ಮಂಡ್ಯ: ಭಾರಿ ಮಳೆಗೆ ಬೆಂಗಳೂರು-ಮೈಸೂರು ರಸ್ತೆ ಮತ್ತೆ ಜಲಾವೃತ
ಬೆಂಗಳೂರು, ಅಕ್ಟೋಬರ್ 16: ಒಂದು ವಾರದಿಂದ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಮಂಡ್ಯ ಜಿಲ್ಲೆಯ ಬೂದನೂರು ಕೆರೆ ಉಕ್ಕಿಹರಿದಿದೆ. ಪರಿಣಾಮ ಆ ನೀರು ಶನಿವಾರ ಮಂಡ್ಯ ಪಟ್ಟಣಕ್ಕೆ ನುಗ್ಗಿ ಬೆಂಗಳೂರು-ಮೈಸೂರು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದಲ್ಲದೇ ಹಲವು ಅವಾಂತರ ಸೃಷ್ಟಿಸಿದೆ.
ಮಳೆಯಿಂದ ಬೆಂಗಳೂರು- ಮೈಸೂರು ರಸ್ತೆ ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಮಂಡ್ಯ ಪಟ್ಟಣದ ಜನವಸತಿ ಪ್ರದೇಶಕ್ಕೆ ನುಗ್ಗಿ ಕೆರೆ ನೀರಿನಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ತಗ್ಗು ಪ್ರದೇಶಗಳು, ಒಳ ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ.
ಮಂಡ್ಯ ಮೈಸೂರು ಭಾಗದಲ್ಲಿ ಶುಕ್ರವಾರ ತಡರಾತ್ರಿ ಭಾರಿ ಪ್ರಮಾಣದಲ್ಲಿ ಮಳೆ ಆಗಿದೆ. ಭಾರಿ ಮಳೆಗೆ ಕೆರೆ ಕೋಡಿ ಒಡೆದಿದೆ. ಇದರಿಂದ ನಿತ್ಯ ಸಾವಿರಾರು ವಾಹನಗಳು ಓಡಾಡುವ ಬೆಂಗಳೂರು-ಮೈಸೂರು ಹೆದ್ದಾರಿ ಅಕ್ಷರಶಃ ಹರಿವ ನದಿಯಂತಾಗಿ ಮಾರ್ಪಟ್ಟಿದೆ. ಅದರಲ್ಲಿ ಜನರು, ವಾಹನ ಸವಾರರಿಗೆ ಭಯದಿಂದ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಸೆಪ್ಟಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಾಗೂ ಕೆರೆಗಳು ಒಡೆದು ಇದೇ ಬೆಂಗಳೂರು ಮೈಸೂರು ರಸ್ತೆ, ಅಂಡರ್ ಪಾಸ್‌ಗಳು ದ್ವೀಪದಂತಾಗಿದ್ದವು. ರಾಮನಗರ, ಚೆನ್ನಪಟ್ಟಣ ಜನ ತತ್ತರಿಸಿದ್ದರು. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದು ತಿಂಗಳಾಗುವಷ್ಟರಲ್ಲಿ ಮತ್ತೆ ಬೂದನೂರು ಕೆರೆಯ ನೀರು ತುಂಬಿ ಹರಿದು ಪಟ್ಟಣಗದಲ್ಲಿ ಸಾಕಷ್ಟು ಅನಾಹುತಗಳಿಗೆ ಸಾಕ್ಷಿಯಾಗಲಿದೆ.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿ
ಬೂದನೂರು ಕೆರೆ ಸುತ್ತಮುತ್ತಲಿನ ಪ್ರದೇಶಗಳಾದ ಬೀಡಿ ಕಾಲೋನಿ, ವಿವೇಕಾನಂದ ಬಡಾವಣೆ, ಕೆರೆಯಂಗಳ ಸೇರಿದಂತೆ ಪ್ರವಾಹ ಪ್ರದೇಶಗಳಿಗೆ ಅಬಕಾರಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಳೆಹಾನಿ ಕುರಿತು ಅಧಿಕಾರಿಗಳಿಗೆ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಗ್ರಾಮಕ್ಕೆ ನುಗ್ಗುತ್ತಿರುವ ಪ್ರವಾಹವನ್ನು ನಿಯಂತ್ರಿಸಲು ಮತ್ತು ನೀರಿನ ಹರಿವನ್ನು ತಡೆಯಲು ಸೂಕ್ತ ಪರಿಹಾರ ಕ್ರಮ ಕಂಡುಕೊಳ್ಳುವಂತೆ ಅವರು ಸೂಚಿಸಿದರು.

ನೀರಾವರಿ ಇಲಾಖೆಗೆ ನೋಟಿಸ್
ಜೊತೆಗೆ ಸ್ಥಳೀಯರ ಸಾರ್ವಜನಿಕರ ಹಾಲಿ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿದರಲ್ಲದೇ ಪರಿಹಾರದ ಭರವಸೆ ನೀಡಿದರು. ರಾಮನಗರ, ಚನ್ನಪಟ್ಟಣ ಭಾಗದಲ್ಲಿ ಕಳೆದ ಬಾರಿ ಹಾಗೂ ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ. ಈ ಭಾಗದ ಪ್ರದೇಶಗಳಲ್ಲಲೇ ಹೀಗೆ ಎರಡನೇ ಬಾರಿ ಹೀಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಪಾರ ನಷ್ಟ ಉಂಟಾಗುತ್ತಿದ್ದು, ಜನರು ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಕೆ.ಗೋಪಾಲಯ್ಯ ಅವರು ರಾಜ್ಯ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೈಸೂರಿಗೆ ಮದ್ದೂರು, ಮಳವಳ್ಳಿ ಮೂಲಕ ಸಾಗಿ
ಬೂದನೂರು ಕೆರೆಯ ನೀರು ನುಗ್ಗಿದ ಹಿನ್ನೆಲೆ ಹೆದ್ದಾರಿ ಜಲಾವೃತಗೊಂಡಿದ್ದರಿಂದ ಸಾರ್ವಜನಿಕರ ಸುರಕ್ಷಿತ ದೃಷ್ಟಿಯಿಂದ ಬೆಂಗಳೂರಿನಿಂದ ಮೈಸೂರು ಹಾಲಿ ಮಾರ್ಗದ ಸಂಚಾರವನ್ನು ಬದಲಿಸಬೇಕಿದೆ. ಮುಂದಿನ ಆದೇಶದವರೆಗೆ ಸವಾರರು ಮತ್ತು ಪ್ರಯಾಣಿಕರು ಮದ್ದೂರು, ಮಳವಳ್ಳಿ ಮೂಲಕವಾಗಿ ಮೈಸೂರು ತಲುಪುವಂತೆ ಮಾರ್ಗ ಬದಲಿಸಿ ಸರ್ಕಾರ ಆದೇಶಿಸಿದೆ.

ಭತ್ತ, ಕಬ್ಬು ಬೆಳೆ ಹಾನಿ
ಪಟ್ಟಣಕ್ಕೆ ಕೆರೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದ್ದಲ್ಲೇ ಇತ್ತೀಚೆಗಷ್ಟೇ ನಾಟಿ ಮಾಡಿದ್ದ ಭತ್ತದ ಬೆಳೆ ಹಾಗೂ ಕಟಾವಿಗೆ ಬರಬೇಕಿದ್ದ ಸಾಕಷ್ಟು ಪ್ರಮಾಣದ ಕಬ್ಬು ಬೆಳೆ ನಾಶವಾಗಿದೆ. ಇದು ರೈತರ ಆರ್ಥಿಕತೆಯ ಮೇಲೆ ದಷ್ಪರಿಣಾಮ ಬೀರಲಿದೆ. ಇನ್ನೂ ಜಿಲ್ಲೆಯ ಸರ್.ಎಂ.ವಿಶ್ವೇಶ್ವರಯ್ಯ ಮೈದಾನಕ್ಕೂ ಕೆರೆ ನೀರು ನುಗ್ಗಿ ಇಡೀ ಕ್ರೀಡಾಂಗಣವೇ ಜಲಾವೃತಗೊಂಡಿದ್ದು, ಕಾಲಿಡದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಪಕ್ಕದ ರೇಷ್ಮೆನಾಡು ರಾಮನಗರ ಮತ್ತು ಬೊಂಬೆನಾಡು ಚನ್ನಪಟ್ಟಣದಲ್ಲೂ ಮಳೆ ಆವಾಂತರ ಸೃಷ್ಟಿಯಾಗಿದೆ. ಕಣ್ವ ಜಲಾಶಯ ಹಾಗೂ ಮಂಚನಬೆಲೆ ಜಲಾಶಯ ತುಂಬಿಕೊಂಡಿದೆ. ನದಿ ಪಾತ್ರ ಜನರಲ್ಲಿ ಆತಂಕ ಸೃಷ್ಟಿಸಿದೆ.
ಸಾಲದೆಂಬಂತೆ ಭಾರತೀಯ ಹವಾಮಾನ ಇಲಾಖೆ ಮುಂದಿನ ನಾಲ್ಕೈದು ದಿನ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆ ಮುಂದುವರಿಯುವುದಾಗಿ ನೀಡಿರುವ ಮುನ್ಸೂಚನೆಯೂ ಮಂಡ್ಯ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪಟ್ಟಣಗಳ ಜನರ ನಿದ್ದೆಗೆಡಿಸಿದೆ. ಇನ್ನೇನು ಎರಡು ದಿನಗಳಲ್ಲಿ ನೆರೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications