ಮಂಡ್ಯ: ಬೆಟ್ಟಿಂಗ್ ಕಟ್ಟುವವರೂ ಹೆಚ್ಚಾದ್ರು, ಆಯ್ಕೆಯೂ ಬೇರೆಯಾಯ್ತು
Recommended Video
ಬೆಂಗಳೂರು ,ಮೇ 21: ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಪೈಕಿ ಮಂಡ್ಯ ಫಲಿತಾಂಶದ ಬಗ್ಗೆ ಎಲ್ಲರಲ್ಲೂ ಸಾಕಷ್ಟು ಕುತೂಹಲವಿದೆ.
ಈಗ ಎಕ್ಸಿಟ್ ಪೋಲ್ ಫಲಿತಾಂಶ ಬಂದ ಬಳಿಕ ಸುಮಲತಾ ಗೆಲ್ಲುವುದು ಬಹುತೇಕ ಖಚಿತ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ನಿಖಿಲ್ ಕುಮಾರಸ್ವಾಮಿ ಗೆಲುವಿನ ಕುರಿತು ಬೆಟ್ಟಿಂಗ್ ಕಟ್ಟಿದವರೆಲ್ಲಾ ಸುಮಲತಾ ಪರವಾಗಿ ಬೆಟ್ಟಿಂಗ್ ಕಟ್ಟಲು ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಮೈತ್ರಿ ಪಕ್ಷದ ಸಚಿವರು, ಕಾಂಗ್ರೆಸ್, ಜೆಡಿಎಸ್ ಮುಖಂಡರೆಲ್ಲಾ ನಿಖಿಲ್ ಕುಮಾರಸ್ವಾಮಿಯೇ ಗೆಲ್ಲುತ್ತಾರೆ, ಈ ಸಮೀಕ್ಷೆಗಳೆಲ್ಲಾ ಸುಳ್ಳು, ಇದು ಎಕ್ಸಿಟ್ ಪೋಲ್, ಎಕ್ಸ್ಯಾಕ್ಟ್ ಪೋಲ್ ಎಲ್ಲ ಎನ್ನುವುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಹೇಳಿದ್ದರು. ಇದೀಗ ಎಕ್ಸಿಟ್ ಪೋಲ್ ಬಂದ ಬಳಿಕ ಮಂಡ್ಯದಲ್ಲಿ ಬೆಟ್ಟಿಂಗ್ ಕಟ್ಟುವವರ ಸಂಖ್ಯೆಯೂ ಕೂಡ ಹೆಚ್ಚಾಗಿದೆ.

ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಕಾರ್ಯಕರ್ತರು ಬೆಟ್ಟಿಂಗ್
ಜೆಡಿಎಸ್ ಅಭ್ಯರ್ಥಿ ನಿಖಿಲ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರವಾಗಿ ಈ ಕ್ಷೇತ್ರದಲ್ಲಿ ನೇರಾ ಹಣಾಹಣಿ ಏರ್ಪಟ್ಟಿದ್ದರಿಂದ ಬೆಟ್ಟಿಂಗ್ ಕೂಡಾ ಜೋರಾಗಿ ನಡೆಯುತ್ತಿದೆ. ಚುನಾವಣೆ ನಂತರ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಅಭಿಮಾನಿಗಳು, ಕಾರ್ಯಕರ್ತರು ಬೆಟ್ಟಿಂಗ್ ನಡೆಸುತ್ತಿದ್ದಾರೆ.

3ರಿಂದ 30 ಲಕ್ಷದವರೆಗೂ ಬೆಟ್ಟಿಂಗ್
ಚುನಾವಣೋತ್ತರ ಸಮೀಕ್ಷೆ ನಂತರ ಬೆಟ್ಟಿಂಗ್ ನಲ್ಲೂ ಬದಲಾವಣೆಯಾಗಿದೆ. ಚುನಾವಣೆ ನಂತರ 3 ಸಾವಿರದಿಂದ 30 ಲಕ್ಷದವರೆಗೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಕೆಲವರು ತಮ್ಮ ಕೃಷಿ ಭೂಮಿ, ಪ್ಲಾಟ್, ಮನೆ, ದ್ವಿಚಕ್ರವಾಹನ, ಕಾರುಗಳ ಮೇಲೆಯೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ಬೆಟ್ಟಿಂಗ್ ಕಟ್ಟದಂತೆ ಸುಮಲತಾ ಮನವಿ
ಬೆಟ್ಟಿಂಗ್ ಮಾಡದಂತೆ ಸುಮಲತಾ ಅಂಬರೀಷ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಆದರೂ , ಬೆಟ್ಟಿಂಗ್ ಮಾತ್ರ ನಿಂತಿಲ್ಲ . ತಮ್ಮ ನೆಚ್ಚಿನ ನಾಯಕರ ಗೆಲುವಿಗಾಗಿ ಪ್ರಾರ್ಥಿಸಿ ಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯಲ್ಲೂ ಬದಲಾವಣೆ
ಚುನಾವಣೆ ಸಂದರ್ಭದಲ್ಲಿ ಆರಂಭದಲ್ಲಿ ಕೆಲವರು ಸುಮಲತಾ ಪರ 1 ಲಕ್ಷ ಕಟ್ಟುತ್ತಿದ್ದರೆ ನಿಖಿಲ್ ಪರ 80, 70 ಸಾವಿರ ಕಟ್ಟುತ್ತಿದ್ದರು. ಈಗ ಬೆಟ್ಟಿಂಗ್ ನಲ್ಲೂ ಬದಲಾವಣೆಯಾಗಿದೆ. ಸುಮಲತಾ ಪರ 1 ಲಕ್ಷ ಕಟ್ಟಿದ್ದರೆ, ನಿಖಿಲ್ ಪರವಾಗಿ 1 ಲಕ್ಷ ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ಸುಮಲತಾ ಗೆಲುವಿಗಾಗಿ ಪೂಜೆ
ಶ್ರೀರಂಗಪಟ್ಟದಲ್ಲಿ ಸೋಮವಾರ ಸುಮಲತಾ ಪರ ಅಭಿಮಾನಿಗಳು ಪೂಜೆ ಸಲ್ಲಿಸಿದ್ದರು. ಇಂದು ನಿಖಿಲ್ ಪರ ಅಭಿಮಾನಿಗಳು ಮದ್ದೂರಿನ ಉಕ್ಕಡ ಅಹಲ್ಯಾದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಮೇ 23ರಂದು ಈ ಬೆಟ್ಟಿಂಗ್, ಎಲ್ಲರ ಕುತೂಹಲ ಎಲ್ಲದಕ್ಕೂ ತೆರೆ ಬೀಳಲಿದೆ.












Click it and Unblock the Notifications