೀಗ ಪೂರ್ಣ ಹಂತಕ್ಕೆ ಬಂದಿದೆ. ಗುರುವಾರ ವಕೀಲ ರವಿಶಂಕರ್ ಅವರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ಧತೆ ನಡೆಸಿಲಾಗಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.

ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ
108 ಹನುಮ ಭಕ್ತರು ಮಂಜುನಾಥ್ ಅವರಿಗೆ ಸಂಪೂರ್ಣ ಜವಾಬ್ದಾರಿಯನ್ನು ನೀಡಿದ್ದು, ನ್ಯಾಯಾಲಯದ ಪ್ರಕರಣದಲ್ಲಿ ವಿಚಾರಣೆ ವೇಳೆ ಹಾಜರಿರಲು ಸಹಮತ ವ್ಯಕ್ತಪಡಿಸಿದ್ದಾರೆ. ಅದರಂತೆ ವಕೀಲರು ಸಹ ದಾವೆ ಸಲ್ಲಿಸಲು ಸಿದ್ಧತೆ ನಡೆಸಿದ್ದು, ನ್ಯಾಯಾಲಯಕ್ಕೆ ಒಂದೆರಡು ದಿನಗಳಲ್ಲಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದ ಟಿಪ್ಪು
ಶ್ರೀರಂಗಪಟ್ಟಣದಲ್ಲಿ ಆಡಳಿತ ನಡೆಸುತ್ತಿದ್ದ ಟಿಪ್ಪು 1784ರಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಾಲಯವನ್ನು ಕೆಡವಿ ಮಸೀದಿಯನ್ನಾಗಿ ಪರಿವರ್ತಿಸಿದ್ದ. ಅದರ ಮೇಲೆ ಎರಡು ಗೋಪುರ (ವಾಚ್ ಟವರ್‌ಗಳನ್ನು) ನಿರ್ಮಿಸಿದ್ದ ಎಂದು ಹೇಳಲಾಗಿದೆ. ಆಂಜನೇಯಸ್ವಾಮಿ ಮೂಲ ವಿಗ್ರಹವನ್ನು ಕಾವೇರಿ ಹೊಳೆಗೆ ಬಿಸಾಡಿದ್ದ ಎಂದು ಹೇಳಲಾಗಿದ್ದು, ಹೊಳೆಯಲ್ಲಿ ಬಿದ್ದಿದ್ದ ಮೂಲ ವಿಗ್ರಹವನ್ನು ಹಿಂದೂಗಳು ತೆಗೆದುಕೊಂಡು ಪಟ್ಟಣದ ಪೇಟೆ ಬೀದಿಯಲ್ಲಿ ಗುಡಿ ನಿರ್ಮಿಸಿ ಪ್ರತಿಷ್ಠಾಪಿಸಿದ್ದರು. ಇಂದಿಗೂ ಅದು ಪೇಟೆ ಬೀದಿಯಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇಗುಲ ಎಂದು ಕರೆಯಲ್ಪಡುತ್ತಿದೆ.

ನ್ಯಾಯಾಲಯದ ಅಂಗಳಕ್ಕೆ ವಿವಾದ
ಕಳೆದ ಕೆಲ ವರ್ಷಗಳಿಂದ ಜಾಮೀಯಾ ಮಸೀದಿಯನ್ನು ಮತ್ತೆ ಮಂದಿರವನ್ನಾಗಿ ಪರಿವರ್ತಿಸಲು ಹಿಂದೂ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಸರಕಾರ ಇದಕ್ಕೆ ಸೊಪ್ಪು ಹಾಕುತ್ತಿಲ್ಲ . ಇದರಿಂದ ಆಕ್ರೋಶಗೊಂಡ ಹೋರಾಟಗಾರರು ಭಾರೀ ಪ್ರತಿಭಟನೆಗಳನ್ನು ನಡೆಸಿ ಸರಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದರು. ಸರಕಾರ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಈ ವಿವಾದ ನ್ಯಾಯಾಲಯದ ಅಂಗಳಕ್ಕೆ ಬಂದು ನಿಲ್ಲುವಂತಾಗಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.

ಸಾಕ್ಷಿಗಳ ಸಮೇತ ಹೈಕೋರ್ಟ್‌ಗೆ ದಾವೆ
ಮೈಸೂರು ಗೆಜೆಟಿಯರ್, ಮಸೀದಿಯಲ್ಲಿನ ಹಿಂದೂ ವಾಸ್ತುಶಿಲ್ಪ, ಮೂರ್ತಿ ಕೆತ್ತನೆ, ಕಂಬಗಳ ಮೇಲಿನ ದೇವರ ಚಿತ್ರಕಲೆ, ಕಲ್ಯಾಣಿ ಸೇರಿದಂತೆ ಕೆಲ ಬ್ರಿಟಿಷ್ ಅಕಾರಿಗಳು ಉಲ್ಲೇಖಿಸಿರುವ ದಾಖಲೆಗಳ ಸಂಗ್ರಹ ಮಾಡಲಾಗಿದೆ. ಎರಡು-ಮೂರು ದಿನಗಳಲ್ಲಿ ದಾಖಲೆ ಹಾಗೂ ಸಾಕ್ಷಿಗಳ ಸಮೇತ ಹೈಕೋರ್ಟ್‌ಗೆ ದಾವೆ ಹೂಡಲು 108 ಹನುಮ ಭಕ್ತರು ಸಿದ್ಧರಾಗಿದ್ದು, ಹನುಮ ಮಂದಿರ ಕೆಡವಿ ಟಿಪ್ಪು ಮಸೀದಿ ಕಟ್ಟಿರುವುದಾಗಿ ಆರೋಪಿಸಿ ಈ ನ್ಯಾಯಾಂಗ ಹೋರಾಟ ನಡೆಯಲಿದೆ ಎಂದು ಮಂಜುನಾಥ್ ತಿಳಿಸಿದ್ದಾರೆ.